ಆರ್ಥಿಕ ಸಹಾಯಕ್ಕಾಗಿ ಸರ್ಕಾರದೆದುರು ಕೈಚಾಚಬೇಡಿ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 19
ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ ಸಂಘಟನೆಗಳು ಸರ್ಕಾರದಿಂದ ಆರ್ಥಿಕ ಸಹಾಯ ಕೇಳಬಾರದು. ಸಾಹಿತ್ಯ ಚಟುವಟಿಕೆಗೆ ಸತಾಯಿಸಿ ಹಣ ನೀಡುವ ಸರ್ಕಾರದ ದುರಹಂಕಾರದಿಂದ ಸಾಹಿತ್ಯಪರ ಸಂಘಟನೆಗಳು ಪಾಠ ಕಲಿಯಬೇಕು ಎಂದು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಸಲಹೆ ನೀಡಿದ್ದಾರೆ.
ಚುನಾವಣೆಯಿಂದ ಹಿಂದೆ ಸರಿಯಿರಿ: ಧಾರವಾಡ ಸಾಹಿತ್ಯ ಸಂಭ್ರಮ-2014ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನವನ್ನು ಸರ್ಕಾರದ ನೆರವಿಲ್ಲದೇ ಸಂಘಟಿಸಲು ಸಾಧ್ಯವಾಗದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಚುನಾವಣೆಯಾದರೂ ಏಕೆ ಬೇಕು? ಸಮ್ಮೇಳನ ಸಂಘಟಿಸುವ ತಾಕತ್ತಿರದಿದ್ದರೆ ಚುನಾವಣೆಯಿಂದ ಹಿಂದಕ್ಕೆ ಸರಿಯಬೇಕು ಎಂದು ಟೀಕಿಸಿದರು.
ಸರ್ಕಾರೇತರರ ಸಹಾಯ ಪಡೆಯಿರಿ: ಸಾಹಿತ್ಯ ಸಮ್ಮೇಳನಗಳ ನಂತರ ಸರ್ಕಾರ ಹಣ ಬಿಡುಗಡೆ ಮಾಡಲು ಹಿಂದೇಟು ಹಾಕುವುದು, ನಂತರ ಕಸಾಪ ಅಧ್ಯಕ್ಷರು ಪರಿಷತ್ಗೆ ಬೀಗ ಹಾಕುವ ನಾಟಕವಾಡುವಂಥ ಪ್ರಹಸನಗಳು ಸ್ಥಗಿತಗೊಳ್ಳಬೇಕು. ಸರ್ಕಾರದ ಹಂಗು ಸಾಹಿತ್ಯ ಕ್ಷೇತ್ರಕ್ಕೆ ಬೇಡ. ಸರ್ಕಾರದ ನೆರವು ಪಡೆಯದೇ ಸಮ್ಮೇಳನಗಳನ್ನು ಸಂಘಟಿಸಬೇಕು. ಸಾಹಿತ್ಯ ಸಮ್ಮೇಳನಗಳಿಗೆ ಆರ್ಥಿಕ ನೆರವು ನೀಡುವ ಅಧಿಕಾರ ಸರ್ಕಾರಕ್ಕೆ ಇದೆ. ಸಾಹಿತ್ಯಪರ ಸಂಘಟನೆಗಳು ಖಾಸಗಿ ಸಂಘ-ಸಂಸ್ಥೆ, ಉದ್ದಿಮೆದಾರರು, ಸಾರ್ವಜನಿಕರ ಸಹಾಯ ಪಡೆದು ಕಾರ್ಯಕ್ರಮಗಳನ್ನು ಸಂಘಟಿಸಬೇಕು ಎಂದರು. ತಮ್ಮ ಭಾಷಣದುದ್ದಕ್ಕೂ ಸರ್ಕಾರದ ಕ್ರಮ ಖಂಡಿಸಿದ ಭೈರಪ್ಪ, ಈಗಿನ ಸರ್ಕಾರ ಸಾಂಸ್ಕೃತಿಕ ನೀತಿ ರಚಿಸಿದೆ. ಸರ್ಕಾರಕ್ಕೂ ಸಾಂಸ್ಕೃತಿಕ ನೀತಿಗೂ ಯಾವುದೇ ಸಂಬಂಧ ಇಲ್ಲ. ಸಾಂಸ್ಕೃತಿಕ ನೀತಿ ಸರ್ಕಾರದಿಂದ ನಡೆಯುವುದಿಲ್ಲ. ನವೋದಯ ಕಾಲ ಪ್ರಾರಂಭಗೊಂಡಾಗಿನಿಂದಲೂ ಸರ್ಕಾರ ಸಾಹಿತ್ಯ ಕ್ಷೇತ್ರಕ್ಕೆ ಯಾವುದೇ ಆರ್ಥಿಕ ನೆರವು ನೀಡಿಲ್ಲ ಎಂದರು.
ಸಾಹಿತ್ಯ ಕ್ಷೇತ್ರದಲ್ಲೂ ರಾಜಕಾರಣ: ಸಾಹಿತ್ಯ ಅಕಾಡೆಮಿ ರಚಿಸುವ ಮೂಲಕ ಸರ್ಕಾರ ಪ್ರಶಸ್ತಿ ಪ್ರದಾನದಲ್ಲಿ ತಾರತಮ್ಯ ತೋರುತ್ತ ಸಾಹಿತಿಗಳಲ್ಲಿ ಭಿನ್ನಾಭಿಪ್ರಾಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ಪ್ರಶಸ್ತಿ ನೀಡುವಲ್ಲಿಯೂ ಜಾತಿ, ಕ್ಷೇತ್ರಗಳನ್ನು ಪರಿಗಣಿಸುವ ಮೂಲಕ ಸರ್ಕಾರ ಸಾಹಿತ್ಯ ಕ್ಷೇತ್ರದಲ್ಲಿಯೂ ರಾಜಕಾರಣ ಮಾಡುತ್ತಿದೆ ಎಂದು ದೂರಿದರು. ಸಾಹಿತಿಗಳ ಅಭಿವ್ಯಕ್ತಿ ಸ್ವತಂತ್ರ್ಯದ ಹಕ್ಕು ಕಾಯ್ದಿಕೊಳ್ಳುವುದಕ್ಕಾಗಿ ಎಲ್ಲ ಸಾಹಿತಿಗಳು ಒಂದಾಗಿ ಪ್ರತ್ಯೇಕ ಸಂಘಟನೆ ರಚಿಸಿ, ಚಂದಾ ಎತ್ತುವ ಹಣ ಸಂಗ್ರಹಿಸಿ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕು ಎಂದು ತಿಳಿಸಿದರು. ಇದಕ್ಕೂ ಮೊದಲು ನರಹಳ್ಳಿ ಬಾಲಸುಬ್ರಹ್ಮಣ್ಯ, ಬಿ.ಎ. ವಿವೇಕ ರೈ, ಕವಿವಿ ಕುಲಪತಿ ಎಚ್.ಬಿ. ವಾಲಿಕಾರ, ವಿಮರ್ಶಕ ಗಿರಡ್ಡಿ ಗೋವಿಂದರಾಜ್ ಮಾತನಾಡಿದರು. ಹಿರಿಯ ಕವಿ ನಾಡೋಜ ಚನ್ನವೀರ ಕಣವಿ, ಸಂಶೋಧಕ ಎಂ.ಎಂ. ಕಲಬುರ್ಗಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

