ತಾಲೂಕು ಮಟ್ಟದಲ್ಲಿ ಜನಸ್ಪಂದನ, ಪ್ರಗತಿ ಪರಿಶೀಲನೆ
ಧಾರವಾಡ: ಬರುವ ದಿನಗಳಲ್ಲಿ ತಾಲೂಕು ಮಟ್ಟದಲ್ಲೂ ಜನಸ್ಪಂದನೆ, ಪ್ರಗತಿ ಪರಿಶೀಲನೆ ಸಭೆ ನಡೆಸಲು ನಿರ್ಧರಿಸಿದ್ದು, ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಎಚ್ಚರಿಸಿದ್ದಾರೆ.
ಜಿಲ್ಲೆಯ ವಿವಿಧ ಇಲಾಖೆಗಳ ಹಾಗೂ ನಿಗಮಗಳ ಹಿರಿಯ ಅಧಿಕಾರಿಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸಭೆಯಲ್ಲಿ ಇನ್ನೆರಡು ದಿನದಲ್ಲಿ ಕಾರ್ಯ ಆರಂಭಿಸುವ ಮಾತನ್ನು, ಕುಂಟು ನೆಪಗಳನ್ನು ಬಿಟ್ಟು, ಜಿಲ್ಲೆಯಲ್ಲಿ ಬಾಕಿ ಉಳಿದ ಅವಧಿ ನಿಗದಿತ ಕಾಮಗಾರಿಗಳನ್ನು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಜನಪ್ರತಿನಿಧಿಗಳು, ಅಧಿಕಾರಿಗಳು ಪರಸ್ಪರ ಮಾಹಿತಿ, ಸೌಹಾರ್ದದಿಂದ ಕೆಲಸ ಮಾಡಿ. ತಮಗೆ ಮಾಹಿತಿ ಇಲ್ಲವೆಂದು ಜನಪ್ರತಿನಿಧಿಗಳು ಆಕ್ಷೇಪಿಸುವ, ಅದಕ್ಕಾಗಿ ಬಹಳಷ್ಟು ಸಮಯ ವ್ಯಯ ಆಗಬಾರದು. ಗ್ರಾಪಂ, ತಾಲೂಕು ಮಟ್ಟದ ಅಧಿಕಾರಿಗಳು ಶಾಸಕ, ಜಿಪಂ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯ, ಕೇಂದ್ರ ಸರ್ಕಾರಗಳ ಯೋಜನೆಗಳ ಲಾಭ ಜನರಿಗೆ ಮುಟ್ಟಿಸಬೇಕು. ಯೋಜನೆ ಜಾರಿ ಕುರಿತ ಗಂಭೀರ ಸಮಸ್ಯೆ, ಸಚಿವಾಲಯ ಮಟ್ಟದ ಮಂಜೂರಾತಿ ಕುರಿತಂತೆ ತಮ್ಮ ಗಮನಕ್ಕೆ ತರುವ ವಿಷಯಗಳ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.
ತಾಡಪತ್ರಿ ವಿತರಿಸಿ: ಕೃಷಿ ಪದಾರ್ಥಗಳ ಸಂಸ್ಕರಣೆ ಯೋಜನೆಯಡಿ ಜಿಲ್ಲೆಯ ಐದೂ ತಾಲೂಕಿನಲ್ಲಿ ಸರಾಸರಿ 400ರಂತೆ ಶೇ.50 ರ ಸಹಾಯಧನದ ತಾಡಪತ್ರಿಗಳನ್ನು ವಿತರಿಸಿದೆ. ಪ್ರತಿ ತಾಲೂಕಿಗೆ ಕನಿಷ್ಠ 5 ಸಾವಿರ ತಾಡಪತ್ರಿಪೂರೈಸಬೇಕೆಂದು ಶಾಸಕ ವಿನಯ ಕುಲಕರ್ಣಿ ಸಚಿವರಲ್ಲಿ ಆಗ್ರಹಿಸಿದರು. ಪಶು ಸಂಗೋಪನೆ ಇಲಾಖೆ ಪರಿಶಿಷ್ಟರಿಗೆ ಜಾನುವಾರು ಒದಗಿಸುವ ಯೋಜನೆಯಲ್ಲಿ ಫಲಾನುಭವಿಗಳ ಪಟ್ಟಿ ಬಗ್ಗೆ ಮಾಹಿತಿ ಇಲ್ಲವೆಂದು ಶಾಸಕ ಸಿ.ಎಸ್. ಶಿವಳ್ಳಿ ಹೇಳಿದರು.
