ಧಾರವಾಡ

ಈ ಬಾರಿ ಧಾರವಾಡದಲ್ಲಿ ಚಲನಚಿತ್ರ ಪ್ರಶಸ್ತಿ ಪ್ರದಾನ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 1
ಪ್ರಸಕ್ತ 2012-13ನೇ ಸಾಲಿನ ಕನ್ನಡ ಚಲನಚಿತ್ರ ಪ್ರಶಸ್ತಿ ವಿತರಣಾ ಸಮಾರಂಭ ಇದೇ ಮೊದಲ ಬಾರಿಗೆ ಧಾರವಾಡದಲ್ಲಿ ನಡೆಯಲಿದೆ.
ಬಹುತೇಕ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದ ಈ ಪ್ರಶಸ್ತಿ ವಿತರಣಾ ಸಮಾರಂಭ, ರಾಜಧಾನಿ ಹೊರತುಪಡಿಸಿ ಬೇರೆಡೆ ನಡೆದಿರುವ ಉದಾಹರಣೆ ಬೆರಳೆಣಿಕೆಯಷ್ಟು ಮಾತ್ರ.
ಕನ್ನಡ ಚಲನಚಿತ್ರ ಪ್ರಶಸ್ತಿ ವಿತರಣಾ ಸಮಾರಂಭವನ್ನು (ಕನ್ನಡ ಫಿಲ್ಮ್ ಅವಾರ್ಡ್ ಫಂಕ್ಷನ್) ಫೆಬ್ರವರಿಯಲ್ಲಿ ನಡೆಸಲು ರಾಜ್ಯ ವಾರ್ತಾ ಇಲಾಖೆ ನಿರ್ಧರಿಸಿದೆ. ಸಮಾರಂಭ ನಡೆಯುವ ಸ್ಥಳ, ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಸಮಾರಂಭಕ್ಕೆ ಯೋಗ್ಯವಾದ ಸ್ಥಳ, ದಿನಾಂಕದ ಜೊತೆಗೆ ಅತಿಥಿಗಳು ತಂಗುವ ಸ್ಥಳ, ಪಾರ್ಕಿಂಗ್ ವ್ಯವಸ್ಥೆ, ಪೊಲೀಸ್ ಭದ್ರತೆ ಮತ್ತಿತರ ಸಂಗತಿ ಅಂತಿಮಗೊಳ್ಳಬೇಕಿವೆ.
ಸ್ಯಾಂಡಲ್‌ವುಡ್‌ನ ನಟ-ನಟಿಯರು, ನಿರ್ಮಾಪಕ-ನಿರ್ದೇಶಕರು, ತಂತ್ರಜ್ಞರೊಂದಿಗೆ ರಾಜಕೀಯ, ಸಾಹಿತ್ಯ ಕ್ಷೇತ್ರದ ಗಣ್ಯರೂ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಶಸ್ತಿ ವಿತರಣೆ ಜೊತೆಗೆ ಕಲಾವಿದರಿಂದ ನೃತ್ಯ ಹಾಗೂ ಮತ್ತಿತರ ಕಾರ್ಯಕ್ರಮಗಳೂ ನಡೆಯುವುದರಿಂದ ಆಕರ್ಷಕ ವೇದಿಕೆ ನಿರ್ಮಿಸುವ ಕಾರ್ಯ ಜನವರಿ ಕೊನೆಯ ಅಥವಾ ಫೆಬ್ರವರಿಯ ಮೊದಲ ವಾರದಿಂದ ಪ್ರಾರಂಭಗೊಳ್ಳಲಿದೆ.
