ಧಾರವಾಡ

ವಿದ್ಯುತ್ ಕಳವು, ಸೋರಿಕೆ ತಡೆ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 29
ರೈತಾಪಿ ವರ್ಗ ಸೇರಿದಂತೆ ಶ್ರೀಸಾಮಾನ್ಯರಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಅನುಕೂಲವಾಗುವಂತಹ 'ಹೈ ವೋಲ್ಟೇಜ್ ಡಿಸ್ಟ್ರಿಬ್ಯೂಶನ್ ಸಿಸ್ಟಮ್‌' (ಎಚ್‌ಡಿವಿಎಸ್) ಎಂಬ ಪೈಲೆಟ್ ಪ್ರೋಜೆಕ್ಟ್‌ನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹೆಸ್ಕಾಂ ದಿಟ್ಟ ಹೆಜ್ಜೆ ಇರಿಸಿದ್ದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ.
ಎಚ್‌ಡಿವಿಎಸ್‌ನ ಸಮರ್ಪಕ ಅನುಷ್ಠಾನದಿಂದ ಹೆಸ್ಕಾಂ ವ್ಯಾಪ್ತಿಯಲ್ಲಿ ಆಗಾಗ ನಡೆಯುವ ಅಸಮರ್ಪಕ ವಿದ್ಯುತ್ ಕಡಿತ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಲಿದೆ.
ಅಲ್ಲದೆ, ಲೋ ಟೆನ್ಷನ್ (ಎಲ್‌ಟಿ) ಲೈನ್‌ನಿಂದ ಸೋರಿಕೆಯಾಗುವ ವಿದ್ಯುತ್ ಪ್ರಮಾಣವನ್ನು ತಡೆಹಿಡಿಯಲು ಸಾಧ್ಯ ಮಾತ್ರವಲ್ಲದೆ, ವಿದ್ಯುತ್ ಕಳ್ಳತನ ತಪ್ಪಿಸಬಹುದು. ಹೊಸ ಯೋಜನೆ ಅನುಷ್ಠಾನದಿಂದಾಗಿ ಈ ಎರಡೂ ಮೂಲಗಳಿಂದ ಉಳಿತಾಯವಾಗುವ ಶೇ. 9ರಿಂದ 10ರಷ್ಟು ವಿದ್ಯುತ್‌ನ್ನು ನೂರಾರು ಗೃಹ ಬಳಕೆಯ ಗ್ರಾಹಕರಿಗೆ ವಿತರಿಸಬಹುದಾಗಿದೆ.
ರು. 165 ಕೋಟಿ: ಎಚ್‌ಡಿವಿಎಸ್ ಯೋಜನೆ ಅನುಷ್ಠಾನಕ್ಕೆ ಹೆಸ್ಕಾಂ ಒಟ್ಟು ರು. 165 ಕೋಟಿ ವ್ಯಯಿಸಲಿದೆ. ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು 9 ತಿಂಗಳುಗಳ ಅವಧಿಯಲ್ಲಿ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಬ್ಯಾಡಗಿ ವಿಭಾಗದಲ್ಲಿ ಬರುವ ಕುಮ್ಮೂರ ಫೀಡರ್‌ನಲ್ಲಿ ಈ ಪೈಲೆಟ್ ಪ್ರೋಜೆಕ್ಟನ್ನು ಅನುಷ್ಠಾನಗೊಳಿಸಲು ಈಗಾಗಲೇ ರು. 