ಹುಬ್ಬಳ್ಳಿ ಆರ್ಟಿಒ ಕಚೇರಿ ಗಬ್ಬೂರಲ್ಲಿ?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 25
ಹುಬ್ಬಳ್ಳಿಗೆ ನೂತನವಾಗಿ ಮಂಜೂರಾಗಿರುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ನಗರ ಹೊರವಲಯದ ಗಬ್ಬೂರ ಬಳಿ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ.
ನೂತನ ಪ್ರಾದೇಶಿಕ ಸಾರಿಗೆ ಇಲಾಖೆಗೆ ಸುಮಾರು 2.22 ಎಕರೆ ಪ್ರದೇಶ ಅಗತ್ಯವಿದೆ. ಆದರೆ, ಪಾಲಿಕೆ ವ್ಯಾಪ್ತಿಯ ನಿವೇಶನದಲ್ಲಿ ನೂತನ ಪ್ರಾದೇಶಿಕ ಸಾರಿಗೆ ಇಲಾಖೆಗೆ ಲಭಿಸುವ ನಿವೇಶನದ ಬಗ್ಗೆ ಗೊಂದಲವಿದ್ದು, ಬರಲಿರುವ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.
ಗಬ್ಬೂರಿನ ಸರ್ವೇ ನಂ.91/2ರ ನಿವೇಶನವನ್ನು ಬಳಸಿಕೊಳ್ಳುವುದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಗಬ್ಬೂರಿನ ಸರ್ವೇ ನಂ.91/2ರ ನಿವೇಶನಕ್ಕೆ ಬೆಳಗಾವಿ ಪ್ರಾದೇಶಿಕ ವಿಭಾಗದ ಹಾಗೂ ಬೆಂಗಳೂರಿನ ಹಿರಿಯ ಅಧಿಕಾರಿಗಳು ಕೆಲ ದಿನಗಳ ಹಿಂದೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ, ಗಬ್ಬೂರ ಗ್ರಾಮದ ಸರ್ವೇ ನಂ.91/2ರ ನಿವೇಶನದಲ್ಲಿ ಕೊಳಚೆ ನೀರು ಸಂಸ್ಕರಣ ಘಟಕ ಪ್ರಾರಂಭಿಸಲು ಮಹಾನಗರ ಪಾಲಿಕೆ ಉದ್ದೇಶಿಸಿದೆ. ಆದಕಾರಣ ನೂತನ ಪ್ರಾದೇಶಿಕ ಸಾರಿಗೆ ಇಲಾಖೆಗೆ ಈ ನಿವೇಶನ ನೀಡುವ ಬದಲು ಪಾಲಿಕೆಗೆ ಸೇರಿರುವ ಸರ್ವೇ ನಂ. 13ಅ/4ರಲ್ಲಿನ 1.20 ಎಕರೆ ಪ್ರದೇಶವನ್ನು ಆರ್ಟಿಒ ಕಚೇರಿಗೆ ನೀಡುವಂತೆ ಧಾರವಾಡದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪಾಲಿಕೆಯನ್ನು ಕೋರಿದ್ದಾರೆ. ಹುಬ್ಬಳ್ಳಿಗೆ ಮಂಜೂರಾಗಿರುವ ನೂತನ ಆರ್ಟಿಒ ಕಚೇರಿಯನ್ನು ಗಬ್ಬೂರಿನಲ್ಲಿ ಪ್ರಾರಂಭಿಸುವಂತೆ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರು ಸಾರಿಗೆ ಸಚಿವ ರಾಮಲಿಂಗಾರಡ್ಡಿ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದು, ಸೂಕ್ತ ಜಾಗೆ ಒದಗಿಸುವಂತೆ ಸಚಿವರು ಶಾಸಕ ಅಬ್ಬಯ್ಯ ಅವರಿಗೆ ಸೂಚಿಸಿದ್ದಾರೆ.
ಈ ಮೊದಲು ಸರ್ವೇ ನಂ. 13ಅ/4ರಲ್ಲಿ 2 ಎಕರೆ ನಿವೇಶನವಿತ್ತು. ಆದರೆ 16.03 ಗುಂಟೆ ಜಾಗೆ ಪೂಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಭೂಸ್ವಾಧೀನವಾಗಿದೆ. ಸದ್ಯ ಉಳಿದಿರುವ 1.20 ಎಕರೆ ನಿವೇಶನ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಈ ನಿವೇಶನದಲ್ಲಿ ಆರ್ಟಿಒ ಕಚೇರಿಗೆ ಸೂಕ್ತವೆಂಬ ಅಭಿಪ್ರಾಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳದ್ದು.
ಆದಕಾರಣ ಈ ನಿವೇಶನವನ್ನು ಆರ್ಟಿಒ ಕಚೇರಿಗೆ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮಹಾನಗರ ಪಾಲಿಕೆಯನ್ನು ಕೋರಿದ್ದಾರೆ. ಈ ನಿವೇಶವನ್ನು ನೂತನ ಆರ್ಟಿಒಗೆ ನೀಡುವ ನಿರ್ಧಾರ ಆ. 2ರಂದು ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಕಟಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

