ಧಾರವಾಡ

ಕುವೆಂಪುಗೆ ಆರಾಧಕರು, ಬೇಂದ್ರೆಗೆ ಜಾಣರು

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 31
ಕುವೆಂಪು ಅವರಿಗೆ ಮೈಸೂರಿನಲ್ಲಿ ಆರಾಧಕರ ಗುಂಪಿದ್ದರೆ, ಬೇಂದ್ರೆ ಅವರಿಗೆ ಧಾರವಾಡದಲ್ಲಿ ಜಾಣರ ಗುಂಪಿತ್ತು ಎಂದು ಹಿರಿಯ ಕವಿ, ಚಿಂತಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶುಕ್ರವಾರ ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನಿಂದ ಬೇಂದ್ರೆ ಅವರ 119ನೇ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ಅಂಬಿಕಾತನಯದತ್ತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕುವೆಂಪು ಅವರ ಆರಾಧಕರ ಗುಂಪು ಅವರನ್ನು ಆರಾಧನೆ ಮಾಡಿತಷ್ಟೇ. ಅವರ ಸಾಹಿತ್ಯದ ಕೃಷಿಯನ್ನು ಸರಿಯಾದ ಕ್ರಮದಲ್ಲಿ ಮುಟ್ಟಿಸುವಲ್ಲಿ ವಿಫಲವಾಯಿತು. ಆದರೆ, ಬೇಂದ್ರೆ ಅವರೊಂದಿಗೆ ಇದ್ದ ಜಾಣರ ಗುಂಪು ಅವರನ್ನು ಸಾಹಿತ್ಯದ ದಾರಿಯಲ್ಲಿ ಸರಿಯಾಗಿ ಕ್ರಮಿಸುವ ಕೆಲಸ ಮಾಡಿತು ಎಂದರು.
ಬೇಂದ್ರೆ ಅವರ ಕಾವ್ಯ ಇವತ್ತಿಗೂ ಪ್ರಸ್ತುತ ಎನ್ನುವುದಕ್ಕೆ ಅವರ ಹಲವು ಕಾವ್ಯಗಳೇ ಸಾಕ್ಷಿ. ಬೇಂದ್ರೆ ಅವರ ಕವಿತೆಗಳ ಬಗ್ಗೆ ಹಿಂದಿನವರು ಕಟ್ಟಿಕೊಟ್ಟ ಅರ್ಥ ಪರಂಪರೆಯನ್ನು ಮುರಿದು ಯುವ ಸಾಹಿತಿಗಳು ಬೇರೆ ರೀತಿ ಬೇಂದ್ರೆ ಅವರನ್ನು ವಿಶ್ಲೇಷಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಸಾಹಿತಿಗಳಾದ ಡಾ. ಗುರುಲಿಂಗ ಕಾಪಸೆ ಹಾಗೂ ಡಾ. ಜಿ. ಕೃಷ್ಣಪ್ಪ ಅವರಿಗೆ ಅವರಿಗೆ ಅಂಬಿಕಾತನಯದತ್ತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಗುರುಲಿಂಗ ಕಾಪಸೆ, ಬೇಂದ್ರೆ ಅವರ ಪ್ರಶಸ್ತಿಗಿಂತ ಈ ಮೂಲಕ ಅವರ ಅನುಗ್ರಹ ದೊರೆತಿದೆ. ಯುಗದ, ಜಗದ, ಅವಧೂತ ಕವಿ ಬೇಂದ್ರೆ. 1946ರ ಮೊದಲೇ ಬೇಂದ್ರೆ ಅವರ ಪರಿಚಯವಾಯಿತು. ಬೇಂದ್ರೆ ಹಾಗೂ ಮಧುರಚೆನ್ನರ ಗೆಳೆತನವೇ ಅವರಿಬ್ಬರ ಶಿಷ್ಯನಾಗಲು ಕಾರಣ. ತದನಂತರ ಸೊಲ್ಲಾಪುರದ ಸಮೀಪದ ಹಳ್ಳಿಯಲ್ಲಿ ಶಿಕ್ಷಕನಾಗಿದ್ದಾಗ, ಅವರ ಸಂಬಂಧಿಕ ಕೆ.ಜೆ. ಬೇಂದ್ರೆ ಅವರು ರೇಲ್ವೆ ನಿಲ್ದಾಣದ ಮಾಸ್ಟರ್ ಆಗಿದ್ದರು. ಇಬ್ಬರು ಸೇರಿ 15 ದಿನಕ್ಕೊಮ್ಮೆ ಸೊಲ್ಲಾಪುರಕ್ಕೆ ಹೋಗಿ ಬೇಂದ್ರೆ ಅವರನ್ನು ಭೇಟಿ ಮಾಡುತ್ತಿದ್ದೆವು. ತಾವು ಬರೆದ ಹೊಸ ಕವನಗಳನ್ನು ನಮ್ಮ ಮುಂದೆ ಓದುತ್ತಿದ್ದರು. ಮಧುರಚೆನ್ನರು ನನ್ನ ಗುರುಗಳಾಗಿದ್ದರೂ ಅನೇಕ ರೀತಿಯಿಂದ ಬೇಂದ್ರೆ ಅವರು ನನ್ನ ಗುರು. ಬೇಂದ್ರೆ ಅವರು ಬರೀ ಕವಿ ಅಲ್ಲ. ದೊಡ್ಡ ಸಾಧಕ. ಇದೀಗ ಅವರ ಹೆಸರಿನ ಪ್ರಶಸ್ತಿ ಬಂದಿದ್ದು ಸಂತಸ ತಂದಿದೆ ಎಂದರು.
ಬೇಂದ್ರೆ ಜಾದೂಗಾರ ಕವಿ ಎಂದು ವರ್ಣಿಸಿದ ಜಿ. ಕೃಷ್ಣಪ್ಪ, ತಮ್ಮ ಕವನಗಳ ಮೂಲಕ ಕನ್ನಡಿಗರನ್ನು ಬೇಂದ್ರೆ ಮಂತ್ರಮುಗ್ಧರನ್ನಾಗಿಸಿದ್ದಾರೆ. ಪ್ರೌಢಶಾಲೆಯಲ್ಲಿದ್ದಾಗಿನಿಂದಲೇ ಬೇಂದ್ರೆ ಅವರ ಚೈತನ್ಯದ ಅಧ್ಯಯನ ಮಾಡಿದ್ದೇನೆ. ಇದೀಗ ಅವರ ಪ್ರಶಸ್ತಿ ಬಂದಿದ್ದು, ಪ್ರಶಸ್ತಿ ರು. 50 ಸಾವಿರ ಮೊತ್ತವನ್ನು ಬೇಂದ್ರೆ ಕಾವ್ಯ ಕೂಟದ ಮೂಲಕ ಬೇಂದ್ರೆ ಕವನಗಳ ಅಧ್ಯಯನಕ್ಕೆ ಬಳಸಿಕೊಳ್ಳುತ್ತೇನೆಂದು ಹೇಳಿದರು.
ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಡಿ. ಹಿರೇಗೌಡರ ಸ್ವಾಗತಿಸಿದರು. ನಾಡೋಜ ಚೆನ್ನವೀರ ಕಣವಿ, ಜಿ.ಎಸ್. ಆಮೂರ, ಜಿ.ಎಂ. ಹೆಗಡೆ, ವಾಮನ ಬೇಂದ್ರೆ, ಸಿದ್ದಲಿಂಗ ಪಟ್ಟಣಶೆಟ್ಟಿ, ಹೇಮಾ ಪಟ್ಟಣಶೆಟ್ಟಿ, ಡಾ. ಡಿ.ಎಂ. ಹಿರೇಮಠ ಇದ್ದರು.
ವಿದ್ವತ್ತಿನ ಪ್ರತೀಕ ಡಾ. ಕಾಪಸೆ
ಧಾರವಾಡ: ಮಧುರ ಚೆನ್ನರ ಕಾವ್ಯ ಪುಷ್ಪದ ಪರಿಮಳವನ್ನು ನಾಡಿಗೆ ಬಿತ್ತರಿಸಿದ ಡಾ. ಗುರುಲಿಂಗ ಕಾಪಸೆ, ವಿದ್ವತ್ತು, ವಿನಯ ಶೀಲತೆಗಳ ಸಾಕಾರಮೂರ್ತಿ ಎಂದು ಪ್ರೊ. ಬಸವರಾಜ ಜಗಜಂಪಿ ಹೇಳಿದರು.
