ಧಾರವಾಡ

ಶೈಕ್ಷಣಿಕ ವರ್ಷಕ್ಕೂ ಮುನ್ನವೇ ಪ್ರವೇಶ ಚಿಂತೆ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 10
'ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲಿಸಿದರು' ಎನ್ನುವ ಗಾದೆ ಮಾತನ್ನು ಇದೀಗ ಕೊಂಚ ಬದಲಾಯಿಸಿ 'ಕೂಸು ಹುಟ್ಟುವ ಮುನ್ನವೇ ಶಾಲೆ ಆಯ್ದುಕೊಂಡರು' ಎನ್ನಬಹುದು...
ಹೌದು, ಪ್ರಸಕ್ತ ಶೈಕ್ಷಣಿಕ ವರ್ಷ ಇನ್ನೂ ಮುಗಿದಿಲ್ಲ, ಆಗಲೇ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ಶಾಲೆಗೆ ಸೇರಿಸುವ ಚಿಂತೆ ಪಾಲಕರಲ್ಲಿ ಕಾಣಿಸುತ್ತಿದೆ. ಇದಕ್ಕೆ ಇಂಬು ಕೊಡುವಂತೆ ನಗರದ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಅರ್ಜಿ ಆಗಲೇ ಖಾಲಿಯಾಗಿ ಬಿಟ್ಟಿವೆ.
ಪ್ರಸಕ್ತ ಶೈಕ್ಷಣಿಕ ವರ್ಷ ಇನ್ನೂ ಮುಗಿದಿಲ್ಲ. ಮಾರ್ಚ್ ತಿಂಗಳಲ್ಲಿ ಎದುರಾಗುವ ಅಂತಿಮ ಪರೀಕ್ಷೆಗೆ ವಿದ್ಯಾರ್ಥಿಗಳು ಅಣಿಯಾಗುತ್ತಿದ್ದಾರೆ. ಜತೆಗೆ ಪಠ್ಯ ಇನ್ನೂ ಬಾಕಿ ಉಳಿದಿದೆ, ಸರಿಯಾದ ಸಮಯಕ್ಕೆ ಪಠ್ಯ ಮುಗಿಸಬೇಕೆಂದು ತವಕದಲ್ಲಿ ಶಿಕ್ಷಕರಿದ್ದಾರೆ. ಹೀಗಿರುವಾಗ ಪಾಲಕರು ಮುಂದಿನ ಶೈಕ್ಷಣಿಕ ವರ್ಷಕ್ಕೆ ತಮ್ಮ ಮಕ್ಕಳನ್ನು ಯಾವ ಶಾಲೆಗೆ ಕಳುಹಿಸಬೇಕೆಂಬ ಹುಡುಕಾಟದಲ್ಲಿದ್ದಾರೆ.
ಆಂಗ್ಲ ಮಾಧ್ಯಮಕ್ಕೆ ಪೈಪೋಟಿ: ಮಧ್ಯಮ ಹಾಗೂ ಶ್ರೀಮಂತ ವರ್ಗದವರಲ್ಲಿ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಬೇಕೆಂಬ ಆಸೆಯೇ ಈ ಚಿಂತೆಗೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿರುವ ಪ್ರತಿಷ್ಠಿತ ಅದರಲ್ಲೂ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಬೇಕೆಂದು ಪಾಲಕರು ಶಾಲೆಗಾಗಿ ಹುಡುಕಾಟ ನಡೆಸಿದ್ದಾರೆ. ಬಂಧು ಮಿತ್ರರಲ್ಲಿ ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಿದರೆ ಒಳಿತು, ಯಾವ ಶಾಲೆ ಚೆನ್ನಾಗಿದೆ ಎಂಬಿತ್ಯಾದಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಜತೆಗೆ ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಪಾಲಕರ ಬುದ್ಧಿಮತ್ತೆಯನ್ನೂ ಪರೀಕ್ಷೆಗೊಳಿಸುವ ಪರಿಪಾಠ ಇದೀಗ ಶುರುವಾಗಿದ್ದರಿಂದ ಪಾಲಕರೂ ಸಹ ಒಂದಿಷ್ಟು ಓದಿಕೊಂಡು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಜತೆಗೆ ಶಾಲೆಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಮಕ್ಕಳನ್ನೂ ಪರೀಕ್ಷೆಗೊಳಪಡಿಸುತ್ತಾರೆ. ಇದಕ್ಕಾಗಿ ಪಾಲಕರು ತಮ್ಮ ಮಕ್ಕಳಿಗೆ ಅಕ್ಷರಮಾಲೆ, ಪದ್ಯ, ಸಂಖ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಮಕ್ಕಳಿಗೆ ಇಷ್ಟವೋ ಕಷ್ಟವೋ ಉತ್ತಮ ಶಾಲೆಗೆ ಸೇರಿಸಬೇಕೆಂಬ ಏಕೈಕ ಕಾರಣಕ್ಕಾಗಿ ಅವರಿಗೆ ಪಾಠ ಹೇಳಿಕೊಡುತ್ತಿದ್ದಾರೆ.
