ಕಾಂಗ್ರೆಸ್ ಹಿಂದೂ ವಿರೋಧಿ ಕೆಲಸ: ಜೋಶಿ
ಧಾರವಾಡ: ರಾಜ್ಯದ ಅಲ್ಪಸಂಖ್ಯಾತರ ಬೆನ್ನು ಹತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ. ಧಾರವಾಡದ ಕಮಲಾಪುರದಲ್ಲಿ ಮಂಗಳವಾರ ನಡೆದ ಗಲಾಟೆಗೆ ಸಂಬಂಧಿಸಿದಂತೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘರ್ಷಣೆ ಪ್ರಕರಣದಲ್ಲಿ ಒಂದು ಕೋಮಿನ ಜನರು ಪೊಲೀಸರ ಮೇಲೆ ಕಲ್ಲು, ರಾಡ್ಗಳನ್ನು ಎಸೆದಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆಯನ್ನೂ ಕೂಗಿದ್ದಾರೆ. ಇದೇನು ಪಾಕಿಸ್ತಾನವಾ ಎಂದ ಜೋಶಿ, ಅಂತಹ ದೇಶದ್ರೋಹಿಗಳನ್ನು ಬಂಧಿಸುವುದು ಬಿಟ್ಟ ಪೊಲೀಸರು ರಾಜಿ ಪಂಚಾಯಿತಿ ಮಾಡಲು ಹೋದ ಯುವಕರನ್ನು ಬಂಧಿಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು. ಕೂಡಲೇ ಅಮಾಯಕರನ್ನು ಬಿಡುಗಡೆಗೊಳಿಸಿ ಗುಂಪು ಘರ್ಷಣೆಗೆ ಮೂಲ ಕಾರಣವಾದವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಧ್ವನಿವರ್ಧಕಗಳನ್ನು ಬಳಸದಂತೆ ನಿರ್ಬಂಧ ಹೇರುವ ಪೊಲೀಸರ ಕಾನೂನು, ಮಂಗಳವಾರ ನಡೆದ ಮೆರವಣಿಗೆಯಲ್ಲಿ ಏಕೆ ಅನ್ವಯಿಸಲಿಲ್ಲ. ಕಾಂಗ್ರೆಸ್ ಒಂದು ಕೋಮಿನ ಪರವಾಗಿ ನಿಂತಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಿಂದೂಗಳು ಹಾಗೂ ಹಿಂದೂ ಸಂಘಟನೆಗಳ ಮೇಲೆ ನಿರಂತರವಾಗಿ ಅನ್ಯಾಯ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಾಕ್ನಲ್ಲಿ ನೆಂಟರಿದ್ದಾರೆಯೇ?: ಪ್ರಭಾಕರ ಭಟ್ ಕಲ್ಲಡ್ಕ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅಂಥವರ ಮೇಲೆ ಪ್ರಕರಣ ದಾಖಲಿಸುವ ಪೊಲೀಸರು, ರಾಜ್ಯದ ಶಿರಾ, ಮಂಗಳೂರು, ಲಕ್ಷ್ಮೇಶ್ವರ, ಚಿಕ್ಕಮಗಳೂರುಗಳಲ್ಲಿ ಹಿಂದೂ ಹಾಗೂ ಬಿಜೆಪಿ ಮುಖಂಡರನ್ನು ಬಂಧಿಸಿದ್ದಾರೆ. ಹಿಂದೂಗಳ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಾಕಿಸ್ತಾನದ ಜೊತೆ ಬೀಗತನ ಮಾಡಿಕೊಂಡಿದ್ದಾರೆಯೇ? ಅಲ್ಲಿ ಅವರ ನೆಂಟರಿದ್ದಾರೆಯೇ? ಎಂದು ಜೋಶಿ ಕಿಡಿಕಾರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