3 ಕೋಟಿ ವೆಚ್ಚದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಅನಧಿಕೃತ ಲೈನ್: ವಿದ್ಯುತ್ ಸೋರಿಕೆ ತಡೆಗಟ್ಟುವುದಲ್ಲದೆ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ವಿದ್ಯುತ್ ಕಳ್ಳತನ ಪ್ರಕರಣಗಳನ್ನು ತಕ್ಷಣಕ್ಕೆ ಪತ್ತೆ ಹಚ್ಚಲು ಈ ಯೋಜನೆ ಅತ್ಯಂತ ಸಹಕಾರಿಯಾಗಲಿದೆ. ಎಲ್‌ಟಿ ಲೈನ್‌ಗಳಲ್ಲಿ ಅನಧಿಕೃತವಾಗಿ ಕೇಬಲ್ ಹಾಕಿಕೊಂಡು ವಿದ್ಯುತ್ ಕಳ್ಳತನ ಮಾಡುವಂತಹ ಸಾಧ್ಯತೆಗಳು ಇದರಿಂದ ಸಾಕಷ್ಟು ಪ್ರಮಾಣದಲ್ಲಿ ತಗ್ಗಿಸಬಹುದು. ಈ ಯೋಜನೆ ಅಡಿಯಲ್ಲಿ ಎಲ್‌ಟಿ ಲೈನ್‌ಗಳ ಪ್ರಮಾಣ ತೀರಾ ಕಮ್ಮಿಯಾಗಿರುವುದರಿಂದ ಯಾವುದೇ ಕಾರಣಕ್ಕೂ ಸೋರಿಕೆ ಹಾಗೂ ಭಾರಿ ಪ್ರಮಾಣದಲ್ಲಿ ವಿದ್ಯುತ್ ಕಳ್ಳತನ ಮಾಡುವುದು ಅಸಾಧ್ಯವೇ ಸರಿ!
ಸದಲಗಾ ವಿಭಾಗದಲ್ಲಿ ಈ ಪೈಲೆಟ್ ಪ್ರೋಜೆಕ್ಟನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಲು ಹೆಸ್ಕಾಂ ಅಧಿಕಾರಿಗಳು ಯೋಜನೆ ರೂಪಿಸಿದ್ದಾರಲ್ಲದೆ, ಎಚ್‌ಡಿವಿಎಸ್ ಅನುಷ್ಠಾನದ ನಂತರ, ರೈತರು ಹಾಗೂ ಗ್ರಾಹಕರಿಂದ ಬರುವ ಪ್ರತಿಕ್ರಿಯೆಯನ್ನು ಆಧರಿಸಿ ಹೆಸ್ಕಾಂ ವ್ಯಾಪ್ತಿಯ ಮತ್ತಿತರ ವಿಭಾಗಗಳಲ್ಲಿಯೂ ಈ ಯೋಜನೆ ವಿಸ್ತರಿಸಲು ಉದ್ದೇಶಿಸಲಾಗಿದೆ.
ಜೋಡಣೆ: ವಿದ್ಯುತ್ ಸೋರಿಕೆ ತಡೆಗಟ್ಟಲು ಪ್ರಸಕ್ತ ವರ್ಷವೇ ಹೆಸ್ಕಾಂ ವ್ಯಾಪ್ತಿಯಲ್ಲಿ ಬರುವ 950 ಕಿಲೋ ಮೀಟರ್ ಲೋ ಟೆನ್ಷನ್ (ಎಲ್‌ಟಿ) ಮತ್ತು ಹೈ ಟೆನ್ಷನ್ (ಎಚ್‌ಟಿ) ಕೇಬಲ್‌ಗಳ ಜೋಡಣಾ ಕಾರ್ಯ ಕೈಗೆತ್ತಿಕೊಳ್ಳಲಿದೆ.
ಇದರಿಂದ ಉಳಿತಾಯವಾಗುವ ವಿದ್ಯುತ್‌ನ್ನು ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ ವಿತರಿಸಲು ಅನುಕೂಲವಾಗಲಿದೆ. ಹೆಸ್ಕಾಂ ವ್ಯಾಪ್ತಿಯಲ್ಲಿ ಎಲ್‌ಟಿ ಮತ್ತು ಎಚ್‌ಟಿ ಕೇಬಲ್‌ಗಳು 1.5 ಲಕ್ಷ ಕಿಲೋ ಮೀಟರ್ ಉದ್ದದಲ್ಲಿ ಪಸರಿಸಿಕೊಂಡಿವೆ. ಆದ್ದರಿಂದ ಅತ್ಯಂತ ಅವಶ್ಯಕ ಎಂದು ಕಂಡು ಬರುವ ಪ್ರದೇಶಗಳಲ್ಲಿ ಈ ಜೋಡಣಾ ಕಾರ್ಯ ಕೈಗೆತ್ತಿಕೊಳ್ಳಲು ಹೆಸ್ಕಾಂ ಯೋಜನೆ ರೂಪಿಸಿದೆ.
