ಭ್ರಷ್ಟಾಚಾರಕ್ಕೆ ನೆಹರು-ಇಂದಿರಾ ನೀತಿ ಕಾರಣ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 19
ದೇಶಾದ್ಯಂತ ಇಂದು ಭ್ರಷ್ಟಾಚಾರ ಎಲ್ಲೆ ಮೀರಿರುವುದಕ್ಕೆ ಹಿಂದಿನ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಇಂದಿರಾ ಗಾಂಧಿಯವರ ಆರ್ಥಿಕ ನೀತಿಯೇ ಕಾರಣ ಎಂದು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ನೇರವಾಗಿ ದೂಷಿಸಿದರು.
ಇಲ್ಲಿನ ಕವಿವಿ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಭಾನುವಾರ ನಡೆದ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಸಾಹಿತಿಯೊಂದಿಗೆ ಈ ಸಂಜೆ ಗೋಷ್ಠಿಯಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ವಿವರಿಸಿ, ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನೆಹರು ಹಾಗೂ ಇಂದಿರಾ ಪ್ರಧಾನಿಯಾಗಿದ್ದ ಕಾಲದಲ್ಲಿ ದೇಶದ ಆರ್ಥಿಕತೆ ಅಧೋಗತಿಗೆ ಇಳಿಯಿತು. ಆದಾಯ ತೆರಿಗೆ ವಸೂಲಿ ಹಾಗೂ ಬಳಕೆಯಲ್ಲಿ ಇವರಿಬ್ಬರೂ ವಿಫಲರಾಗಿದ್ದರಿಂದ ಇಂದಿಗೂ ದೇಶದಲ್ಲಿ ಅನ್ನ, ಬಟ್ಟೆ, ವಸತಿ, ಶಿಕ್ಷಣ, ಉದ್ಯೋಗಕ್ಕಾಗಿ ಹೆಣಗಾಡುವಂತಾಗಿದೆ. ಇವರ ಆರ್ಥಿಕ ನೀತಿಯಿಂದಾಗಿ ಕಪ್ಪುಹಣ ವಹಿವಾಟು ಹೆಚ್ಚಿತು. ಇದರೊಟ್ಟಿಗೆ ಎಲ್ಲೆಡೆ ಭ್ರಷ್ಟಾಚಾರವೂ ಮಿತಿಮೀರಿತು ಎಂದರು.
ನೆಹರು ಗಾಂಧಿ ತತ್ವವನ್ನೇ ಅನುಸರಿಸಲಿಲ್ಲ. ಗಮನಾರ್ಹ ಸಂಗತಿಯೆಂದರೆ ನೆಹರು ದೇಶಕ್ಕಿಂತ ಹೆಚ್ಚಾಗಿ ಮಗನನ್ನು ಪ್ರೀತಿಸಿದವರು. ಲೋಕದೇವ ನೆಹರು ಪುಸ್ತಕದಲ್ಲಿ ಈ ಬಗ್ಗೆ ಪ್ರಸ್ತಾಪವಿದೆ. ಮೂಲತಃ ನೆಹರು ಕಮ್ಯುನಿಸ್ಟ್.
ಹೀಗಾಗಿಯೇ ಅವರು ಪ್ರಧಾನಿಯಾದ ಬಳಿಕ ಕಮ್ಯುನಿಸ್ಟ್ ಆರ್ಥಿಕ ನೀತಿಯನ್ನೇ ಭಾರತದಲ್ಲಿಯೂ ಜಾರಿಗೆ ತಂದರು. ನೆಹರು ಅವರನ್ನು ಪ್ರಧಾನಿಯಾಗಿಸಲು 15 ರಾಜ್ಯ ಸಮಿತಿಗಳ ಪೈಕಿ ಕೇವಲ 3 ಸಮಿತಿಗಳು ಮಾತ್ರ ಒಪ್ಪಿಗೆ ಸೂಚಿಸಿದ್ದವು. ಇನ್ನುಳಿದ 12 ಸಮಿತಿಗಳು ಸರ್ದಾರ್ ವಲ್ಲಭಬಾಯಿ ಪಟೇಲ್ರ ಹೆಸರು ಸೂಚಿಸಿದ್ದವು. ಆದಾಗ್ಯೂ ಗಾಂಧೀಜಿ ನೆಹರು ಅವರನ್ನೇ ಪ್ರಧಾನಿಯಾಗಿಸಿದರು.