ಚತುಷ್ಪಥ ರಸ್ತೆ: ಹುಬ್ಬಳ್ಳಿ-ಧಾರವಾಡ ಚತುಷ್ಪಥ 19.75 ಕಿಮೀ ಅಭಿವೃದ್ಧಿ ಪೈಕಿ 8 ಕಿಮೀ, ಕಾಂಕ್ರೀಟ್ ರಸ್ತೆ ಕಾಮಗಾರಿ ಮುಗಿದಿದೆ. ಉಳಿದ 11.75 ಕಿಮೀ ಕಾಮಗಾರಿ ತೀವ್ರಗತಿಯಲ್ಲಿ ಕೈಗೆತ್ತಿಕೊಂಡಿದೆ. ಮಾ. 2013ಕ್ಕೆ ಮುಗಿಯಬೇಕಿದ್ದ ಈ ಕಾಮಗಾರಿಗೆ 2014ರ ಏಪ್ರಿಲ್ವರೆಗೆ ಅವಕಾಶ ನೀಡಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದರು. ಮಾರ್ಚ್ ಅಂತ್ಯದೊಳಗೆ ಚತುಷ್ಪಥದ ರಸ್ತೆ ಕಾಮಗಾರಿ ಕಡ್ಡಾಯವಾಗಿ ಪೂರ್ಣಗೊಳಿಸಲು ಸಚಿವ ದಿನೇಶ್ ಗುಂಡುರಾವ್ ಆದೇಶಿಸಿದರು.
ಶಾಸಕರಾದ ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಜಿಪಂ ಅಧ್ಯಕ್ಷ ಶಂಕ್ರಪ್ಪ ಅಗಡಿ, ಉಪಾಧ್ಯಕ್ಷ ಫಕ್ಕೀರಪ್ಪ ಜಕ್ಕಣ್ಣವರ, ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ, ಎಸ್ಪಿ ಲೋಕೇಶ್ ಕುಮಾರ ಇತರರಿದ್ದರು.
ಸಚಿವರಿಗೆ ಮನವಿ ಮಹಾಪೂರ
ಧಾರವಾಡ: ಧಾರವಾಡ ಜಿಲ್ಲೆ ಉಸ್ತುವಾರಿ ವಹಿಸಿಕೊಂಡು ಗುರುವಾರ ಪ್ರಥಮ ಬಾರಿಗೆ ಜಿಲ್ಲಾಧಿಕಾರಿ ಕಚೇರಿಗೆ ಕಾಲಿಟ್ಟ ಸಚಿವ ದಿನೇಶ ಗುಂಡೂರಾವ್ರತ್ತ ಜನರಿಂದ ಮನವಿಗಳ ಮಹಾಪೂರ ಹರಿದು ಬಂತು.
ಅನ್ನಭಾಗ್ಯ ಅವಧಿ ಹೆಚ್ಚಿಸಿ: ಅನ್ನಭಾಗ್ಯ ಯೋಜನೆ ಜಾರಿಗೆ ತಂದಾಗ ಸರ್ಕಾರ ಜಾರಿಗೆ 30 ದಿನ ಅಕ್ಕಿ ವಿತರಿಸಲಾಗುತ್ತಿತ್ತು. ಈಗ ಪ್ರತಿ ತಿಂಗಳು 1ನೇ ತಾರೀಖಿನಿಂದ ಹತ್ತನೇ ತಾರೀಖಿನವರೆಗೆ ವಿತರಿಸಲಾಗುತ್ತಿದ್ದು, ಇದು ಸರಿಯಲ್ಲ ಎಂದು ಬಿಜೆಪಿಯ ಮೋಹನ್ ರಾಮದುರ್ಗ, ಮಂಜು ನಡಟ್ಟಿ, ಕಪೀಲ್ ಶಿರಹಟ್ಟಿ ಮನವಿ ಸಲ್ಲಿಸಿದರು.
