ಧಾರವಾಡ

ಜನುಮದ ಜೋಡಿ ಗಳಿಸಿದ್ದು ರು. 11 ಕೋಟಿ: ನಾಗಾಭರಣ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 11
18 ವರ್ಷಗಳ ಹಿಂದೆ ತೆರೆಗೆ ಬಂದ 'ಜನುಮದ ಜೋಡಿ' ಚಿತ್ರಕ್ಕೆ ನಾವು ಖರ್ಚು ಮಾಡಿದ್ದು ಬರೀ ರು. 70 ಲಕ್ಷ. ಆದರೆ, 100 ಚಿತ್ರಮಂದಿರಗಳಲ್ಲಿ 25 ವಾರಗಳ ಕಾಲ ಪ್ರದರ್ಶನಗೊಂಡ ಈ ಚಿತ್ರ ರು. 11 ಕೋಟಿ ಗಳಿಸಿತೆಂದು ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.
ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಚಿತ್ರಾ ಫಿಲ್ಮ್ ಸೊಸೈಟಿ ಹಮ್ಮಿಕೊಂಡಿರುವ 'ನಾಗಾಭರಣ ಅನಾವರಣ' ಚಿತ್ರೋತ್ಸವದ 3ನೇ ದಿನ 'ಜನುಮದ ಜೋಡಿ' ಚಿತ್ರದ ಪ್ರದರ್ಶನದ ಬಳಿಕ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಿದ ನಾಗಾಭರಣ, ಈ ಚಿತ್ರವು ಬನಾಲಾಲ ಪಟೇಲ್ ಅವರ 'ಮಲೇಲಾ ಜೀವ' ಕಾದಂಬರಿ ಆಧರಿಸಿದ್ದು. ಹಾಡು, ಸಾಹಿತ್ಯ, ಜಾತೀಯತೆ ಪ್ರಧಾನವಾಗಿತ್ತು. ಲಾಭಕ್ಕಾಗಿ ಈ ಚಿತ್ರ ಮಾಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಬಯಲುಸೀಮೆ ಜನರ ಜೀವನವನ್ನು ಕಂಡರಿಸಿದ ಈ ಸಿನಿಮಾ ಮಂಡ್ಯ, ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ವ್ಯಾಪಾರ ದೃಷ್ಟಿಯ ಸಿನಿಮಾಗಳ ಮಧ್ಯೆ ತೆರೆಗೆ ಬರುವ ಇಂಥ ಚಿತ್ರಗಳ ಯಶಸ್ವಿಯಾಗುತ್ತವೆ. ಈಚೆಗೆ 'ಮುಂಗಾರು ಮಳೆ' ಬಂದಾಗ ಪ್ರೇಕ್ಷಕರಿಗೆ ಮುದ ನೀಡಿತು. ಆದರೆ, ಆ ಚಿತ್ರ ಯಾವುದೇ ನೈತಿಕ ಸಂಸ್ಕೃತಿಯನ್ನು ಹೇಳುತ್ತಾ ಹೋಗಲಿಲ್ಲ. ಆದರೆ, ಅಂದು ಜಾತೀಯತೆ, ಮತಾಂಧತೆ ಎಂಬುದು ಜಾಸ್ತಿ ಇತ್ತು. ಜನುಮದ ಜೋಡಿ ಚಿತ್ರ ಸಹಿತ ಜಾತೀಯತೆ, ಮತಾಂಧತೆ ಸಂಸ್ಕೃತಿಯನ್ನು ಬಿಂಬಿಸುತ್ತಾ ಹೋಗಿದ್ದರಿಂದ ಯಶಸ್ಸು ಕಂಡುಕೊಂಡಿತು. ಅಷ್ಟೇ ಅಲ್ಲ ಈ ಚಿತ್ರ ಜೀವನಕ್ಕೆ ಒಂದು ಮಾದರಿಯೂ ಹೌದು ಎಂದು ನಾಗಾಭರಣ ಪ್ರೇಕ್ಷಕರ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ನೀಡಿದರು.
