ಧಾರವಾಡ

ವಲಸಿಗ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 5
ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿನ ದೌರ್ಜನ್ಯದಿಂದ ಬೇಸತ್ತು ಭಾರತಕ್ಕೆ ಬಂದಿರುವ ವಲಸಿಗ ಹಿಂದೂಗಳಿಗೆ ಭಾರತದ ನಾಗರಿಕತ್ವ ಮತ್ತು ಪುನರ್ವಸತಿ ಸೌಲಭ್ಯ ಒದಗಿಸಿಕೊಂಡುವಂತೆ ಆಗ್ರಹಿಸಿ ಶ್ರೀರಾಮಸೇನೆ ಹಾಗೂ ಹಿಂದು ಜನಜಾಗೃತಿ ಸಮಿತಿ ಕಾರ್ಯಕರ್ತರು ಭಾನುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪಾಕಿಸ್ತಾನದಲ್ಲಿ ವಾಸವಾಗಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಕಾರ್ಯಕರ್ತರು, ಚೆನ್ನಮ್ಮ ವರ್ತುಳದಲ್ಲಿ ಪಾಕಿಸ್ತಾನದ ಧ್ವಜ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಉಭಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ನಿರಂತರ ದೌರ್ಜನ್ಯಗಳಿಂದ ಜೀವ ಉಳಿಸಿಕೊಳ್ಳಲು ನಿರಾಶ್ರಿತರಾಗಿ ಭಾರತದಲ್ಲಿ ಹಿಂದೂಗಳು ಆಶ್ರಯ ಪಡೆಯುತ್ತಿದ್ದಾರೆ. ಪಾಕಿಸ್ತಾನದಿಂದ ಬಂದಿರುವ ಹಿಂದೂಗಳ ವೀಸಾ ಕಾಲಾವಧಿ ಮುಗಿದಿರುವುದರಿಂದ ಸರ್ಕಾರಿ ಆಡಳಿತ ಯಂತ್ರ ಅವರನ್ನು ಹೊರದಬ್ಬಲು ಯತ್ನಿಸುತ್ತಿದೆ ಎಂದೂ ಪ್ರತಿಭಟನಾನಿರತರು ದೂರಿದರು.
ಭಾರತ ಸರ್ಕಾರ ಶರಣಾರ್ಥಿ ಹಿಂದೂಗಳೊಂದಿಗೆ ಅಪರಾಧಿಯಂತೆ ವರ್ತಿಸುತ್ತಿದೆ. ಬಹುಸಂಖ್ಯಾತ ಭಾರತದಲ್ಲಿ ಹಿಂದೂ ನಿರಾಶ್ರಿತರ ಸ್ಥಿತಿ ಅತ್ಯಂತ ದಯನೀಯವಾಗಿದೆ. ಆದ್ದರಿಂದ ಭಾರತಕ್ಕೆ ಬಂದಿರುವ ಎಲ್ಲ ಹಿಂದೂ ಶರಣಾರ್ಥಿಗಳಿಗೆ ಭಾರತೀಯ ನಾಗರಿಕತ್ವ ನೀಡಬೇಕಲ್ಲದೆ, ಪುನರ್ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಲಾಯಿತು.
ಬಾಂಗ್ಲಾದೇಶದ ಮತಾಂಧ ನುಸುಳುಕೋರರಿಗೆ ಭೂಮಿ, ರೇಶನ್ ಕಾರ್ಡ್, ನೌಕರಿ ಎಲ್ಲವನ್ನು ಸರ್ಕಾರ ಒದಗಿಸಿಕೊಡುತ್ತಿದೆ. ಆದರೆ, ಪಾಕಿಸ್ತಾನದಿಂದ ಬಂದಿರುವ ಹಿಂದೂ ನಿರಾಶ್ರಿತರು ಮಾತ್ರ ಕೀಳು ಮಟ್ಟದ ಜೀವನ ನಡೆಸಬೇಕಾಗಿದೆ ಆತಂಕ ವ್ಯಕ್ತಪಡಿಸಿದರು.
ಆದ್ದರಿಂದ ಹಿಂದೂ ನಿರಾಶ್ರಿತರನ್ನು ಯಾವುದೇ ಕಾರಣಕ್ಕೂ ಒತ್ತಾಯಪೂರ್ವಕವಾಗಿ ಪಾಕಿಸ್ತಾನಕ್ಕೆ ಪುನಃ ಕಳುಹಿಸದೆ ಅವರ ಎಲ್ಲ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ನಿರಾಶ್ರಿತರ ಮಕ್ಕಳಿಗೆ ಶೈಕ್ಷಣಿಕ ಸೌಕರ್ಯ, ಉದ್ಯೋಗ ಮತ್ತು ಉಚಿತ ಮನೆ ಕಲ್ಪಿಸಬೇಕು ಎಂದೂ ಪ್ರತಿಭಟನಾನಿರತರು ಒತ್ತಾಯಿಸಿದರು.
ಸರ್ಕಾರ ಈ ನಿಟ್ಟಿನಲ್ಲಿ ತಕ್ಷಣ ಕಾರ್ಯತತ್ಪರವಾಗದಿದ್ದಲ್ಲಿ ಭಾರತದಲ್ಲಿ ವಲಸಿಗ ಪಾಕಿಸ್ತಾನಿಯರ ಮೇಲೆ ಪರಿಣಾಮ ಬೀರಬಹುದಾಗಿದ್ದು, ಇದಕ್ಕೆಲ್ಲ ಕೇಂದ್ರ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದೂ ಎಚ್ಚರಿಸಲಾಯಿತು.
ಗಣೇಶ ಕದಂ, ರಾಘವೇಂದ್ರ ಕಠಾರೆ, ವಿಜಯ, ಮಂಜು ಅಣ್ಣಪ್ಪ, ಸಿದ್ದು, ಚಂದ್ರು, ಕೃಷ್ಣಾ, ಹರೀಶ, ಚೇತನ, ಸಂತೋಷ ಬಿ. ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.