ಬಿಆರ್ಟಿಎಸ್ ಸ್ಕೀಂ ಸಂತ್ರಸ್ತರಿಗೆ ಪರಿಹಾರ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 9
ಹುಬ್ಬಳ್ಳಿ-ಧಾರವಾಡ ಮಧ್ಯದ ಬಿಆರ್ಟಿಎಸ್ ಯೋಜನೆಗಾಗಿ ವಶಪಡಿಸಿಕೊಳ್ಳುವ ಭೂಮಿಯ ಮಾಲೀಕರಿಗೆ ವೈಜ್ಞಾನಿಕ ಹಾಗೂ ಸೂಕ್ತ ಪರಿಹಾರ ನೀಡಲಾಗುವುದು. ಆಸ್ತಿ ಮಾಲೀಕರಿಗೆ ಯಾವುದೇ ರೀತಿಯ ಅನ್ಯಾಯವಾಗಲು ಬಿಡುವುದಿಲ್ಲವೆಂಬ ಭರವಸೆಯನ್ನು ಬಿಆರ್ಟಿಎಸ್ ಅಧಿಕಾರಿಗಳು ನೀಡಿದ್ದಾರೆ.
ವಿಶ್ವಬ್ಯಾಂಕ್ ನೆರವಿನಡಿ ಕೈಗೊಂಡಿರುವ ಬಿಆರ್ಟಿಎಸ್ ಯೋಜನೆ ಕುರಿತು ಬಿಆರ್ಟಿಎಸ್ ಅಧಿಕಾರಿಗಳೊಂದಿಗೆ ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅಧಿಕಾರಿಗಳು ಈ ಭರವಸೆ ನೀಡಿದ್ದಾರೆ.
ಬಿಆರ್ಟಿಎಸ್ ಯೋಜನೆ ಜಾರಿಗಾಗಿ ವಶಪಡಿಸಿಕೊಳ್ಳುವ ಭೂಮಿಯ ಜೊತೆಗೆ ಯೋಜನೆ ಅನುಷ್ಠಾನಕ್ಕೆ ಬೇಕಾದ ಸರ್ಕಾರಿ ಜಾಗೆಯಲ್ಲಿರುವ ಬಾಡಿಗೆದಾರರಿಗೆ, ವ್ಯಾಪಾರಸ್ಥರಿಗೂ ಸೂಕ್ತ ಪರಿಹಾರ ಒದಗಿಸುವ ಭರವಸೆ ಬಿಆರ್ಟಿಎಸ್ ಅಧಿಕಾರಿಗಳದ್ದು.
ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವಳಿ ನಗರ ಮುಖ್ಯ ರಸ್ತೆ ಪಕ್ಕದ ಆಸ್ತಿ ಮಾಲೀಕರು, ಮಹಾನಗರ ಅಭಿವೃದ್ಧಿಗೆ ತಮ್ಮ ವಿರೋಧ ಇಲ್ಲ. ಅಭಿವೃದ್ಧಿ ನೆಪದಲ್ಲಿ ವಶಪಡಿಸಿಕೊಳ್ಳುವ ಆಸ್ತಿಗೆ ವೈಜ್ಞಾನಿಕ, ಸಮರ್ಪಕ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಬಿಆರ್ಟಿಎಸ್ ಯೋಜನೆಯ ಪರಿಹಾರ ಮತ್ತು ಪುನರ್ ನಿರ್ಮಾಣ ವಿಭಾಗದ ಅಧಿಕಾರಿ ಟಿ.ಕೆ.ಎಂ. ಕೊಟ್ರಯ್ಯ, ಅವಳಿ ನಗರ ಮಧ್ಯೆ ಬಿಆರ್ಟಿಎಸ್ ಯೋಜನೆಗಾಗಿ 70 ಎಕರೆ ಜಮೀನು ಅವಶ್ಯಕತೆ ಇದ್ದು, 239 ಜನರು ಆಸ್ತಿ ಕಳೆದುಕೊಳ್ಳಲಿದ್ದಾರೆ. ಅಮರಗೋಳ, ಲಕಮಾಪುರ ಹಾಗೂ ಲಕಮನಹಳ್ಳಿ ಗ್ರಾಮಸ್ಥರಿಗೆ ಪರಿಹಾರ ನೀಡುವ ಕುರಿತು ಈಗಾಗಲೇ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಭೂಮಿ ಕಳೆದುಕೊಳ್ಳುವವರಿಗೆ ವೈಜ್ಞಾನಿಕ ಪರಿಹಾರ ಒದಗಿಸಬೇಕೆಂಬ ಉದ್ದೇಶದಿಂದಲೇ ಸಂಧಾನ ಸಮಿತಿ ರಚಿಸಲಾಗಿದೆ. ಭೂಮಿ ಕಳೆದುಕೊಳ್ಳುವವರು ಹಾಗೂ ಅಧಿಕಾರಿಗಳು ಈ ಸಂಧಾನ ಸಮಿತಿಯಲ್ಲಿ ಕೈಗೊಳ್ಳುವ ಪರಿಹಾರ ಮೊತ್ತದ ಮಾಹಿತಿಯ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರ ಅನುಮೋದನೆ ನೀಡಿದ ಬಳಿಕ ಪರಿಹಾರ ಮೊತ್ತ ಅಂತಿಮಗೊಳಿಸಲಾಗುವುದು. ಆಸ್ತಿ ಮಾಲೀಕರ ಅನುಮತಿ ಇಲ್ಲದೆ ಯಾವುದೇ ಭೂಮಿ ವಶಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅವಳಿ ನಗರ ಮಧ್ಯದ ರಸ್ತೆ ಉದ್ದಕ್ಕೂ ಇರುವ ಸರ್ಕಾರಿ ಜಾಗೆಗಳ ಬಗ್ಗೆ ಈಗಾಗಲೇ ಮಹಾನಗರ ಪಾಲಿಕೆ ಹಾಗೂ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಹಿತಿ ಪಡೆಯಲಾಗಿದೆ. ಸರ್ಕಾರಿ ಜಾಗೆಯಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿಕೊಂಡವರಿಗೆ ಯಾವುದೇ ಪರಿಹಾರ ನೀಡಲಾಗುವುದಿಲ್ಲ. ಅವಳಿ ನಗರ ಮಧ್ಯದ ರಸ್ತೆ ಈ ಮೊದಲು ರಾಷ್ಟ್ರೀಯ ಹೆದ್ದಾರಿಯಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಿದವರಿಗೂ ಪರಿಹಾರ ನೀಡಲಾಗುವುದಿಲ್ಲ ಎಂದು ತಿಳಿಸಿದರು. ಸರ್ಕಾರಿ ಜಾಗೆಯಲ್ಲಿ ಬಾಡಿಗೆ ಆಧಾರದ ಮೇಲೆ ಒಟ್ಟು 319 ಜನರಿದ್ದು, ಇವರಿಗೆ 6 ತಿಂಗಳ ಬಾಡಿಗೆ ಮೊತ್ತ, ರು. 6 ಸಾವಿರ ಪರಿಹಾರ ನೀಡಲಾಗುವುದು.
ಇದಕ್ಕೂ ಮೊದಲು ಮಾತನಾಡಿದ ನ್ಯಾಯವಾದಿ ಅರವಿಂದ ಮೇಟಿ, ಬಿಆರ್ಟಿಎಸ್ ಯೋಜನೆಯಡಿ ಅವಳಿ ನಗರದ ಮಧ್ಯೆ 31 ನಿಲುಗಡೆ ಒದಗಿಸಿದ್ದು, ಇದರಿಂದ ಪ್ರಯಾಣದ ವೇಳೆ ಹೆಚ್ಚಾಗುತ್ತದೆ. ಬಿಆರ್ಟಿಎಸ್ ಮಾರ್ಗ ನಿರ್ಮಾಣ ಹಾಗೂ ಬಸ್ ಖರೀದಿಯ ವೆಚ್ಚದಲ್ಲಿಯೇ ಅವಳಿ ನಗರ ಮಧ್ಯೆ ಫ್ಲೈ ಓವರ್ ನಿರ್ಮಿಸುವುದು ಒಳಿತು ಎಂದು ಸಲಹೆ ನೀಡಿದರು.
ಅಹಮದಾಬಾದ್ ನಗರದ ಹೊರ ಪ್ರದೇಶದಲ್ಲಿ ಬಿಆರ್ಟಿಎಸ್ ಯಶಸ್ಸು ಸಾಧಿಸಿದ್ದರೂ, ನಗರದ ಒಳಭಾಗದಲ್ಲಿ ಯೋಜನೆ ವಿಫಲಗೊಂಡಿದೆ ಎಂದು ಧಾರವಾಡದ ಅನಿಲ ಮಂಜನಬೈಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ನವಲೂರು ಹಾಗೂ ಸುತ್ತಲಿನ ಪ್ರದೇಶದಲ್ಲಿ ಕೈಗಾರಿಕೆಗಳಿಗಾಗಿ ಈ ಹಿಂದೆ ವಶಪಡಿಸಿಕೊಂಡಿದ್ದ ಭೂಮಿ ಸದ್ಬಳಕೆಯಾಗಿಲ್ಲ. ಬಿಆರ್ಟಿಎಸ್ ಯೋಜನೆಗಾಗಿ ವಶಪಡಿಸಿಕೊಳ್ಳುವ ಭೂಮಿಯ ಸ್ಥಿತಿ ಹಾಗಾಗದಿರಲಿ ಎಂದು ಸಲಹೆ ನೀಡಿದ ನವಲೂರಿನ ರೈತ ಚನ್ನಬಸಪ್ಪ ಜಾಪಣ್ಣವರ, ಅವಳಿ ನಗರ ಮುಖ್ಯ ರಸ್ತೆ ಬದಿ ಇರುವ ಸರ್ಕಾರಿ ಜಾಗೆ ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ನ್ಯಾಯವಾದಿ ಎಸ್.ಎಸ್. ಹಿರೇಮಠ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಅಮೃತ ಇಜಾರಿ ಮತ್ತಿತರರು ಮಾತನಾಡಿ, ಭೂಮಿ ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಸಂತ ಲದ್ವಾ, ಪದಾಧಿಕಾರಿಗಳಾದ ರಮೇಶ ಪಾಟೀಲ, ಸಿದ್ದೇಶ ಕಮ್ಮಾರ, ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಎಚ್ಡಿ ಬಿಆರ್ಟಿಎಸ್ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ ಕೇರಿ, ಮಂಜುನಾಥ ಜಡೆನ್ನವರ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

