ಧಾರವಾಡ

ಭಾಷಾ ವಿವಾದ: ಸರ್ಕಾರಕ್ಕೆ ಸಾಹಿತಿಗಳ ಸಲಹೆ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 7
ಪ್ರಾಥಮಿಕ ಶಾಲಾ ಹಂತದಲ್ಲಿ ಮಾತೃಭಾಷೆ ಅಥವಾ ಕನ್ನಡ ಭಾಷೆ ಶಿಕ್ಷಣ ಮಾಧ್ಯಮವಾಗಿರಬೇಕೆಂಬ ರಾಜ್ಯ ಸರ್ಕಾರದ ಆದೇಶದ ವಿವಾದ ಜ. 21ರಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೊಳಲಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಹಿರಿಯ ಸಾಹಿತಿಗಳು ಈ ಕುರಿತಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಾಹಿತಿಗಳು, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಪ್ರಬಲ ವಾದ ಮಂಡಿಸಿ, ಭಾಷಾ ನೀತಿ ರೂಪಣೆಯ ವಿಷಯವನ್ನು ಈ ಹಿಂದೆ ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿರುವಂತೆ ತನ್ನ ವ್ಯಾಪ್ತಿಗೆ ಪಡೆದುಕೊಂಡು, ಭಾಷೆಯ ಉಳಿವಿಗೆ ಎಲ್ಲ ಅಗತ್ಯ ಕ್ರಮಗಳನ್ನು ಜರುಗಿಸಬೇಕು. ಸ್ವಾತಂತ್ರ್ಯ ನಂತರವೂ ರಾಷ್ಟ್ರ ಅಥವಾ ರಾಜ್ಯಗಳಿಗೆ ಒಂದು ಸ್ಪಷ್ಟ ಭಾಷಾ ನೀತಿಯಿಲ್ಲ. ಭಾಷಾವಾರು ಪ್ರಾಂತ ರಚನೆಯಾದ ಮೇಲೂ ರಾಜ್ಯ ಭಾಷೆಗಳಿಗೆ ನೂರೆಂಟು ಕುತ್ತುಗಳು ಬರುತ್ತಿವೆ. ಅಲ್ಲದೆ, ಒಂದನೇ ತರಗತಿಯಿಂದ ನಾಲ್ಕನೇ ತರಗತಿಯ ವರೆಗೆ ಮಾತ್ರ ಮಾತೃಭಾಷೆ ಓದಿದ ಮಗುವಿಗೆ ಭಾಷೆ ಎಷ್ಟರ ಮಟ್ಟಿಗೆ ಗಟ್ಟಿಗೊಳ್ಳುತ್ತದೆ ಎಂಬುದು ಸಂಶಯಾಸ್ಪದ. ಭಾಷೆ ಗಟ್ಟಿಗೊಳ್ಳಲು ಕನಿಷ್ಠ ಒಂದರಿಂದ ಹತ್ತನೇ ತರಗತಿಯ ವರೆಗೆ ಕಲಿಕಾ ಮಾಧ್ಯಮ ಮಗುವಿನ ಮಾತೃಭಾಷೆಯಾಗಿರಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆ, ಕನ್ನಡ ಶಾಲೆಗಳು ಎದುರಿಸುತ್ತಿರುವ ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮುಂದೆ ಸರ್ಕಾರ ದೃಢ ನಿಲುವು ತಾಳಿ ವಿವಾದಿತ ವಿಷಯದ ತಜ್ಞತೆ ಮತ್ತು ಭಾಷಾ ಅಭಿಮಾನ ಇರುವ ಹಿರಿಯ ವಕೀಲರನ್ನು ನೇಮಿಸಿ ತನ್ನ ನಿಲುವು ಮತ್ತು ಬದ್ಧತೆ ತೋರಬೇಕು. ಇದಕ್ಕೆ ಪೂರ್ವಭಾವಿಯಾಗಿ ಸರ್ಕಾರ ಶಿಕ್ಷಣ ತಜ್ಞರ ಮತ್ತು ಸರ್ಕಾರಿ ವಕೀಲರ ಸಭೆಯನ್ನು ಆಯೋಜಿಸುವುದು ಸೂಕ್ತವೆಂದು ನಾಡೋಜ ಚನ್ನವೀರ ಕಣವಿ, ಎಂ.ಎಂ. ಕಲಬುರ್ಗಿ, ಗಿರಡ್ಡಿ ಗೋವಿಂದರಾಜ ಹಾಗೂ ವೆಂಕಟೇಶ ಮಾಚಕನೂರು ಪ್ರಕಟಣೆಯಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.