ಧಾರವಾಡದ ದುರದೃಷ್ಟ: ಧಾರವಾಡದ ಸೃಜನಾ ಮಂದಿರದಲ್ಲಿ ಮೂರು ದಿನಗಳಿಂದ ಅದ್ಭುತವಾದ ಚಲನಚಿತ್ರೋತ್ಸವ ನಡೆಯುತ್ತಿದೆ. ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ನಿರ್ದೇಶಕರ 14 ಅತ್ಯುತ್ತಮ ಚಿತ್ರಗಳ ಪ್ರದರ್ಶನ ಇದೆ. ಆದರೆ, ಧಾರವಾಡದ ಜನತೆ ಮಾತ್ರ ಈ ಚಿತ್ರೋತ್ಸವಕ್ಕೆ ಮನೆ ಬಿಟ್ಟು ಹೊರ ಬರದಿರುವುದು ಉತ್ಸವಕ್ಕೆ ಕಳೆಗುಂದಿದೆ.
ನಿತ್ಯ ಮೂರು ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಹಾಗೂ ನಟರ ಜತೆಗೆ ಸಂವಾದವೂ ನಡೆಯುತ್ತಿದೆ. ದುರದೃಷ್ಟ ಎಂದರೆ, ಧಾರವಾಡದ ಜನತೆ ಮಾತ್ರ ಈ ಉತ್ಸವಕ್ಕೆ ಸಾಥ್ ನೀಡುತ್ತಿಲ್ಲ. ರಂಗ ಮಂದಿರದ ಕುರ್ಚಿಗಳು ಖಾಲಿ ಖಾಲಿ. ಸಂಘಟಕರು ಹಾಗೂ ಹತ್ತಾರು ಪ್ರೇಕ್ಷಕರನ್ನು ಹೊರತುಪಡಿಸಿ ಚಿತ್ರ ರಸಿಕರ ಕೊರತೆ ಎದ್ದು ಕಾಣುತ್ತಿದೆ. ಆಕಸ್ಮಿಕ, ಗ್ರಹಣ, ಬ್ಯಾಂಕರ ಮಾರ್ಗಯ್ಯ, ಶಿಶುನಾಥ ಶರೀಫ, ಚಿನ್ನಾರಿ ಮುತ್ತ, ಅನ್ವೇಷಣೆ, ಜನುಮದ ಜೋಡಿ, ವಿಮೋಚನೆ ಹಾಗೂ ಸಿಂಗಾರೆವ್ವ ಅಂತಹ ಅದ್ಭುತ ಚಿತ್ರಗಳ ಪ್ರದರ್ಶನವಾಗಿವೆ. ಆದರೆ, ಚಿತ್ರ ರಸಿಕರ ಕೊರತೆ ನಿರ್ದೇಶಕ ಹಾಗೂ ಸಂಘಟಕರಿಗೆ ತುಸು ಬೇಸರ ತರಿಸಿದ್ದೂ ನಿಜ.
ನಾಳೆಯಾದರೂ ಬನ್ನಿ: ಈ ಉತ್ಸವ ಜು. 13ರ ವರೆಗೆ ನಡೆಯಲಿದೆ. ಶನಿವಾರ ಹಾಗೂ ಭಾನುವಾರ ಇನ್ನೂ ಐದು ಚಿತ್ರಗಳ ಪ್ರದರ್ಶನ, ಕಾರ್ಯಾಗಾರ ಹಾಗೂ ಸಂವಾದ ಇದೆ. ಈಗಲಾದರೂ ಧಾರವಾಡದ ಮಂದಿ ಇಂತಹ ಅದ್ಭುತ ಚಿತ್ರೋತ್ಸವಕ್ಕೆ ಆಗಮಿಸಿ ಉತ್ಸವಕ್ಕೆ ಇನ್ನಷ್ಟು ಕಳೆ ತಂದುಕೊಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.