ಪ್ರಧಾನಿ ಮಾಡದೇ ಹೋದಲ್ಲಿ ನೆಹರು ಕಾಂಗ್ರೆಸ್ ಒಡೆದು ಹಾಕಬಹುದೆಂಬ ಕಾರಣಕ್ಕೆ ಗಾಂಧೀಜಿ ಎಲ್ಲರ ಅಭಿಪ್ರಾಯ ಬದಿಗಿರಿಸಿ ನೆಹರು ಅವರನ್ನು ಪ್ರಧಾನಿಯಾಗಿಸಿದರು. ಪಟೇಲರು ತಾವು ಪ್ರಧಾನಿಯಾಗಬೇಕೆಂಬ ಹಠ ಹಿಡಿದರೆ ಸುಭಾಸಚಂದ್ರ ಭೋಸರಿಗೆ ಬಂದ ಗತಿ ತಮಗೂ ಬರಬಹುದೆಂದು ಗಾಂಧೀಜಿಯವರ ಮಾತಿಗೆ ಮನ್ನಣೆ ನೀಡಿ ಸುಮ್ಮನಾದರು. ನೆಹರು ಹಾಗೂ ಇಂದಿರಾ ಗಾಂಧಿ ಮಾಡಿದ ಅಚಾತುರ್ಯದಿಂದಾಗಿ ನಾವಿಂದು ಭ್ರಷ್ಟಾಚಾರದ ಕೂಪದಲ್ಲಿ ಸಿಕ್ಕಿಕೊಂಡಿದ್ದೇವೆ. ಪ್ರತಿಯೊಂದು ಕ್ಷೇತ್ರದಲ್ಲೂ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ರು. 1ಗೆ ಅಕ್ಕಿ ಇವೆಲ್ಲವೂ ರಾಜಕೀಯ ಭ್ರಷ್ಟಾಚಾರ. ರಾಜಕೀಯಕ್ಕೆ ಬಂದು ಪ್ರಾಮಾಣಿಕ ಸೇವೆ ಮಾಡಬೇಕೆಂಬ ಮನಸ್ಸುಗಳು ಬೆರಳೆಣಿಕೆಯಷ್ಟು, ಉಂಡು ಹೋಗುವ ಜಾಯಮಾನದವರೇ ಹೆಚ್ಚು ಎಂದು ಕಿಡಿಕಾರಿದ ಭೈರಪ್ಪ, ಭ್ರಷ್ಚಾಚಾರ ರಹಿತ ಆಡಳಿತ ಬರಬೇಕಾದರೆ ಸರ್ಕಾರದ ಕಿವಿ ಹಿಂಡುವ ಕೆಲಸಕ್ಕೆ ಸಾಹಿತಿಗಳು ಮುಂದಾಗಬೇಕೆಂದರು.
ಪುಸ್ತಕ ಹಂಚುವುದು ಅಪರಾಧವೇ: ನಾನು ಯಾವುದೇ ಕಾದಂಬರಿ ಬರೆಯುವ ಮುನ್ನ ಸಾಕಷ್ಟು ಅಧ್ಯಯನ ಮಾಡುತ್ತೇನೆ. ಕೇವಲ ಕಲ್ಪನೆಯಿಂದ ಕಾದಂಬರಿ ಬರೆಯುವವನು ನಾನಲ್ಲ. ನನ್ನ ಕೃತಿಯು ಕಲ್ಪನೆ ಹಾಗೂ ಅಧ್ಯಯನ ಒಳಗೊಂಡಿರುವುದರಿಂದ ಸುಂದರ ರೂಪ ಪಡೆಯುತ್ತದೆ. ವಂಶವೃಕ್ಷ, ಪರ್ವ, ಆವರಣ ಸೇರಿದಂತೆ ಎಲ್ಲ ಕೃತಿಯಲ್ಲಿಯೂ ಸತ್ವಾನ್ವೇಷಣೆಯಿದೆ. ನಾನು ಹಲವು ಕಾದಂಬರಿಗಳಲ್ಲಿ ದೇಶ ಒಡೆಯುವವರ ಸತ್ಯ ಬಿಚ್ಚಿಟ್ಟೆ. ಇದಕ್ಕೆ ಟೀಕಾಕಾರರು ಬಾಯಿ ಬಡಿದುಕೊಂಡರು. ಸತ್ಯವನ್ನು ಬಿಚ್ಚಿಡದೇ ಹೋದರೆ ದೇಶ ಕಟ್ಟಲಾದೀತೇ? ಕೆಲವರು ನನ್ನ ಪುಸ್ತಕವನ್ನಿಟ್ಟುಕೊಂಡು ವಿವಾದ ಹುಟ್ಟಿಸಿದರು. ನನ್ನ ಪುಸ್ತಕಗಳನ್ನು ಕೆಲವರು ಮನೆಮನೆಗೆ ಹಂಚುತ್ತಾರೆಂದು ಟೀಕಿಸಿದರು. ಪುಸ್ತಕ ಹಂಚುವುದು ಅಪರಾಧವೇ? ಅವರಿಗೆ ನಾನು ಬೇಡ ಎನ್ನಲಾದೀತೆ? ನನ್ನ ಪುಸ್ತಕಗಳನ್ನು ಮದುವೆ-ಮುಂಜಿಯಲ್ಲಿಯೂ ಕೊಡುತ್ತಾರೆ. ಇದಕ್ಕೇನು ಮಾಡಲಾದೀತು ಮಾತನಾಡುವವರಿಗೆ ಕೆಲಸವಿಲ್ಲ ಬಿಡಿ ಎಂದು ಟೀಕಾಕಾರರಿಗೆ ಉತ್ತರ ನೀಡಿದರು.