ಈ ಎಲ್ಲ ವಿಷಯಗಳನ್ನು ಜಿಲ್ಲಾಧಿಕಾರಿ ಹಾಗೂ ಇತರ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲು ರಾಜ್ಯ ವಾರ್ತಾ ಇಲಾಖೆ ಆಯುಕ್ತರೂ ಆಗಿರುವ ನಿರ್ದೇಶಕ ಎನ್.ಆರ್. ವಿಶ್ವಕುಮಾರ ಅವರು ಮುಂದಿನ ವಾರ ಧಾರವಾಡಕ್ಕೆ ಆಗಮಿಸಲಿದ್ದಾರೆ.
ಸಂತೋಷ್ ಲಾಡ್ ಅವರು ಈ ಹಿಂದೆ ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ ತಾವು ಉಸ್ತುವಾರಿ ವಹಿಸಿದ್ದ ಧಾರವಾಡ ಜಿಲ್ಲೆಯಲ್ಲಿ ಕನ್ನಡ ಚಲನಚಿತ್ರ ಪ್ರಶಸ್ತಿ ವಿತರಣಾ ಸಮಾರಂಭ ನಡೆಸುವ ಕುರಿತು ಆಸಕ್ತಿ ಹೊಂದಿದ್ದರು. ಈ ಕುರಿತು ವಾರ್ತಾ ಇಲಾಖೆ ಆಯುಕ್ತ ಹಾಗೂ ನಿರ್ದೇಶಕ ಎನ್.ಆರ್. ವಿಶ್ವಕುಮಾರ ಅವರೊಂದಿಗೂ ಚರ್ಚೆ ನಡೆಸಿದ್ದರು.
ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಸಂತೋಷ್ ಲಾಡ್ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಧಾರವಾಡದಲ್ಲಿ ನಡೆಸಲುದ್ದೇಶಿಸಿದ್ದ ಕನ್ನಡ ಚಲನಚಿತ್ರ ಪ್ರಶಸ್ತಿ ವಿತರಣಾ ಸಮಾರಂಭ ರದ್ದಾಗುವುದೆಂದೇ ಭಾವಿಸಲಾಗಿತ್ತು. ಆದರೆ ಈ ಮೊದಲೇ ಧಾರವಾಡದಲ್ಲಿ ಈ ಸಮಾರಂಭ ನಡೆಸುವ ಕುರಿತು ಮಾತುಕತೆ ನಡೆದಿದ್ದರಿಂದ ವಾರ್ತಾ ಇಲಾಖೆ ಆಯುಕ್ತ ವಿಶ್ವಕುಮಾರ ಅವರು ಧಾರವಾಡದಲ್ಲಿಯೇ ಸಮಾರಂಭ ಆಯೋಜಿಸುವ ಆಸಕ್ತಿ ತಾಳಿದ್ದಾರೆ.
ಈ ಕುರಿತು ಇಲಾಖೆಯ ಇತರ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚೆ ನಡೆದಿದ್ದು, ಧಾರವಾಡದಲ್ಲಿ ಸಮಾರಂಭ ನಡೆಯುವುದು ಖಚಿತವೆಂದು ಮೂಲಗಳು ತಿಳಿಸಿವೆ.
2012-13ನೇ ಸಾಲಿನ ಉತ್ತಮ ನಟ-ನಟಿ, ಉತ್ತಮ ಚಿತ್ರಕಥೆ, ಅತ್ಯುತ್ತಮ ನಿರ್ದೇಶಕ, ಉತ್ತಮ ಚಲನ ಚಿತ್ರ ಮತ್ತಿತರ ಚಿತ್ರರಂಗದ ಪ್ರಶಸ್ತಿಗಳು ಧಾರವಾಡದಲ್ಲಿ ನಡೆಯಲಿರುವುದರಿಂದ ಚಿತ್ರ ರಂಗದ ತಾರೆಗಳನ್ನು ಸಮೀಪದಿಂದ ನೋಡುವ ಸೌಭಾಗ್ಯ ಇಲ್ಲಿಯ ಚಿತ್ರ ಪ್ರೇಮಿಗಳಿಗೆ ಒದಗಿಬರಲಿದೆ.
-ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.