11 ಕೆವಿ, 33 ಕೆವಿ ಹಾಗೂ 440 ವೋಲ್ಟೇಜ್ ಕೇಬಲ್‌ಗಳನ್ನು ಮರು ಜೋಡಣೆ ಮಾಡಲಾಗುವುದು. ಇದರಿಂದ ಕೇಬಲ್‌ಗಳ ಸಾಮರ್ಥ್ಯ ಹೆಚ್ಚಾಗಿ, ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಸಾಧ್ಯವಾಗಲಿದೆ.
ಸಬ್ ಡಿವಿಜನ್: ಕೆಲವು ಬಾರಿ ಹೈ ವೋಲ್ಟೇಜ್ ವಿದ್ಯುತ್ ಪೂರೈಕೆಯಿಂದಲೂ ಹೆಸ್ಕಾಂಗೆ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗದೆ ಇರುವಂತಹ ಅನೇಕ ಉದಾಹರಣೆಗಳು ನಿತ್ಯವೂ ಕಂಡು ಬರುತ್ತೀವೆ. ಎಲ್‌ಟಿ ಮತ್ತು ಎಚ್‌ಟಿ ಲೈನ್‌ಗಳ ಜೋಡಣೆಯ ನಂತರ, ಹೆಸ್ಕಾಂ ವ್ಯಾಪ್ತಿಯಲ್ಲಿನ ಎಲ್ಲ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಲು 3 ಹೊಸ ಸಬ್ ಡಿವಿಜನ್‌ಗಳ ಸ್ಥಾಪನೆಗೂ ಹೆಸ್ಕಾಂ ಯೋಜನೆ ರೂಪಿಸಿದೆ.
ಹಾವೇರಿ ಜಿಲ್ಲೆಯ ಹಲ್ಲೂರು, ಬಿಜಾಪುರ ಜಿಲ್ಲೆಯ ತಿಡಗುಂಡಿ ಹಾಗೂ ಬಾಗಲಕೋಟೆ ಜಿಲ್ಲೆಯ ಜಗದಲನವಡಗಿಯಲ್ಲಿ ಈ ಸಬ್ ಡಿವಿಜನ್ ಆರಂಭಗೊಳ್ಳಲಿವೆ. ಉತ್ತರ ಕನ್ನಡದ ಮಸ್ತಿಕಟ್ಟಾದಲ್ಲಿ ಮುಂಬರುವ ದಿನಗಳಲ್ಲಿ 4ನೇ ಸಬ್ ಡಿವಿಜನ್ ಆರಂಭಿಸಬೇಕೆಂಬ ಉದ್ದೇಶ ಹೆಸ್ಕಾಂ ಹೊಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಒಟ್ಟಾರೆ, ಎಟ್‌ಡಿವಿಎಸ್ ಯೋಜನೆ ಅನುಷ್ಠಾನದಿಂದ ವಿದ್ಯುತ್ ಸೋರಿಕೆ ಹಾಗೂ ಕಳ್ಳತನಕ್ಕೆ ಬ್ರೇಕ್ ಹಾಕುವ ಮೂಲಕ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಅನುಕೂಲಕರವಾದ ಈ ಯೋಜನೆ ಆದಷ್ಟು ಶೀಫ್ರದಲ್ಲೇ ಅನುಷ್ಠಾನಕ್ಕೆ ಬರಲಿ ಎನ್ನುವುದು ಗ್ರಾಹಕರ ಆಶಯ.
- ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.