ಇದ್ಯಾವ ನ್ಯಾಯ: ದೇಶ ಹದಗೆಡಲು ಕಾರಣವೇ ರಾಜಕಾರಣಿಗಳು. ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಇಂದು ದೇಶ ಆರ್ಥಿಕವಾಗಿ ಸಬಲವಾಗಿರುತ್ತಿತ್ತು. ಶೈಕ್ಷಣಿಕ ವ್ಯವಸ್ಥೆಯನ್ನೇ ಉದಾಹರಣೆಯಾಗಿ ತೆಗೆದುಕೊಂಡಾಗ ಸರ್ಕಾರಿ ಶಾಲೆಗಳು ದಯನೀಯ ಸ್ಥಿತಿಯಲ್ಲಿವೆ. ಹೀಗಾಗಿ ಜನ ಸರ್ಕಾರಕ್ಕೆ ಶಿಕ್ಷಣ, ಆರೋಗ್ಯ ಇತರ ತೆರಿಗೆ ನೀಡುತ್ತಿದ್ದಾಗಲೂ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಒಂದೆಡೆ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅನುಮತಿ ನೀಡುತ್ತದೆ. ಮತ್ತೊಂದೆಡೆ ಮೂಗುದಾರ ಹಾಕುತ್ತಿದೆ. ಇದ್ಯಾವ ನ್ಯಾಯ? ಸರ್ಕಾರವೇ ಇಂದು ಉತ್ತಮ ಸೌಲಭ್ಯ ಕೊಟ್ಟಿದ್ದರೆ ಜನ ಖಾಸಗಿ ಶಾಲೆಯತ್ತ ಏಕೆ ಮುಖ ಮಾಡುತ್ತಿದ್ದರು. ಆಸ್ಪತ್ರೆ ಸೇರಿದಂತೆ ಎಲ್ಲ ವ್ಯವಸ್ಥೆಯಲ್ಲೂ ಸರ್ಕಾರ ಚೆಲ್ಲಾಟವಾಡುತ್ತಿದೆ. ಚುನಾವಣೆ ಬಂದಾಗ ಮತಕ್ಕಾಗಿ ನಾಟಕವಾಡುವುದು, ಅಧಿಕಾರಕ್ಕೆ ಬಂದ ಬಳಿಕ ದುಡ್ಡು ಗಳಿಸುವುದು ಮಾತ್ರ ಮಾಡುತ್ತಿರುವ ರಾಜಕಾರಣಿಗಳು ಸ್ವಲ್ಪ ಪ್ರಾಮಾಣಿಕರಾಗಲಿ ಎಂದು ಛಾಟಿ ಬೀಸಿದರು.
ಸಂಸ್ಕೃತಿ ನಾಶವಾದೀತು: ದೇಶದ ಸಂಸ್ಕೃತಿ ನಾಶ ಮಾಡುವುದೇ ಇಂಗ್ಲಿಷ್ ಮಾಧ್ಯಮ. ಇಂಗ್ಲಿಷ್ನಿಂದಾಗಿ ಸಾಹಿತ್ಯ ಸೃಷ್ಟಿಶಕ್ತಿ ಸಂಪೂರ್ಣ ಸಾಯುತ್ತದೆ. ಸಾಹಿತ್ಯದ ಅಭಿವ್ಯಕ್ತಿ ನಮ್ಮ ಭಾಷೆಯಲ್ಲಿದ್ದಾಗ ಅದು ಉತ್ತಮ ಕೃತಿ ಎನಿಸಿಕೊಳ್ಳಲು ಸಾಧ್ಯ. ಇಂಗ್ಲಿಷ್ ಭಾಷೆ ಎಲ್ಲರೂ ಕಲಿಯಲಿ, ಆದರೆ, ಅದನ್ನು ಮಾಧ್ಯಮವಾಗಿಸಿಕೊಳ್ಳುವುದು ಬೇಡ. ಈ ಸಂಗತಿ ಬಗ್ಗೆ ಗಂಭೀರವಾಗಿ ಆಲೋಚಿಸಿ ಪರಿಪಾಲಿಸಬೇಕಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

