ಆಗಸ್ಟ್ ಕೊನೆಗೆ ಮಕ್ಕಳ ಚಲನಚಿತ್ರೋತ್ಸವ
ಧಾರವಾಡ: ಮಕ್ಕಳ ಚಲನಚಿತ್ರ ಪ್ರದರ್ಶನ ಅಂಗವಾಗಿ ಆಗಸ್ಟ್ ತಿಂಗಳಾಂತ್ಯಕ್ಕೆ ಚಲನಚಿತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸತೀಶ್ ಬಿ.ಸಿ. ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಮಕ್ಕಳ ಚಲನಚಿತ್ರೋತ್ಸವ ಪೂವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಚಲನಚಿತ್ರೋತ್ಸವ ಕಾರ್ಯಕ್ರಮಕ್ಕಾಗಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಎಲ್ಸಿಡಿ ಪ್ರೋಜೆಕ್ಟರ್ ಹಾಗೂ ಅಡಿಟೋರಿಯಂ ಇರುವ ಬಗ್ಗೆ ಪರಿಶೀಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರಪ್ಪ ಅವರಿಗೆ ಸೂಚಿಸಿದರು. ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಚಲನಚಿತ್ರೋತ್ಸವ ನಡೆಯುತ್ತಿದ್ದು, ಉಡುಪಿ, ಕೋಲಾರ, ಬಿಜಾಪುರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪ್ರಸಕ್ತ ವರ್ಷ ಏರ್ಪಡಿಸಲಾಗುತ್ತಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಯೋಜನಾಧಿಕಾರಿ ಮಾಲತಿ ಪೋಳ ಸಭೆಗೆ ತಿಳಿಸಿದರು. ಈ ಹಿಂದಿನ ದಿನಗಳಲ್ಲಿ ಚಲನಚಿತ್ರ ಮಂದಿರಗಳಲ್ಲಿ ರೀಲುಗಳ ಮುಖಾಂತರ ಚಲನಚಿತ್ರ ತೋರಿಸಲಾಗುತ್ತಿತ್ತು. ಇಂದು ಹೆಚ್ಚಿನ ಚಲನಚಿತ್ರ ಮಂದಿರಗಳಲ್ಲಿ ಸೆಟ್ಲೈಟ್ ಮುಖಾಂತರ ಬಿತ್ತರಿಸುವ ಚಲನಚಿತ್ರಗಳನ್ನು ಡೌನ್ಲೋಡ್ ಮಾಡಿಕೊಂಡು ಚಲನಚಿತ್ರ ತೋರಿಸುವ ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿದೆ. ಆದ್ದರಿಂದ ಸಿಡಿ, ಚಲನಚಿತ್ರ ರೀಲು ಇತ್ಯಾದಿಗಳನ್ನು ಬಳಸುತ್ತಿಲ್ಲವೆಂದು ಧಾರವಾಡದ ವಿಜಯ ಚಲನಚಿತ್ರ ಮಂದಿರದ ಮಾಲೀಕ ವಿ.ಎನ್. ಮುಧೋಳ ಸಭೆಗೆ ತಿಳಿಸಿದರು. ಇದರಿಂದಾಗಿ ಈ ವ್ಯವಸ್ಥೆಯನ್ನು ಪರ್ಯಾಯವಾಗಿ ಶಾಲೆಗಳಲ್ಲಿರುವ ಅಡಿಟೊರಿಯಂಗಳಲ್ಲಿ ಎಲ್ಸಿಡಿ ಪ್ರೋಜೆಕ್ಟರ್ ಮೂಲಕ ತೋರಿಸುವ ವ್ಯವಸ್ಥೆಗೆ ಕ್ರಮ ಸೂಕ್ತವಾದುದು ಎಂದು ಅವರು ಸಭೆಗೆ ತಿಳಿಸಿದರು. ಚೆನ್ನೈ ಮಕ್ಕಳ ಚಲನಚಿತ್ರ ಸಂಸ್ಥೆಯ ಚಲನಚಿತ್ರ ವಿತರಣಾಧಿಕಾರಿ ಚಾರ್ಲ್ಸ್ ಡಿಸೋಜಾ, ಈ ಮಕ್ಕಳ ಚಲನಚಿತ್ರೋತ್ಸವದಲ್ಲಿ 10 ದಿನಗಳವರೆಗೆ 8 ಕನ್ನಡ ಚಲನಚಿತ್ರಗಳು ಮತ್ತು 3 ಹಿಂದಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಹುಬ್ಬಳ್ಳಿಯ ಪದ್ಮಾ ಚಿತ್ರ ಮಂದಿರದ ಕೆ. ವಿನಾಯಕ, ರೂಪಂ ಚಿತ್ರ ಮಂದಿರದ ಸಿ.ಜಿ. ಮರಿಬಸಯ್ಯ, ಚಂದ್ರಕಲಾ ಚಿತ್ರ ಮಂದಿರದ ಮುನಿರ್, ಅಮೃತ್ ಚಿತ್ರ ಮಂದಿರದ ಅಮೃತ್ ಹಬೀಬ, ಧಾರವಾಡದ ಶ್ರೀನಿವಾಸ ಮತ್ತು ಪದ್ಮಾ ಚಿತ್ರ ಮಂದಿರದ ವೈ.ಎಸ್. ಕುಲಕರ್ಣಿ, ಲಕ್ಷ್ಮಿ ಚಿತ್ರ ಮಂದಿರದ ನೆರ್ಲೇಕರ ಸಲಹೆ-ಸೂಚನೆ ನೀಡಿದರು.
