ಕ್ಷುಲ್ಲಕ ಕಾರಣಕ್ಕೆ ಘರ್ಷಣೆ: ಪ್ರಕರಣ ಸುಖಾಂತ್ಯ
ಕನ್ನಡಪ್ರಭ ವಾರ್ತೆ, ನವಲಗುಂದ, ಜ. 15
ಕ್ಷುಲ್ಲಕ ಕಾರಣಕ್ಕಾಗಿ ಎರಡು ಕೋಮಿನ ಯುವಕರ ಮಧ್ಯೆ ಬುಧವಾರ ಮಧ್ಯಾಹ್ನ ನಡೆದ ಘರ್ಷಣೆ ವಿಕೋಪಕ್ಕೆ ತಿರುಗಿ ನಡೆದ ಮಾತಿನ ಚಕಮಕಿಯಿಂದಾಗಿ ಕೆಲಕಾಲ ಪಟ್ಟಣ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತ್ತು.
ಸಕಾಲಕ್ಕೆ ಉಭಯ ಕೋಮಿನ ಮುಖಂಡರು ಹಾಗೂ ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಿಂದಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದೆ ಪ್ರಕರಣ ಸುಖಾಂತ್ಯ ಕಂಡಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪೊಲೀಸ್ ಇಲಾಖೆ, ಘಟನಾ ಸ್ಥಳದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ.
ನಡೆದಿದ್ದೇನು..?: ಹಬ್ಬದ ಅಂಗವಾಗಿ ಬೀದಿಯಲ್ಲಿ ಕಟ್ಟಲಾಗಿದ್ದ ಪರಪರಿಯನ್ನು ಮತ್ತೊಂದು ಕೋಮಿನ ಯುವಕರು ದಾರಿಯಿಂದ ಸಾಗುವಾಗ ಕಿತ್ತು ಹಾಕಿದ್ದರೆಂದು ಹೇಳಲಾಗಿದೆ. ಇದನ್ನು ನೋಡಿದ ಮತ್ತೊಂದು ಕೋಮಿನ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದೇ ಎರಡೂ ಕೋಮಿನ ಗುಂಪಿನ ಮಧ್ಯೆ ಮಾತಿನ ಚಕಮಕಿ ನಡೆಯಲು ಕಾರಣವಾಯಿತು ಎಂದು ಹೇಳಲಾಗಿದೆ.
ಇದರಿಂದ ಬೆದರಿದ ಮಾರುಕಟ್ಟೆಯಲ್ಲಿನ ಜನ ಅಂಗಡಿ-ಮುಂಗಟ್ಟುಗಳನ್ನು ಗಡಿಬಿಡಿಯಲ್ಲಿ ಬಂದ್ ಮಾಡಿ ತೆರಳಿದ್ದರಿಂದ ಭಯದ ವಾತಾವರಣ ನಿರ್ಮಿಸಿತ್ತು.
ಸುದ್ದಿ ತಿಳಿಯುತ್ತಿದಂತೆಯೇ ಉಭಯ ಕೋಮಿನ ಹಿರಿಯರು ಸ್ಥಳಕ್ಕೆ ತೆರಳಿ ವಿಚಾರಿಸಿ ಪರಸ್ಪರರಲ್ಲೇ ವಿವಾದ ಬಗೆಹರಿಸಿಕೊಳ್ಳುವುದಾಗಿ ಪೊಲೀಸರಿಗೆ ಮೌಖಿಕ ಹೇಳಿಕೆ ನೀಡಿದರಲ್ಲದೇ, ತಮ್ಮ-ತಮ್ಮ ಕೋಮಿನ ಯುವಕರಿಗೆ ಬುದ್ಧಿವಾದ ಹೇಳಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ನಂತರ, ಕೆಲ ಕಿಡಿಗೇಡಿಗಳು ಮತ್ತೆ ಮಾರುಕಟ್ಟೆ ಪ್ರದೇಶದಲ್ಲಿನ ಪರಪರಿ ಹರಿದು ಶಾಂತಿ ಕದಡಲು ಯತ್ನಿಸಿದ್ದರಿಂದ ಮತ್ತೆ ಕೆಲಕಾಲ ಪಟ್ಟಣದ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ಕೈಮೀರದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದು ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ. ನವಲಗುಂದ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