ಅರ್ಜಿ ಸಿಗುತ್ತಿಲ್ಲ: ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಶಾಲೆಗಳು ಪ್ರಸಕ್ತ ಶೈಕ್ಷಣಿಕ ವರ್ಷದ ಪರೀಕ್ಷೆಯ ಸಿದ್ಧತೆಯ ಜತೆಗೆ ಮುಂದಿನ ಶೈಕ್ಷಣಿಕ ವರ್ಷದ ಅರ್ಜಿಯನ್ನೂ ಈಗಲೇ ಹಂಚಲು ಆರಂಭಿಸಿವೆ. ಪಾಲಕರು ಶಾಲೆಗಳಿಗೆ ಮುಗಿಬಿದ್ದು ಪ್ರವೇಶ ಅರ್ಜಿ ಖರೀದಿಸುತ್ತಿದ್ದಾರೆ. ನಗರದ ಬಹುತೇಕ ಶಾಲೆಗಳಲ್ಲಿ ಪಾಲಕರು ಅರ್ಜಿಗಾಗಿ ಸರತಿಸಾಲಿನಲ್ಲಿ ನಿಂತಿರುವ ದೃಶ್ಯ ಇದೀಗ ಮಾಮೂಲಾಗಿ ಬಿಟ್ಟಿದೆ.  ಕೆಲ ಶಾಲೆಗಳ ಮುಂದೆ ಪ್ರವೇಶ ಅರ್ಜಿ ಖಾಲಿಯಾಗಿವೆ ಎಂಬ ಬೋರ್ಡ್ ನೇತು ಹಾಕಲಾಗಿದೆ. ಇದನ್ನು ಕಂಡು, 'ಬಂದ ದಾರಿಗೆ ಸುಂಕವಿಲ್ಲ' ಎಂದು ಪಾಲಕರು ಮರಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಮಕ್ಕಳ ಶಿಕ್ಷಣದ ಬಗ್ಗೆ ಪಾಲಕರು ತಲೆ ಕೆಡಿಸಿಕೊಂಡಿದ್ದಾರೆ.
ವಸೂಲಿ ಬಾಜಿ: ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳುವ ಮಾದರಿಯಲ್ಲಿ ಶಾಲಾ ಪ್ರವೇಶ ಪಡೆದುಕೊಳ್ಳಲು ಪೈಪೋಟಿ ನಡೆದಿದೆ. ಶಾಲೆಯ ಆಡಳಿತ ಮಂಡಳಿಯ ಪ್ರಮುಖರಿಗೆ ರಾಜಕೀಯ ಮುಖಂಡರ ಮುಖಾಂತರ, ಅಧಿಕಾರಿಗಳಿಂದ ಹೇಳಿಸಿ ಸೀಟು ಪಡೆದುಕೊಳ್ಳುವುದು, ಇಲ್ಲವೇ ಶಿಫಾರಸು ಪತ್ರ ಪಡೆದುಕೊಳ್ಳುವ ಮೂಲಕ ಸೀಟು ಗಿಟ್ಟಿಸಿಕೊಳ್ಳುವಷ್ಟರ ಮಟ್ಟಿಗೆ ಹುಬ್ಬಳ್ಳಿಯಲ್ಲಿ ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆದುಕೊಳ್ಳಲು ಪೈಪೋಟಿ ನಡೆದಿದೆ.
ಭರಪೂರ ಲಾಭ: ಶೈಕ್ಷಣಿಕ ವರ್ಷ ಆರಂಭಕ್ಕೆ ಮುನ್ನವೇ ಮಕ್ಕಳಿಗೆ ಪ್ರವೇಶ ಗಿಟ್ಟಿಸಿಕೊಳ್ಳಲು ಪಾಲಕರು ಖಾಸಗಿ ಶಾಲೆಗಳಿಗೆ ಮುಗಿ ಬಿದ್ದಿರುವುದು ದುಡ್ಡು ಮಾಡಲೆಂದೇ ಹುಟ್ಟಿಕೊಂಡ ಶಿಕ್ಷಣ ಸಂಸ್ಥೆಗಳ ಪಾಲಿಗೆ ಸೀರುಂಡೆಯಂತಾಗಿದೆ. ಪ್ರವೇಶಕ್ಕಾಗಿ ಹಾತೊರೆಯುವ ಪಾಲಕರಿಂದ ಬೇಕಾಬಿಟ್ಟಿಯಾಗಿ ಡೋನೇಶನ್ ಕೀಳಲಾರಂಭಿಸಿವೆ. 'ಹಣ ಹೋದರು ಪರವಾಗಿಲ್ಲ ಉತ್ತಮ ಶಾಲೆ ಸಿಕ್ಕರೆ ಸಾಕು' ಎನ್ನುವ ಆಸೆಯಿಂದ ಪಾಲಕರೂ ಸಹ ಕೇಳಿದಷ್ಟು ಡೊನೇಶನ್ ನೀಡಿ ಮಕ್ಕಳನ್ನು ಶಾಲೆಗೆ ಸೇರಿಸಲೆತ್ನಿಸುತ್ತಿದ್ದಾರೆ.
ಶೈಕ್ಷಣಿಕ ವರ್ಷಕ್ಕೂ ಮುನ್ನವೇ ಪ್ರವೇಶ ಪಡೆದುಕೊಳ್ಳಲು ಪೈಪೋಟಿ ನಡೆದಿರುವುದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಈ ಪೈಪೋಟಿ ತಾರಕಕ್ಕೇರುವುದರಲ್ಲಿ ಸಂದೇಹವೇ ಇಲ್ಲ.

ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.