ಸಾವಯವ ಗ್ರಾಮ ಸ್ಕೀಂಗೆ ಸಾಲುತ್ತಿಲ್ಲ ಅನುದಾನ
ಧಾರವಾಡ: ಸಾವಯವ ಕೃಷಿ ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿದ ಸಾವಯವ ಗ್ರಾಮ ಯೋಜನೆಗೆ ಪ್ರಸ್ತುತ ದೊರೆಯುತ್ತಿರುವ ಅನುದಾನ, ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ.
ಹೌದು... ರಾಜ್ಯ ಸರ್ಕಾರ ಸಾವಯವ ಗ್ರಾಮ ಯೋಜನೆಯಡಿ ಪ್ರತಿ ತಾಲೂಕಿಗೆ ವರ್ಷಕ್ಕೊಮ್ಮೆ ಕೇವಲ 5 ಲಕ್ಷ ಅನುದಾನ ನೀಡುತ್ತಿದೆ. ಈ ಕನಿಷ್ಠ ಅನುದಾನದಲ್ಲಿಯೇ ವರ್ಷಪೂರ್ತಿ ಆಯಾ ತಾಲೂಕಿನ ಒಂದು ಕಡೆ 100 ಹೆಕ್ಟೇರ್ ಪ್ರದೇಶವನ್ನು ಸಾವಯವ ಕೃಷಿಗೆ ಪರಿವರ್ತಿಸಬೇಕಿದೆ. ಯೋಜನೆಗೆ ಆಯ್ಕೆ ಮಾಡಲಾದ ವ್ಯಾಪ್ತಿಯಲ್ಲಿ ಬರುವ ರೈತರಿಗೆ ಸಾವಯವ ಕೃಷಿ ಅಳವಡಿಕೆಯ ಕುರಿತು ಮಾಹಿತಿ, ಗೊಬ್ಬರ, ಔಷಧಿ ಪೂರೈಸಿ ಸಾವಯವ ಕೃಷಿಗೆ ಪ್ರೋತ್ಸಾಹಿಸುವುದು ಈ ಯೋಜನೆ ಪ್ರಮುಖ ಉದ್ದೇಶ. ಆದರೆ, ಸರ್ಕಾರದ ಅನುದಾನ ಮಾತ್ರ ಎಳ್ಳಷ್ಟು ಸಾಲುತ್ತಿಲ್ಲ ಎನ್ನುವುದು ಯೋಜನೆ ಸಾಕಾರಗೊಳಿಸುತ್ತಿರುವ ಸರ್ಕಾರೇತರ ಸಂಸ್ಥೆಗಳ ವಾದ.
ಏನೇನು ಕೆಲಸ?: ಈ ಯೋಜನೆಯಲ್ಲಿ ಸಾವಯವ ಕೃಷಿ ತರಬೇತಿ, ಪ್ರಚಾರಕ್ಕಾಗಿ ಕರಪತ್ರ, ಗೋಡೆ ಬರಹ, ಕ್ಷೇತ್ರೋತ್ಸವ ಕಾರ್ಯಕ್ರಮ ಮಾಡಲಾಗುತ್ತದೆ. ಪೋಷಕಾಂಶಗಳ ನಿರ್ವಹಣೆಗಾಗಿ ಎರೆಹುಳು ತೊಟ್ಟಿ, ಕಾಂಪೋಸ್ಟ್ ಘಟಕ, ಗಂಜಲು ತೊಟ್ಟಿ, ದ್ರವರೂಪ ಸಾವಯವ ಗೊಬ್ಬರ ತಯಾರಿಕೆ, ಜೈವಿಕ ಎಣ್ಣೆ ಹಿಂಡಿ, ಗೊಬ್ಬರ, ದೇಶಿ ಬೀಜಗಳ ವಿತರಿಸಲಾಗುತ್ತದೆ. ಅಲ್ಲದೆ, ಸಾವಯವ ಕೃಷಿಗೆ ತಗಲುವ ಕೀಟ ಬಾಧೆಯನ್ನು ತಡೆಗಟ್ಟಲು ಸಾವಯವ ಗ್ರಾಮ ಯೋಜನೆಯಡಿಯಲ್ಲಿಯೇ ಜೈವಿಕ ಕೀಟನಾಶಕ, ಸಸ್ಯ ಆಧಾರಿತ ಕೀಟನಾಶಕ, ಟೈಕೋಗ್ರಾಮ್ ನೀಡಬೇಕಿದೆ. ಆದರೆ, ರಾಜ್ಯ ಸರ್ಕಾರ ಯೋಜನೆ ಸಾಕಾರಕ್ಕೆ ಕಾರ್ಯನಿರ್ವಹಿಸುತ್ತಿರುವ ಕೃಷಿ ಇಲಾಖೆ ಹಾಗೂ ಎನ್ಜಿಓಗಳು ಅನುದಾನ ಕಡಿಮೆಯಾಗಿದ್ದರಿಂದ ಸಮರ್ಪಕವಾಗಿ ರೈತರನ್ನು ತಲುಪಿಸಲಾಗುತ್ತಿಲ್ಲ. ಎನ್ಜಿಓಗಳು ಸರ್ಕಾರ ನೀಡುವ ರು. 5 ಲಕ್ಷ ಅನುದಾನದಲ್ಲಿ ಉದ್ದೇಶ ಈಡೇರಿಸಲಾಗುತ್ತಿಲ್ಲ. ಅಲ್ಲದೆ, ಸಾವಯವ ಕೃಷಿ ಮಾಡಲು ಬಯಸುವ ರೈತರಿಗೆ ಸೂಕ್ತ ಸ್ಪಂದನೆಯು ದೊರೆಯುತ್ತಿಲ್ಲ ಎಂಬುದು ಸೋಜಿಗದ ಸಂಗತಿ.
