ಧಾರವಾಡ

ಹಂದಿ ತೆರವಿಗೆ ಸಹಕರಿಸದ ಜಿಲ್ಲಾಡಳಿತ

Published On :

ಹುಬ್ಬಳ್ಳಿ: ಅವಳಿ ನಗರದಲ್ಲಿ ಹಂದಿ ತೆರವು ಕಾರ್ಯಾಚರಣೆಗೆ ಸಹಕರಿಸದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿರುದ್ಧ ಮಹಾನಗರ ಪಾಲಿಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ, ಜಿಲ್ಲಾಡಳಿತದ ನಿಷ್ಕ್ರಿಯತೆ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸುವಂತೆ ಒತ್ತಾಯಿಸಿದರು.
ಗುರುವಾರ ಮಹಾನಗರ ಪಾಲಿಕೆ ವಿಶೇಷ ಸಾಮಾನ್ಯ ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲ ಸದಸ್ಯರು ಜಿಲ್ಲಾಡಳಿತ, ಮಹಾನಗರ ಪೊಲೀಸ್ ಇಲಾಖೆ ಅಸಹಕಾರದ ವರ್ತನೆ ಖಂಡಿಸಿದರು.
ಅವಳಿ ನಗರದಲ್ಲಿ ಹಂದಿಗಳನ್ನು ಹಿಡಿದು ಸಾಗಿಸಲು ವಿಶೇಷ ಟಾಸ್ಕ್ ಫೋರ್ಸ್ ಸ್ಥಾಪಿಸಬೇಕು, ಅದಕ್ಕಾಗಿ ರಾಜ್ಯ ಸರ್ಕಾರದಿಂದ ವಿಶೇಷ ಭದ್ರತಾ ಪಡೆ ತರಿಸಿಕೊಳ್ಳುವ ಸಲಹೆಗಳು ವಿಶೇಷ ಸಾಮಾನ್ಯ ಸಭೆಯಲ್ಲಿ ಕೇಳಿಬಂದವು.
ಚುನಾವಣೆ ಅಥವಾ ಗಲಭೆಗಳು ನಡೆದಾಗ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಭದ್ರತೆ ಒದಗಿಸುವ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಹಂದಿ ತೆರವು ಕಾರ್ಯಾಚರಣೆ ಸಂದರ್ಭದಲ್ಲೂ ಹೆಚ್ಚಿನ ಭದ್ರತೆ ಒದಗಿಸುವ ಜೊತೆಗೆ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಬೇಕೆಂದು ಸದಸ್ಯರು ಒತ್ತಾಯಿಸಿದರು.
ಹಂದಿ ತೆರವು ಕಾರ್ಯಾಚರಣೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲ ಶಾಸಕರು, ಸಂಸದರು ಬೆಂಬಲ ವ್ಯಕ್ತಪಡಿಸಿದ್ದರೂ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಂದ ಸಹಕಾರ ದೊರಕುತ್ತಿಲ್ಲವೆಂದು ದೂರಿದ ಮಾಜಿ ಮೇಯರ್, ಬಿಜೆಪಿ ಸದಸ್ಯ ವೀರಣ್ಣ ಸವಡಿ, ಹಂದಿ ತೆರವು ಮಾಡದಂತೆ ಕಾಣದ ಕೈಗಳ ಒತ್ತಡ ಇದ್ದರೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಹಂದಿ ಹಿಡಿಯಲು ತೆರಳಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆದಿದ್ದರೂ ಪಾಲಿಕೆ ಆಯುಕ್ತರಾಗಲಿ ಅಥವಾ ಇತರ ಅಧಿಕಾರಿಗಳಾಗಲಿ ತಕ್ಷಣ ದೂರು ನೀಡಲಿಲ್ಲವೆಂದು ದೂರಿದ ಬಿಜೆಪಿ ಹಿರಿಯ ಸದಸ್ಯ ಡಾ. ಪಾಂಡುರಂಗ ಪಾಟೀಲ, ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸುವ ಬದಲು ಚಿಟಗುಪ್ಪಿಯಲ್ಲಿ ಚಿಕಿತ್ಸೆ ನೀಡಿದ್ದಕ್ಕಾಗಿ ಆರೋಗ್ಯಾಧಿಕಾರಿ ಡಾ. ಪ್ರಭು ಬಿರಾದಾರ ಅವರನ್ನು ತರಾಟೆಗೆ ತೆಗೆದುಕೊಂಡರು.
ಹಂದಿ ಸಾಕಾಣಿಕೆಗೆ ನಗರದ ಹೊರಪ್ರದೇಶದಲ್ಲಿ ಪ್ರತ್ಯೇಕ ಜಾಗ ಒದಗಿಸುವಂತೆ ಕಾಂಗ್ರೆಸ್‌ನ ಪ್ರಕಾಶ ಕ್ಯಾಕರಟ್ಟಿ ಒತ್ತಾಯಿಸಿದರು. ಹಂದಿಗಳೊಂದಿಗೆ ಬಿಡಾಡಿ ದನ ಹಾಗೂ ಬೀದಿ ನಾಯಿಗಳನ್ನು ಸಹ ಮಹಾನಗರ ವ್ಯಾಪ್ತಿಯಿಂದ ದೂರ ಸಾಗಿಸುವಂತೆ ಜೆಡಿಎಸ್‌ನ ರಾಜಣ್ಣ ಕೊರವಿ ಮನವಿ ಮಾಡಿದರು.
ಹಂದಿ ತೆರವು ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಪಾಲಿಕೆ ಆರೋಗ್ಯಾಧಿಕಾರಿ ಡಾ. ಪ್ರಭು ಬಿರಾದಾರ ಧಾರವಾಡದಲ್ಲಿ 450, ಹುಬ್ಬಳ್ಳಿಯಲ್ಲಿ 250 ಹಂದಿಗಳನ್ನು ಹಿಡಿದು ಸಾಗಿಸಲಾಗಿದೆ. ಹಂದಿ ಹಿಡಿಯುವುದಕ್ಕಾಗಿ ತುಮಕೂರಿನಿಂದ 60 ಪರಿಣತರನ್ನು ಕರೆಯಿಸಲಾಗಿದೆ ಎಂದು ತಿಳಿಸಿದರು.
ಹಂದಿ ತೆರವು ಕಾರ್ಯಾಚರಣೆಗೆ ಸದಸ್ಯರಿಂದ ಸೂಕ್ತ ಸಹಕಾರ ಸಿಗುತ್ತಿಲ್ಲವೆಂದು ಮೇಯರ್ ಶಿವು ಹಿರೇಮಠ ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಖಂಡಿಸಿದ ಪ್ರತಿಪಕ್ಷ ನಾಯಕ ಯಾಸಿನ್ ಹಾವೇರಿಪೇಟ, ಕಾಂಗ್ರೆಸ್‌ನ ಗಣೇಶ ಟಗರಗುಂಟಿ, ಕಾರ್ಯಾಚರಣೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ಕಾರ್ಯಾಚರಣೆ ನಡೆಯುವ ಸ್ಥಳವನ್ನು ಮುಂಚಿತವಾಗಿ ಸೂಚಿಸಲಾಗುವುದರಿಂದ ಸದಸ್ಯರು ಹಾಜರಿರುವಂತೆ ಮೇಯರ್ ಹಿರೇಮಠ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.