ಧಾರವಾಡ

ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಅಸ್ವಸ್ಥ!

Published On :

ಕನ್ನಡಪ್ರಭ ವಾರ್ತೆ ಉಪ್ಪಿನ ಬೆಟಗೇರಿ ಜ. 2
ಆರೋಗ್ಯ ಭಾಗ್ಯ ಕಲ್ಪಿಸಬೇಕಾದ ಧಾರವಾಡ ತಾಲೂಕಿನ ಗರಗ ಮತ್ತು ಉಪ್ಪಿನ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅನಾರೋಗ್ಯದಿಂದ ಬಳಲುತ್ತಿವೆ.
ಈ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಶುದ್ಧ ಕುಡಿಯುವ ನೀರಿಲ್ಲ. ಶೌಚಾಲಯ ಇಲ್ಲ. ವ್ಯವಸ್ಥಿತ ಕಟ್ಟಡ ಇಲ್ಲ. ಹೀಗೆ ಇಲ್ಲಗಳ ಸರಮಾಲೆ ಹೊದ್ದಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಸುತ್ತಲಿನ ಗ್ರಾಮಸ್ಥರು ಆರೋಗ್ಯ ಭಾಗ್ಯ ನಿರೀಕ್ಷಿಸುತ್ತಿದ್ದಾರೆ.
ಹದಿನಾಲ್ಕು ಹಳ್ಳಿಗಳ ಸುಮಾರು 40 ಸಾವಿರಕ್ಕೂ ಅಧಿಕ ಜನರ ಸ್ವಾಸ್ಥ್ಯ ಕಾಪಾಡಬೇಕಿರುವ ಉಪ್ಪಿನ ಬೆಟಗೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಮತ್ತು ಸಿಬ್ಬಂದಿಯ ಕೊರತೆ ಮುಖ್ಯವಾಗಿ ಕಾಡುತ್ತಿದೆ. ಆರೋಗ್ಯ ಕೇಂದ್ರದಲ್ಲಿ ಸದ್ಯ ಸೇವೆ ಸಲ್ಲಿಸುತ್ತಿರು. ಸಿಬ್ಬಂದಿಗೂ ಇಲ್ಲಿ ಸೂಕ್ತ ವಸತಿ ವ್ಯವಸ್ಥೆ ಇಲ್ಲ. ಆರೋಗ್ಯ ಇಲಾಖೆ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಖಾಲಿ ಬಿದ್ದಿರುವ ವಸತಿಗೃಹಗಳ ಕಿಟಕಿ, ಬಾಗಿಲು ಮತ್ತು ಹೆಂಚುಗಳು ಈಗಾಗಲೇ ಜನರ ಪಾಲಾಗಿವೆ. ಕತ್ತಲಾಗುತ್ತಿದ್ದಂತೆ  ಆಸ್ಪತ್ರೆಯ ಆವರಣ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಡುತ್ತಿದೆ ಎಂದು ಹೊರ ರೋಗಿಗಳು ಹೇಳುತ್ತಾರೆ.
ಕೋಣೆಗಳಿಗೆ ನೀರು:  ಕಾಂಪೌಂಡ್‌ಗೆ ಹೊಂದಿಕೊಂಡಂತೆ ಜನರು ಬಟ್ಟೆ, ಪಾತ್ರೆ ಮತ್ತು ಜಾನುವಾರುಗಳನ್ನು ತೊಳೆಯುತ್ತಿರುವುದರಿಂದ ತ್ಯಾಜ್ಯ ನೀರು ಆರೋಗ್ಯ ಕೇಂದ್ರದ ಒಳಗೆ ಬರುತ್ತಿದ್ದು, ತ್ಯಾಜ್ಯ ನೀರು ದುರ್ವಾಸನೆ ಬೀರುತ್ತಿರುವುದರಿಂದ ರೋಗಿಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಮಳೆಗಾಲದಲ್ಲಿ ನೀರು ಪ್ರಾಥಮಿಕ ಆರೋಗ್ಯದ ಕೇಂದ್ರದ ಒಳಗೆ ನುಗ್ಗುವುದರಿಂದ ಶೌಚಾಲಯಗಳ ಸೆಪ್ಟಿಕ್ ಟ್ಯಾಂಕ್‌ಗಳು ತುಂಬಿ, ಮಲಿನ ಒಳಚರಂಡಿ ನೀರು ರೋಗಿಗಳ ಕೊಣೆಗಳಿಗೆ ನುಗ್ಗುತ್ತದೆ.

ಸೊರಗಿದ ಗರಗ ಪಿಎಚ್‌ಸಿ
23 ಹಳ್ಳಿಗಳ ಸುಮಾರು 58 ಸಾವಿರ ಜನರಿಗೆ ಆರೋಗ್ಯ ಸೇವೆ ಕಲ್ಪಿಸಬೇಕಿದ್ದ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಹಲವು ಕಾಯಿಲೆಗಳಿಂದ ಸೊರಗಿದೆ. ನೀರಲಕಟ್ಟಿ, ಹಂಗರಕಿ, ಕೊಟಬಾಗಿ, ತಡಕೋಡ, ಮುಮ್ಮಿಗಟ್ಟಿ ಸೇರಿದಂತೆ ಒಂಭತ್ತು ಉಪ ಆರೋಗ್ಯ ಕೇಂದ್ರಗಳು ಈ ಆಸ್ಪತ್ರೆಯ ವ್ಯಾಪ್ತಿಯಡಿ ಕಾರ್ಯ ನಿರ್ವಹಿಸುತ್ತಿವೆ. ಆಪರೇಷನ್ ಥಿಯೇಟರ್ ಇದ್ದರೂ ಶಸ್ತ್ರ ಚಿಕಿತ್ಸಾ ತಜ್ಞರಿಲ್ಲ. ವೈದ್ಯಾಧಿಕಾರಿಗಳ ವಸತಿಗೃಹ ಭೂತ ಬಂಗಲೆಯಂತೆ ಬಿಕೋ ಎನ್ನುತ್ತಿದೆ. ಆಸ್ಪತ್ರೆಯ ಆವರಣ ಬಿಡಾಡಿ ದನಗಳ ದೊಡ್ಡಿಯಾಗಿದೆ. ಬಾಣಂತಿಯರಿಗೆ ಬಿಸಿ ನೀರೂ ಇಲ್ಲ. ಕುಡಿಯುವ ನೀರೂ ಇಲ್ಲ. ಮುಗದ, ಕೋಟುರ, ಗರಗ ಸೇರಿದಂತೆ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಒಬ್ಬರೇ ಎಂಬಿಬಿಎಸ್ ವೈದ್ಯರು ಉಸ್ತುವಾರಿ ನೋಡಿಕೊಳ್ಳಬೇಕಾಗಿರುವುದರಿಂದ ವಾರದಲ್ಲಿ ಎರಡು ದಿನ ಮಾತ್ರ ಒಂದು ಆರೋಗ್ಯ ಕೇಂದ್ರದಲ್ಲಿ ಇವರ ಸೇವೆ ಲಭ್ಯವಾಗುತ್ತಿದೆ. ಉಪ್ಪಿನ ಬೆಟಗೇರಿ ಮತ್ತು ಗರಗ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಆಯುಷ್ ವೈದ್ಯರಿದ್ದು, ದಿನಕ್ಕೆ 50 ರಿಂದ 70 ರೋಗಿಗಳ ತಪಾಸಣೆ ಮತ್ತು ಚಿಕಿತ್ಸೆ ನೀಡುತ್ತಾರೆ.
-ಪ್ರಕಾಶ ಹೂಗಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.