ಧಾರವಾಡ

ಯುವಕರಿಂದ ಭ್ರಷ್ಟಾಚಾರರಹಿತ ಸಮಾಜ ರಚನೆ ಸಾಧ್ಯ

Published On :

ಧಾರವಾಡ: ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣಕ್ಕೆ ಯುವಕರೇ ಶ್ರಮಿಸಬೇಕು. ಈ ಉದ್ದೇಶದ ಈಡೇರಿಕೆಗೆ ಈಗಾಗಲೇ 700ಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದೇನೆ. ವಿದ್ಯಾರ್ಥಿ ದೆಸೆಯಲ್ಲೇ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಶಕ್ತಿ ಅವರಿಗೆ ತುಂಬಬೇಕಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅಭಿಪ್ರಾಯಿಸಿದರು.
ಇಲ್ಲಿನ ಕೆ.ಇ. ಬೋರ್ಡ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಅಮೃತ ಮಹೋತ್ಸವ ಸಮಾರೋಪ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ನನ್ನೊಬ್ಬನಿಂದ ಏನು ಮಾಡಲು ಸಾಧ್ಯ ಎಂದುಕೊಳ್ಳಬಾರದು. ಸಾವಿರ ಮೈಲಿಯ ಪಯಣ ಮೊದಲ ಹೆಜ್ಜೆಯಿಂದ ಆರಂಭವಾಗುತ್ತದೆ ಎಂಬುದನ್ನು ಅರಿಯಿರಿ. ಹಾಗಾಗಿ ಯುವಕರೇ ಏಳಿ ಎದ್ದೇಳಿ, ಕ್ರಾಂತಿಗಲ್ಲ. ಭ್ರಷ್ಟಾಚಾರ ಸಹಿಸಿಕೊಳ್ಳದೇ ವಿರೋಧಿಸುವ ಪ್ರತಿಭಟನೆಗೆ ನೀವೆಲ್ಲಾ ಅಣಿಯಾಗಿ ಎಂದು ಸಂತೋಷ ಹೆಗಡೆ ಯುವಕರಿಗೆ ಸ್ಫೂರ್ತಿ ತುಂಬಿದರು.
ಆಡಳಿತದಲ್ಲಿನ ನ್ಯೂನತೆ, ದುರಾಡಳಿತ ಸರಿಪಡಿಸಲು ಲೋಕಾಯುಕ್ತರಿಂದ ಸಾಧ್ಯ. ನಾನು ಲೋಕಾಯುಕ್ತನಾದ ಬಳಿಕ ಸಾಮಾನ್ಯ ಜನತೆಗೆ ಎದುರಿಸುವ ಕಷ್ಟ, ಅನ್ಯಾಯ ಕಂಡೆ. ನಿವೃತ್ತನಾದ ಬಳಿಕ ಅಣ್ಣಾ ಹಜಾರೆ ಅವರೊಂದಿಗೆ ಭ್ರಷ್ಟಾಚಾರ ವಿರೋಧಿ ಚಳವಳಿಗೆ ಸೇರಿದೆ. ಲೋಕಪಾಲ ಸಂಸ್ಥೆ ಕಟ್ಟಲು ಹೋರಾಡಿದೆ ಎಂದ ಅವರು, ಭ್ರಷ್ಟಾಚಾರದ ಹಗರಣಗಳು ಕೇವಲ ರಾಜಕೀಯದಿಂದ ಮಾತ್ರ ಸಾಧ್ಯವಿಲ್ಲ. ಆಡಳಿತವೂ ಅಂದರೆ ಅಧಿಕಾರಿಗಳು ಸಹ ಕೈಜೋಡಿಸಿದಾಗ ನಡೆಯುತ್ತವೆ. ಬಹುಕೋಟಿ ಹಗರಣಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಯಾವ ಮಟ್ಟಕ್ಕೆ ಕುಸಿಯುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಈ ಮೂಲಕ ಭ್ರಷ್ಟಾಚಾರ ತಡೆಯಲು ಪ್ರಯತ್ನಿಸಬೇಕೆಂದು ಹೇಳಿದರು.
ಪ್ರಸ್ತುತ ಸರ್ಕಾರ ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ನಡೆಯುತ್ತಿರುವುದು ಶೋಚನೀಯ ಸಂಗತಿ. ಮನುಷ್ಯನಿಗೆ ಆಸೆ ಇರಬೇಕು. ದುರಾಸೆ ಮಟ್ಟಕ್ಕೆ ಹೋದಾಗ ಅದರಿಂದ ಕೇಡು ತಪ್ಪಿದ್ದಲ್ಲ. ದುರಾಸೆ ಎಂಬ ರೋಗಕ್ಕೆ ಬಲಿಯಾಗಿ ಸಂಪಾದಿಸುವುದು ಜೀವನದಲ್ಲಿ ಎಂದೂ ತೃಪ್ತಿ ತಂದುಕೊಡುವುದಿಲ್ಲ. ಸಮಾಜ ಇಂದು ಶ್ರೀಮಂತಿಕೆ ಹಾಗೂ ಅಂಧಕಾರವನ್ನು ಮಾತ್ರ ಪ್ರೀತಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಕಾನೂನು ಆಯೋಗದ ಅಧ್ಯಕ್ಷ, ನ್ಯಾ. ವಿ. ಎಸ್. ಮಳಿಮಠ, ಸ್ವಾತಂತ್ರ್ಯ ಹೋರಾಟಕ್ಕೆ ಭಾರತೀಯ ನಾರಿಯರು ತಮ್ಮ ಮಂಗಳಸೂತ್ರ ನೀಡಿದ ಇತಿಹಾಸ ನಮ್ಮದು. ಆದರೆ, ಇಂದು ಸತ್ಯ, ಅಹಿಂಸೆ ಕೊಲೆಯಾದ ಕರಾಳ ದಿನಚರಿಯೊಂದಿಗೆ ನಾವೆಲ್ಲ ಬದುಕುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದು. ಇದೇ ಸಂದರ್ಭದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳು ಹಾಗೂ ದಾನಿಗಳನ್ನು ನ್ಯಾಯಮೂರ್ತಿ ಸಂತೋಷ ಹೆಗಡೆ ಸನ್ಮಾನಿಸಿದರು. ಕೆ.ಇ. ಬೋರ್ಡ್ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಡಾ. ಕೆ.ಎಸ್. ಆಮೂರ ಸ್ವಾಗತಿಸಿದರು. ಕೆ.ಎಲ್. ಪಾಟೀಲ ಪರಿಚಯಿಸಿದರು. ಮಲ್ಲಿಕಾರ್ಜುನ ಚಿಕ್ಕಮಠ, ಶುಭಾಂಗಿ ಕಡಕೋಳ, ಅರುಣ ನಾಡಿಗೇರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.