ಅಣ್ಣಿಗೇರಿಯಲ್ಲಿ ಶರಣ-ಶ್ರಾವಣ ಕಾರ್ಯಕ್ರಮ
ಅಣ್ಣಿಗೇರಿ: ಸ್ಥಳೀಯ ಬಸವ ಕೇಂದ್ರ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಶ್ರಾವಣ ಮಾಸದ ನಿಮಿತ್ತ ಜು. 27ರಿಂದ ಆ. 28ರ ವರೆಗೆ ಶರಣ ಶ್ರಾವಣ ಕಾರ್ಯಕ್ರಮ ಜರುಗಲಿದೆ. ಬಸವಣ್ಣ, ಸಿದ್ಧರಾಮೇಶ್ವರ, ಅಲ್ಲಮಪ್ರಭುದೇವರು, ನಿಜಗುಣ ಶಿವಯೋಗಿಗಳು, ಜೇಡರ ದಾಸಿಮಯ್ಯ ಹಾಗೂ ಶರಣರ ಆಯ್ದ ವಚನಗಳ ವಿಷಯ ಕುರಿತು ಉಪನ್ಯಾಸ ನಡೆಯಲಿದೆ. ನವಲಗುಂದ ಗವಿಮಠದ ಅಭಿನವ ಬಸವಲಿಂಗ ಶ್ರೀಗಳು ಸಾನಿಧ್ಯದಲ್ಲಿ ಬೈರನಹಟ್ಟಿ ದೊರೈಸ್ವಾಮಿ, ವಿರಕ್ತಮಠದ ಶಾಂತಲಿಂಗ ಶ್ರೀಗಳು ಭಾಗವಹಿಸುತ್ತಾರೆ. ವಿಶ್ವಾರಾಧ್ಯ ಸತ್ಯಂಪೇಟೆ, ಡಾ. ಗೀತಾ ಹರ್ಲಾಪುರ, ಪ್ರೊ. ಎಸ್.ಎಸ್. ಹರ್ಲಾಪುರ, ಡಾ. ಶಾಂತಾ ಲಕ್ಷ್ಮೇಶ್ವರ, ಗಿರಿಜಕ್ಕ ಧರ್ಮರಡ್ಡಿ, ಡಾ. ಸುಧಾ ಕೌಜಗೇರಿ, ಸವಿತಾ ಡಬರಿ, ಡಾ. ಎ.ಸಿ. ವಾಲಿ, ಡಾ. ಸಂಗಮೇಶ ಹಂಡಗಿ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.
ರಂಜಾನ್ ಹಬ್ಬದ ನಿಮಿತ್ತ ಶಾಂತಿ ಸಭೆ
ಕಲಘಟಗಿ: ರಂಜಾನ್ ಹಬ್ಬದ ನಿಮಿತ್ತ ಇಲ್ಲಿನ ಪೊಲೀಸ್ ಠಾಣೆಯಲ್ಲಿ ನಾನಾ ಸಮಾಜ ಬಾಂಧವರ ಶಾಂತಿಸಭೆ ಶುಕ್ರವಾರ ಕರೆಯಲಾಗಿತ್ತು. ಪೊಲೀಸ್ ಇನ್ಸ್ಪೆಕ್ಟರ್ ಎಂ.ಐ. ನಡುವಿನಮನಿ, ಪಿಎಸೈ ಶಿವಾನಂದ ಗಾಣಿಗೇರ ರಂಜಾನ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಪಟ್ಟಣದ ಗಣ್ಯರಿಂದ ಸಲಹೆ ಸೂಚನೆ ಪಡೆದರು. ಸಾರ್ವಜನಿಕರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಹಕಾರ ನೀಡಬೇಕು. ಸಮಸ್ಯೆಗಳಿದ್ದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ನಾನಾಕಡೆ ದ್ವಿಚಕ್ರ ವಾಹನಗಳಲ್ಲಿನ ಪೆಟ್ರೋಲ್ ಕಳ್ಳತನ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದಾಗ ಈ ಕುರಿತು ಮಾಹಿತಿಯನ್ನಾಧರಿಸಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವದಾಗಿ ಹೇಳಿದರು. ಪಟ್ಟಣದ ಅಬ್ದುಲ್ ಕರೀಂ, ಎಂ.ಐ. ಕಟ್ಟಿ, ವೃಷಭೇಂದ್ರ ಪಟ್ಟಣಶೆಟ್ಟಿ, ಸದು ಚಿಂತಾಮಣಿ, ಅಬ್ದುಲ್ ಸತ್ತರ್ ಮಿಶ್ರಿಕೋಟಿ, ರಫೀಕ್ ಸುಂಕದ, ಪ.ಪಂ. ಸದಸ್ಯ ಟೋಪಣ್ಣ ಲಮಾಣಿ, ಶಿವಾಜಿ ವಡ್ಡರ, ಫಕ್ಕೀರಗೌಡ ದೊಡ್ಡಮನಿ, ಮುಸ್ತಾಕ ಅಹ್ಮದ ತಡಸ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

