ಧಾರವಾಡ

ಅಧಿಕಾರದ ಅರ್ಧ ಶತಕ ಬಾರಿಸಿದ ಪಾಪು

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 8
ಕನ್ನಡ ನಾಡು-ನುಡಿಗೋಸ್ಕರ 124 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಭಾನುವಾರ ನಡೆದ ತ್ರೈವಾರ್ಷಿಕ ಚುನಾವಣೆಯಲ್ಲಿ, ಕನ್ನಡದ ಕಟ್ಟಾಳು ಡಾ. ಪಾಟೀಲ ಪುಟ್ಟಪ್ಪ ಗೆಲವು ಸಾಧಿಸುವ ಮೂಲಕ ದಾಖಲೆ ಬರೆದಿದ್ದಾರೆ.
ಸತತವಾಗಿ 50 ವರ್ಷಗಳ ಕಾಲ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿರುವ ಅವರು, 1967ರಿಂದ ಇಲ್ಲಿಯವರೆಗೂ ನಿರಂತರವಾಗಿ ಜಯದ ಮಾಲೆಯನ್ನು ಧರಿಸುತ್ತಾ ಬಂದಿದ್ದಾರೆ. ಪಾಪು ಅವರಿಗೆ ಈ ಗೆಲುವಿನ ಮೂಲಕ ತಮ್ಮ ಅಧಿಕಾರದ ಸುವರ್ಣ ಮಹೋತ್ಸವ ಆಚರಿಸಿದಂತಾಗಿದೆ. ಈ ಬಾರಿ ಪಾಪು ಅವರನ್ನು ಶತಾಯ-ಗತಾಯ ಸೋಲಿಸಬೇಕೆಂದು ಬಿಜೆಪಿ ಪಡೆ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಮೊದಲ ಬಾರಿಗೆ ತನ್ನ ತಂಡದೊಂದಿಗೆ ಸ್ಪರ್ಧಿಸಿ ಪಾಪು ಅವರ ವಿರುದ್ಧ ಕರ್ನಾಟಕ ವಿವಿ ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ. ಮೃತ್ಯುಂಜಯ ಅಗಡಿ ಅವರನ್ನು ಕಣದಲ್ಲಿರಿಸಿತ್ತು. ಆದರೆ, ಬಿಜೆಪಿಯ ಸೇಡಿನ ರಾಜಕಾರಣದ ಛಾಯೆ ಮಾತ್ರ ಕನ್ನಡದ ಗುಡಿ ವಿದ್ಯಾವರ್ಧಕ ಸಂಘದ ಮೇಲೆ ಕಿಂಚಿತ್ ಬೀಳಲಿಲ್ಲ. 919 ಮತಗಳ ಅಂತರಿಂದ ಪಾಪು ಜಯ ಗಳಿಸಿದರು.
ಡಾ. ಪಾಪು ಅವರು ನಿರಂತರ 48 ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿದ್ದು, ಇದೊಂದು ಅವಧಿ ಮುಗಿದರೆ 50 ವರ್ಷ ಅಧಿಕಾರದ ಅವಧಿ ಪೂರೈಸಲಿದ್ದಾರೆ. ಈ 48 ವರ್ಷಗಳಲ್ಲಿ ಪಾಪು ಸಂಘವನ್ನು ಕಟ್ಟಿ ಬೆಳೆಸಿದ್ದು, ಕನ್ನಡಕ್ಕೋಸ್ಕರ ಸಂಘದ ಮೂಲಕ ಹೋರಾಟದ ಹಾದಿ ಸುಲಭವೇನಿಲ್ಲ.
ಕೋಟಿ ಅನುದಾನ ಸಂಘ: 1880ರಲ್ಲಿ ಆರಂಭವಾದ ವಿದ್ಯಾವರ್ಧಕ ಸಂಘಕ್ಕೆ ಮುಂಚೆ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿರಲಿಲ್ಲ. ಡಾ. ಪಾಪು ಅವರು ಮೊದಲ ಬಾರಿಗೆ ಅಧ್ಯಕ್ಷರಾದಾಗ ವಾರ್ಷಿಕ ರು. 500 ಅನುದಾನವಿತ್ತು. ಆರಂಭದಲ್ಲಿ ರು. 25 ಸಾವಿರ ಅನುದಾನ ತಂದು ಸಂಘದ ನಿರ್ವಹಣೆ ಸೇರಿದಂತೆ ಅಗತ್ಯ ಕಾರ್ಯಗಳನ್ನು ಶುರು ಮಾಡಿದರು. 