ದ.ರಾ. ಬೇಂದ್ರೆ ಜನ್ಮದಿನದ ನಿಮಿತ್ತ ಶುಕ್ರವಾರ ಜರುಗಿದ ಅಂಬಿಕಾತನಯದತ್ತ ಪ್ರಶಸ್ತಿ ಪುರಸ್ಕೃತರ ಸಾಹಿತ್ಯ ಸಾಧನೆ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಬೇಂದ್ರೆ-ಮಧುರಚೆನ್ನ ಸಖ್ಯಯೋಗ ಕಾಪಸೆಯವರ ಹಲವು ಕೃತಿಗಳಲ್ಲಿ ಮಾದರಿ ಕೃತಿಯಾಗಿದ್ದು, ಈ ಬಾರಿಯ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಅವರಿಗೆ ದೊರೆತದ್ದು ಸೂಕ್ತ ಎಂದರು.
ಇನ್ನೊರ್ವ ಪ್ರಶಸ್ತಿ ಪುರಸ್ಕೃತ ಡಾ. ಜಿ. ಕೃಷ್ಣಪ್ಪ ಕುರಿತು ಮಾತನಾಡಿದ ಡಾ. ಜಿ.ಬಿ. ಹರೀಶ, ವಿದ್ವತ್ತೆಂದರೆ ವಿಶ್ವವಿದ್ಯಾಲಯ ಕೇಂದ್ರಿತವಾಗಿದ್ದು ಮಾತ್ರ ಎಂಬ ಮಾತಿಗೆ ಅಪವಾದ ಡಾ. ಜಿ. ಕೃಷ್ಣಪ್ಪ. ಸ್ವಂತ ಪರಿಶ್ರಮದೊಂದಿಗೆ ಗೌರವ ಶ್ರದ್ಧೆಗಳಿಂದ ಬೇಂದ್ರೆ ಕಾವ್ಯ ಅಧ್ಯಯನ ಮಾಡಿದವರು ಡಾ. ಕೃಷ್ಣಪ್ಪ. ವರಕವಿಯ ಕಾವ್ಯವನ್ನು ಸಹೃದಯದಿಂದ ಜನರಿಗೆ ಪ್ರಾಮಾಣಿಕವಾಗಿ ಮುಟ್ಟಿಸುತ್ತಿರುವ ಡಾ. ಜಿ. ಕೃಷ್ಣಪ್ಪ ಅವರಿಗೆ ಲಭಿಸಿರುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.  
ಆನಂದ ಝುಂಜರವಾಡ ಸಂಪಾದಿಸಿದ ಬೇಂದ್ರೆ ಬಗ್ಗೆ ಮರಾಠಿ ಸಾಹಿತಿಗಳು ಬರೆದ ಲೇಖನಗಳ ಕನ್ನಡಾನುವಾದದ ಪುಸ್ತಕ ದೂರ್ವಾಂಕುರ ಕೃತಿಯನ್ನು ಪ್ರೊ. ದುಷ್ಯಂತ ನಾಡಗೌಡ ಬಿಡುಗಡೆಗೊಳಿಸಿದರು. ವರಕವಿ ಬೇಂದ್ರೆ ಕುರಿತು ಮರಾಠಿ ಲೇಖಕರ ಅಪರೂಪ ಲೇಖನಗಳ ಸಂಗ್ರಹ ದೂರ್ವಾಂಕುರ ಸಂಗ್ರಹ ಯೋಗ್ಯ ಎಂದರು. ಟ್ರಸ್ಟ್ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸಿದ್ದರು. ಶ್ರುತಿ ಮೇಗುಂಡಿ ಬೇಂದ್ರೆ ಗೀತೆಗಳನ್ನು ಪ್ರಸ್ತುತಪಡಿಸಿದರು. ಬೇಂದ್ರೆ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಬಿ.ಡಿ. ಹಿರೇಗೌಡರ ಸ್ವಾಗತಿಸಿದರು. ನರಸಿಂಹ ಪರಾಂಜಪೆ, ಆನಂದ ಜಕ್ಕಣ್ಣವರ, ಡಾ.ಎಚ್.ಬಿ. ಪೂಜಾರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.