27ರಿಂದ ಸುತ್ತೂರ ಶ್ರೀಗಳ ಜಾತ್ರಾ ಮಹೋತ್ಸವ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 22
ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಮೈಸೂರು ಜಿಲ್ಲೆಯ ಸುತ್ತೂರ ಶ್ರೀಕ್ಷೇತ್ರದಲ್ಲಿ ಜ. 27ರಿಂದು ಫೆಬ್ರವರಿ 1ರವರೆಗೆ ನಡೆಯಲಿದೆ.
ಮಹೋತ್ಸವದ ಅಂಗವಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜೆಎಸ್ಎಸ್ನ ಪ್ರೊ. ಮಲೇಯೂರು ಗುರುಸ್ವಾಮಿ ಹಾಗೂ ಡಾ. ಅರುಣ ಬಳಮಟ್ಟಿ ತಿಳಿಸಿದರು.
24ನೇ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಜ. 29ರಂದು ಶ್ರೀ ಶಿವರಾತ್ರೀಶ್ವರ ರಥೋತ್ಸವ ನಡೆಯಲಿದ್ದು, ಇದಲ್ಲದೆ, ಶ್ರೀ ಮಹದೇಶ್ವರ ಉತ್ಸವ, ಕೊಂಡೋತ್ಸವ, ತೆಪ್ಪೋತ್ಸವ ಮೊದಲಾದ ಕಾರ್ಯಕ್ರಮಗಳು ಆರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿವೆ.
ಉತ್ಸವದಲ್ಲಿ ಶ್ರೀಮಠದ ಬಿರುದು ಬಾವಲಿಗಳು, ಜನಪದ ಕಲಾ ತಂಡಗಳು ಮತ್ತು ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ. ಜತೆಗೆ ಸಾಮುದಾಯಿಕ ಪ್ರಜ್ಞೆ ಬಲಪಡಿಸುವ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಾತ್ರೆಯಲ್ಲಿ ಧಾರ್ಮಿಕ ಸಭೆ, ಸಾಮೂಹಿಕ ವಿವಾಹ, ವಸ್ತುಪ್ರದರ್ಶನ, ಮದ್ಯಪಾನ ಮತ್ತು ಮಾದಕವಸ್ತುಗಳ ವಿರುದ್ಧ ಜನಜಾಗೃತಿ ವಿಶೇಷ ಕಾರ್ಯಕ್ರಮ, ಕೃಷಿಮೇಳ, ಸಮ್ಮೇಳನ, ಭಜನಾಮೇಳ, ಕುಸ್ತಿ ಪಂದ್ಯಾವಳಿ, ದೇಸಿಯ ಆಟಗಳು, ವಿದ್ಯಾರ್ಥಿಗಳಿಗೆ ಕೆಸರು ಗದ್ದೆ ಓಟ, ಸಾಂಸ್ಕೃತಿಕ ಮೇಳ, ಮಹಿಳೆಯರಿಗಾಗಿ ಸೋಬಾನೆ ಪದ, ರಂಗೋಲಿ ಸ್ಪರ್ಧೆ ಹಾಗೂ ಮಕ್ಕಳಿಗಾಗಿ ಚಿತ್ರಕಲಾ ಹಾಗೂ ಗಾಳಿಪಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಪ್ರಭಾತ ಫೇರಿ: ಜಾತ್ರಾ ಮಹೋತ್ಸವದಂಗವಾಗಿ ಆಲತ್ತೂರು, ಸುತ್ತೂರು, ಸಣ್ಣಮಲ್ಲಿಪುರ, ಸೋನಹಳ್ಳಿ, ಮಲ್ಲರಾಜಯ್ಯನಹುಂಡಿ, ಮಾದಯ್ಯನಹುಂಡಿ ಗ್ರಾಮಗಳಲ್ಲಿ ಪ್ರತಿನಿತ್ಯ ಷಟ್ಸ್ಥಲ ಧ್ವಜಾರೋಹಣ, ಧರ್ಮ ಸಂದೇಶ ಕಾರ್ಯಕ್ರಮಗಳು ನಡೆಯಲಿವೆ.
ಸುತ್ತೂರು ಶ್ರೀಕ್ಷೇತ್ರದಲ್ಲಿ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ, ಜೆಎಸ್ಎಸ್ ಆಸ್ಪತ್ರೆಯ ಪ್ರಸೂತಿ ವಿಭಾಗ ಮತ್ತು ಔಷಧ ಕೇಂದ್ರವನ್ನು ಗ್ರಾಮೀಣ ಪ್ರದೇಶದ ಜನರಿಗಾಗಿ ಆರಂಭಿಸಲಾಗುತ್ತಿದೆ. ಅಲ್ಲದೇ, ಸುತ್ತೂರಿಗೆ ಆಗಮಿಸುವ ವಿದ್ಯಾರ್ಥಿಗಳ ಪೋಷಕರಿಗಾಗಿ ವಸತಿಗೃಹ ಹಾಗೂ ಉಪಾಹಾರ ಗೃಹ ಕಟ್ಟಡಗಳ ಹಾಗೂ ಒಳಾಂಗಣ ಕ್ರೀಡಾಂಗಣ ಮತ್ತು ವ್ಯಾಯಾಮ ಶಾಲೆಯ ಉದ್ಘಾಟನೆ ಇದೇ ಸಂದರ್ಭದಲ್ಲಿ ನೆರವೇರಲಿದೆ.
ದನಗಳಿಗೆ ಬಾಯಿ ಹಾಗೂ ಗಂಟಲು ರೋಗಗಳು ಕಾಣಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಈ ಬಾರಿ ಜಾತ್ರೆಯಲ್ಲಿ ದನಗಳ ಪರಿಷೆ ನಡೆಸದಿರಲು ತೀರ್ಮಾನಿಸಲಾಗಿದೆ.
ವಸ್ತು ಪ್ರದರ್ಶನ: ಮಹೋತ್ಸವದಲ್ಲಿ ಕೃಷಿ, ಕೈಗಾರಿಕೆ, ಆರೋಗ್ಯ, ತಾಂತ್ರಿಕ ಮತ್ತು ವಾಣಿಜ್ಯ ವಿಭಾಗಗಳನ್ನೊಳಗೊಂಡ 500ಕ್ಕೂ ಹೆಚ್ಚು ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ಜ. 31ರಂದು ಕೃಷಿ ಸಮ್ಮೇಳನ ನಡೆಯಲಿದೆ. ರಾಜ್ಯ ಮಟ್ಟದ ಭಜನಾ ಮೇಳವನ್ನು ಆಯೋಜಿಸಲಾಗಿದ್ದು ಈ ವರೆಗೂ 450ಕ್ಕೂ ಹೆಚ್ಚು ತಂಡಗಳು ಹೆಸರು ನೋಂದಾಯಿಸಿವೆ. ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ರಾಜ್ಯದ ಪ್ರಮುಖ ಮಠಾಧೀಶರು, ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವರು, ರಾಜಕೀಯ ಮುಖಂಡರು, ಸಾಹಿತಿಗಳು, ಕಲಾವಿದರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಸಮಿತಿ ಸಂಚಾಲಕ ಎಸ್.ಎಂ. ಜಂಬುಕೇಶ್ವರ, ಜೆಎಸ್ಎಸ್ ಮಹಾಪೀಠದ ಸಂಪರ್ಕಾಧಿಕಾರಿ ಎಸ್. ವೀರಭದ್ರ ಗೋಷ್ಠಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