ಹಕ್ಕು ಪತ್ರ ನೀಡಿ: ವಾರ್ಡ್ ನಂ. 1ರ ನೆಹರು ನಗರ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಕೊಳಚೆ ಅಭಿವೃದ್ಧಿ ಮಂಡಳಿ ವಿಳಂಬ ಮಾಡುತ್ತಿದ್ದು, ಕೂಡಲೇ ಹಕ್ಕು ಪತ್ರ ಒದಗಿಸಲು ಸೂಚನ ನೀಡಬೇಕೆಂದು ಸ್ಲಂ ಜನಾಂದೋಲನ-ಕರ್ನಾಟಕ ಸಂಘದಿಂದ ಎಸ್.ವೈ. ಅನೂರ, ರಸೂಲ ಎಂ., ಮೆಹಬೂಬ ಪಠಾಣ, ನಿಂಗಪ್ಪ ಮೇಟಿ ಮನವಿ ಸಲ್ಲಿಸಿದರು.
ವಿನಯ ಕುಲಕರ್ಣಿಯಿಂದ ತರಾಟೆ: ಈಚೆಗೆ ನಡೆದ ಪಾಲನಕರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದ್ದ ಗಂಗಪ್ಪ ಹೆಗಡೆ ಪರ ಮನವಿ ನೀಡಲು ಬಂದಿದ್ದ ಕೆಲವರನ್ನು ಸಚಿವ ಗುಂಡೂರಾವ್ ಎದುರೇ ಶಾಸಕ ವಿನಯ ಕುಲಕರ್ಣಿ ತರಾಟೆಗೆ ತೆಗೆದುಕೊಂಡರು.
ಬೋಗಸ್ ಬಿಪಿಎಲ್ ಕಾರ್ಡ್ ರದ್ದು
ಬೋಗಸ್ ಬಿಪಿಎಲ್ ಪಡಿತರ ಚೀಟಿ ಪಡೆದ ಗ್ರಾಹಕರನ್ನು ಪತ್ತೆ ಹಚ್ಚುವ ಕೆಲಸದಲ್ಲಿ ವಿಚಕ್ಷಣಾ ದಳ ನಿರತವಾಗಿದ್ದು, ತನಿಖೆ ವೇಳೆ ದೊರೆಯುವ ಬೋಗಸ್ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲಾಗುವುದು. ಪಡಿತರ ಚೀಟಿ ವಿತರಣೆಯಲ್ಲಿನ ಗೊಂದಲ ಪರಿಹಾರವಾಗಿದೆ. ಅನರ್ಹರು ಸಹ ಬಿಪಿಎಲ್ ಚೀಟಿ ಪಡೆದಿದ್ದರ ಹಿನ್ನೆಲೆಯಲ್ಲಿ ವಿತರಣೆ ಸ್ಥಗಿತಗೊಳಿಸಲಾಗಿತ್ತು. ಅರ್ಜಿಯ ಸಂಪೂರ್ಣ ಪರಿಶೀಲನೆ ಬಳಿಕ ಬಿಪಿಎಲ್ ಪಡಿತರ ಚೀಟಿ ವಿತರಿಸಲಾಗುತ್ತದೆ. ಕೇಂದ್ರ ಸರ್ಕಾರದ ಜೆನರ್ಮ್ ಯೋಜನೆ ಅಡಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ 70 ಹೊಸ ಬಸ್ಗಳು ಲಭಿಸಿವೆ. ಜಿಲ್ಲೆಯಲ್ಲಿನ ರಸ್ತೆಗಳ ಸುಧಾರಣೆ, ಅಭಿವೃದ್ಧಿ ಯೋಜನೆಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಹಿತಿ ನೀಡುತ್ತೇನೆ. ಜಿಪಂ ಸಿಇಓ ಆಗಿದ್ದ ಪಿ.ಎ. ಮೇಘಣ್ಣವರ ವರ್ಗಾವಣೆ ಸರ್ಕಾರದ ತೀರ್ಮಾನ ವಿನಃ ನನ್ನದಲ್ಲ.
- ದಿನೇಶ ಗುಂಡೂರಾವ್, ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