ಎನ್ಜಿಓಗಳಿಗೆ ಮೇಲುಸ್ತುವಾರಿ ವಹಿಸಿ ಕೃಷಿ ಇಲಾಖೆಯು ಸಾವಯವ ಗ್ರಾಮ ಯೋಜನೆ ಕುರಿತಂತೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರೇತರ ಸಂಸ್ಥೆಗಳು ಮಾಡುವ ಕೆಲಸದ ಕುರಿತು ಸರಿಯಾಗಿ ಮೇಲುಸ್ತುವಾರಿ ಆಗುತ್ತಿಲ್ಲ ಎಂಬ ಆರೋಪವು ಇಲಾಖೆ ಮೇಲಿದೆ. ಆದರೆ, ಪ್ರಮುಖವಾಗಿ ಈ ಯೋಜನೆಗೆ ನೀಡಲಾಗುತ್ತಿರುವ ಅನುದಾನ ತೀರಾ ಕಡಿಮೆಯಾಗಿದ್ದು, ಯೋಜನೆಗೆ ಹೇಳಿಕೊಳ್ಳುವಷ್ಟು ಸಾಫಲ್ಯತೆ ದೊರೆತಿಲ್ಲ. ಅಲ್ಲದೆ, ಸಾವಯವ ಕೃಷಿಯಲ್ಲಿ ಎನ್ಜಿಓಗಳು ಹೆಚ್ಚಿನ ಸಾಧನೆ ಅಪೇಕ್ಷಿಸದಂತಾಗಿದೆ.
ಸಾವಯವ ಗ್ರಾಮ ಯೋಜನೆಯಡಿ ಧಾರವಾಡ ಜಿಲ್ಲೆಯ ಐದು ತಾಲೂಕುಗಳಲ್ಲಿ 500 ಮಂದಿ ರೈತರು 500 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಧಾರವಾಡದಲ್ಲಿ ಹಳೇ ತೇಗೂರು, ಕುಂದಗೋಳದ ಬೆನಕಹಳ್ಳಿ, ಕಲಘಟಗಿಯ ಬಿಗುಡಿಹಾಳ ಹಾಗೂ ಹುಬ್ಬಳ್ಳಿಯ ಚೆನ್ನಾಪುರ ಹಾಗೂ ನವಲಗುಂದ ತಾಲೂಕಿನಲ್ಲಿ ಅಮರಗೋಳದ ತಲಾ 100 ಹೆಕ್ಟೆರ್ ಪ್ರದೇಶದಲ್ಲಿ ಸಾವಯವ ಕೃಷಿಯನ್ನು ವಿವಿಧ ಸರ್ಕಾರೇತರ ಸಂಸ್ಥೆಗಳಿಂದ ಮಾಡಿಸಲಾಗುತ್ತಿದೆ. ಎಲ್ಲದಕ್ಕೂ ಸರ್ಕಾರದ ಅನುದಾನ ನೆಚ್ಚದೇ ಅದರ ಅನುದಾನ ಜೊತೆಗೆ ರೈತರು ಸಹ ಉತ್ಸಾಹದಿಂದ ಈ ಯೋಜನೆಗೆ ಕೈಜೋಡಿಸಿದಾಗಲೇ ಸಾವಯವ ಕೃಷಿ ಕ್ಷೇತ್ರ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಹೊಸ ಪ್ರಯತ್ನಗಳು ನಡೆಯಬೇಕಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎಂ. ಗಡಾದ ಪತ್ರಿಕೆಗೆ ತಿಳಿಸಿದರು.
ಪ್ರಸ್ತುತ ರಾಸಾಯನಿಕ ಬಳಕೆಯಿಂದ ಕೃಷಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ರಾಸಾಯನಿಕ ಬಳಕೆಯಿಂದ ಹೊರ ಬಂದು ಸಾವಯವದತ್ತ ರೈತರು ಮುಂದಾಗುತ್ತಿದ್ದರೂ ಇಲಾಖೆಯಿಂದ ರಿಯಾಯ್ತಿ ದರದಲ್ಲಿ ದೊರೆಯುತ್ತಿರುವ ರಾಸಾಯನಿಕಗಳ ಪ್ರಭಾವ ಹಾಗೂ ಸಾಕಷ್ಟು ತಿಳಿವಳಿಕೆ ಕೊರತೆಯಿಂದ ರೈತರು ಅನಿವಾರ್ಯವಾಗಿ ರಾಸಾಯನಿಕ ಕೃಷಿಯನ್ನೇ ನೆಚ್ಚಿಕೊಳ್ಳಬೇಕಿದೆ. ಒಂದೆಡೆ ಸಾವಯವ ಕೃಷಿ ಪ್ರೋತ್ಸಾಹಿಸಲು ನಾನಾ ರೀತಿಯಲ್ಲಿ ಪ್ರಚಾರ ಮಾಡುವ ಸರ್ಕಾರ ಸಾವಯವ ಕೃಷಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ಲೋಪ-ದೋಷಗಳನ್ನು ಕಂಡುಹಿಡಿದು ಪರಿಹರಿಸಬೇಕಿದೆ ಎಂದು ಸಾವಯವ ಕೃಷಿ ತಜ್ಞರೊಬ್ಬರು ಪ್ರತಿಪಾದಿಸುತ್ತಾರೆ.
- ಕಲ್ಮೇಶ ಪಟ್ಟಣದವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