1975ರಲ್ಲಿ ಕಾರ್ಯಾಲಯ ಕೈಪಿಡಿಯನ್ನು ಸಂಘದ ಮೂಲಕ ಪ್ರಕಟಿಸಿ ರು. 50 ಸಾವಿರ ತಂದರು. ಅನಂತರ ಪಾಪು ಅವರ ಗಟ್ಟಿ ಧ್ವನಿ ಬೆಂಗಳೂರು ಮುಟ್ಟಿ ಕನ್ನಡದ ಕೆಲಸಕ್ಕಾಗಿ 1980ರ ಹೊತ್ತಿಗೆ ಒಂದು ಲಕ್ಷ ಅನುದಾನ ಆರಂಭವಾಯಿತು. ಹೀಗೆ ರು. 25 ಸಾವಿರದಿಂದ ಪ್ರಸ್ತುತ ಪಾಪು ಪ್ರಯತ್ನದ ಫಲವಾಗಿ ವಿದ್ಯಾವರ್ಧಕ ಸಂಘಕ್ಕೆ ರು. 1 ಕೋಟಿ ಅನುದಾನ ಒದಗಿ ಬರುತ್ತಿರುವುದು ಶ್ಲಾಘನೀಯವೇ ಸರಿ.
ಬರೀ ಅನುದಾನ ತರುವುದಷ್ಟೇ ಅಲ್ಲ, ಸಾಹಿತ್ಯಿಕ, ಭೌತಿಕವಾಗಿಯೂ ವಿದ್ಯಾವರ್ಧಕ ಸಂಘ ರಾಜ್ಯದಲ್ಲಿ ಹೆಸರು ಗಳಿಸುವಂತೆ ಮಾಡಿದ್ದು ಪಾಪು. ಕನ್ನಡದ ಕಾನೂನು ಪದ ವಿವರಣಾ ಕೋಶವನ್ನು ಸಂಘದಿಂದಲೇ ಪ್ರಕಟಿಸಿದರು. 2010ರಿಂದ ಹೊರನಾಡ ಕನ್ನಡಿಗರ ಸಮ್ಮೇಳನ ಮಾಡುವ ಮೂಲಕ ಅನ್ಯ ರಾಜ್ಯದಲ್ಲಿರುವ ಕನ್ನಡಿಗರಿಗೆ ಮಾನಸಿಕ ಬೆಂಬಲ ನೀಡಿದರು. 1980ರ ಸಮಯದಲ್ಲಿ ಶತಮಾನೋತ್ಸವ ಸಭಾಭವನ (ಈಗಿನ ಪಾಟೀಲ ಪುಟ್ಟಪ್ಪ ಭವನ) ನಿರ್ಮಾಣವಾಗಿತ್ತು. 1984ರಲ್ಲಿ ತನ್ನದೇ ಆದ ಸಂಪನ್ಮೂಲ ಪಡೆಯಲು ಸುತ್ತಲೂ 35 ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ಕೊಡಲಾಯಿತು.
ವಿದ್ಯಾವರ್ಧಕ ಸಂಘದ ಸಂಸ್ಥಾಪಕ ರಾ.ಹ. ದೇಶಪಾಂಡೆ ಅವರ ಮೂರ್ತಿ ಸ್ಥಾಪಿಸಿ ಸಂಘಕ್ಕೆ ವಿಶೇಷ ಮೆರಗು ತಂದವರು ಪಾಪು. ಅಲ್ಲದೇ, ಸಂಘದ 6 ಸಿಬ್ಬಂದಿಯನ್ನು ಸರ್ಕಾರದ ಅನುದಾನಕ್ಕೆ ಒಳಪಡಿಸಿದರು. ಇಲ್ಲಿಯವರೆಗೆ 25 ಪುಸ್ತಕಗಳ ಪ್ರಕಟಣೆ ಮಾಡಿದ್ದು, ಈ ಹಿಂದೆ ಮಾಸಿಕ ಪತ್ರಿಕೆಯಾಗಿ ಪ್ರಕಟವಾಗುತ್ತಿದ್ದ ವಾಗ್ಭೂಷಣ ಪತ್ರಿಕೆ ಸದ್ಯದಲ್ಲಿಯೇ ಮತ್ತೆ ಆರಂಭಿಸುವ ಚಿಂತನೆ ನನ್ನದಿದೆ ಎಂದು ಪಾಟೀಲ ಪುಟ್ಟಪ್ಪನವರು ಹೇಳುತ್ತಾರೆ. ಜು. 20ರಂದು ವಿದ್ಯಾವರ್ಧಕ ಸಂಘ 124 ವರ್ಷಗಳನ್ನು ಮುಗಿಸಿ 125ನೇ ವರ್ಷಕ್ಕೆ ಕಾಲಿಡುತ್ತಿದೆ.
ವಿದ್ಯಾವರ್ಧಕ ಸಂಘ ಇಷ್ಟು ಉತ್ಕರ್ಷವಾಗಿ ಬೆಳೆಯಲು ಕಾರಣರಾದವರು ಪಾಟೀಲ ಪುಟ್ಟಪ್ಪ. ಅಧ್ಯಕ್ಷ ಪಾಪು ಅವರೊಂದಿಗೆ ನಿರಂತರ 20 ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ನನಗೆ ಅವರ ಮೇಲೆ ಅಪಾರ ಹೆಮ್ಮೆ ಇದೆ ಎನ್ನುತ್ತಾರೆ ಬಿ.ವಿ. ಗುಂಜೆಟ್ಟಿ.

 ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.