ಧಾರವಾಡ

ಲೋಕಾ ದಾಳಿ: ರು. 1.19 ಕೋಟಿ ಅಕ್ರಮ ಆಸ್ತಿ ಪತ್ತೆ

Published On :

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಹುಬ್ಬಳ್ಳಿ ನಗರ ಯೋಜನಾ ಶಾಖೆಯ ಸಹಾಯಕ ಎಂಜಿನಿಯರ್ ಸುಭಾಶ್ಚಂದ್ರ ಪುಟ್ಟಣ್ಣನವರಗೆ ಸೇರಿದ ಜೆ.ಪಿ. ನಗರದ ಮೂರು ಮನೆ ಮೇಲೆ ಬುಧವಾರ ಬೆಳಗ್ಗೆ ದಾಳಿ ನಡೆಸಿರುವ ಲೋಕಾಯುಕ್ತರು ರು. 1.19 ಕೋಟಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಮೂರು ಪ್ರತ್ಯೇಕ ತಂಡಗಳಲ್ಲಿ ಏಕಕಾಲಕ್ಕೆ ಪುಟ್ಟಣ್ಣವರ ಮನೆ ಮೇಲೆ ದಾಳಿ ನಡೆದಿದೆ. ಈ ಸಂದರ್ಭ ಪುಟ್ಟಣ್ಣನವರ ರು. 1.52 ಕೋಟಿಯ ಸ್ಥಿರ ಹಾಗೂ ಚರಾಸ್ತಿ ಹೊಂದಿರುವುದು ಕಂಡುಬಂದಿದೆ. ಇವರ ಖರ್ಚು 32.80 ಲಕ್ಷ ಎಂದು ಗೊತ್ತಾಗಿದೆ. ಪುಟ್ಟಣ್ಣನವರ ಒಟ್ಟಾರೆ ಆಸ್ತಿ ರು. 1.85 ಕೋಟಿ. ಈ ಪೈಕಿ ಅವರು ನಿರ್ವಹಿಸುತ್ತಿರುವ ಹುದ್ದೆಯಿಂದ ರು. 66.60 ಲಕ್ಷ ಆದಾಯ ಹೊಂದಿರುವುದಾಗಿ ದಾಖಲೆಗಳು ಸಿಕ್ಕಿದ್ದು, 1.19 ಕೋಟಿ ಅಕ್ರಮ ಆಸ್ತಿಯೆಂದು ತಿಳಿದು ಬಂದಿದೆ.
ಜೆ.ಪಿ. ನಗರದಲ್ಲಿ ಮೂರು ಮನೆ, 2 ಕಾರು, 3 ಬೈಕ್, ಟ್ರ್ಯಾಕ್ಟರ್, ರು. 5.31 ಲಕ್ಷ ನಗದು, 565 ಗ್ರಾಂ ಚಿನ್ನಾಭರಣ, 1700 ಗ್ರಾಂ ಬೆಳ್ಳಿಯ ವಸ್ತು, ಶಿಗ್ಗಾವಿಯ ಸೋಮಾಪುರದಲ್ಲಿ 7.5 ಎಕರೆ ಜಮೀನು ಹೊಂದಿರುವುದು ಪತ್ತೆಯಾಗಿದೆ. ಪುಟ್ಟಣ್ಣನವರ ಮೇಲೆ ಸಾಕಷ್ಟು ಆರೋಪಗಳಿದ್ದವು. ಕಟ್ಟಡ ನಿರ್ಮಾಣ ಅನುಮತಿ ಸೇರಿದಂತೆ ಪಾಲಿಕೆಯ ಇನ್ನಿತರ ಕೆಲಸ ಕಾರ್ಯಕ್ಕೆ ಬಂದ ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದ ಆರೋಪವಿತ್ತು. ಇವರ ಕಾರ್ಯ ವೈಖರಿಯ ಬಗ್ಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿಯೂ ಅಪಸ್ವರವೆದ್ದಿತ್ತು. ಆದರೆ, ರಾಜಕೀಯ ಪ್ರಭಾವ ಹೊಂದಿದ್ದರಿಂದ ಅಧಿಕಾರಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಪುಟ್ಟಣ್ಣನವರ ಭ್ರಷ್ಟ ಅಧಿಕಾರಿಯೆಂದು ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದಾಗಿ ಲೋಕಾಯುಕ್ತ ಎಸ್ಪಿ ಕೆ. ಪರಶುರಾಮ ತಿಳಿಸಿದ್ದಾರೆ. ದಾಳಿಯಲ್ಲಿ ಅಧಿಕಾರಿಗಳಾದ ಶಿವಳ್ಳಿ, ಕೆ. ಪಿ. ಅಸುಂಡಿ, ಹುಲ್ಲಣ್ಣವರ, ಎಂ.ಎಚ್. ಬಿದ್ರಿ, ಸಿಬ್ಬಂದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.