ಧರಣಿ ನಿರತನಿಂದ ಆತ್ಮಹತ್ಯೆ ಯತ್ನ
ಹುಬ್ಬಳ್ಳಿ: ಬಾಗಲಕೋಟೆ-ಕುಡಚಿ ರೈಲು ಕಾಮಗಾರಿ ಪರಿಹಾರಕ್ಕೆ ಆಗ್ರಹಿಸಿ ಇಲ್ಲಿನ ನೈಋತ್ಯ ರೇಲ್ವೆ ವಲಯ ಮಹಾಪ್ರಬಂಧಕರ ಕಚೇರಿ ಎದುರು ನಡೆಸುತ್ತಿರುವ ಧರಣಿ ಸಂದರ್ಭದಲ್ಲಿ ಧರಣಿ ನಿರತನೊಬ್ಬ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಬಾಗಲಕೋಟೆ-ಕುಡಚಿ ರೈಲು ಮಾರ್ಗಕ್ಕೆ ಭೂಮಿ ನೀಡಿರುವ ರೈತರಿಗೆ ಪರಿಹಾರ, ರೇಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡುವುದು ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ನಡೆಸುತ್ತಿರುವ ಧರಣಿ ಶುಕ್ರವಾರ 10ನೇ ದಿನಕ್ಕೆ ಕಾಲಿರಿಸಿದೆ. ಈ ವೇಳೆ ಧರಣಿನಿರತರ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದೀನ್ ಖಾಜಿ ಮೈಮೇಲೆ ಸೀಮೆ ಎಣ್ಣೆ ಸುರುವಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಕ್ಷಣ ರಕ್ಷಿಸಿ, ಬಂಧಿಸಿದರು.
ಬಾಗಲಕೋಟೆ-ಕುಡಚಿ ನೂತನ ರೈಲು ಮಾರ್ಗಕ್ಕೆ ಸಾವಿರಾರು ರೈತರು ಫಲವತ್ತಾದ ಕೃಷಿ ಭೂಮಿ ನೀಡಿದ್ದಾರೆ. ರೈಲು ಮಾರ್ಗಕ್ಕೆ ಭೂಮಿ ನೀಡುವ ರೈತರ ಕುಟುಂಬದಲ್ಲಿ ಒಬ್ಬರಿಗೆ ರೇಲ್ವೆ ಇಲಾಖೆಯಲ್ಲಿ ಡಿ ದರ್ಜೆ ಉದ್ಯೋಗ ನೀಡುವುದಾಗಿ ಲಿಖಿತವಾಗಿ ಲ್ಯಾಂಡ್ ಲೂಜರ್ ಸರ್ಟಿಫಿಕೇಟ್ ನೀಡಿ ಎರಡು ವರ್ಷವಾಗಿದ್ದರೂ ಉದ್ಯೋಗ ನೀಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ರೈಲು ಮಾರ್ಗಕ್ಕೆ ಭೂಮಿ ನೀಡಿರುವ ರೈತರು ಸಂಕಷ್ಟದಲ್ಲಿದ್ದು, ತಕ್ಷಣ ಉದ್ಯೋಗ ಒದಗಿಸಬೇಕು. ಆ ಮೂಲಕ ರೈತ ಕುಟುಂಬ ಬೀದಿಗೆ ಬರುವುದನ್ನು ತಪ್ಪಿಸಬೇಕು. ಉತ್ತರ ಕರ್ನಾಟಕದಲ್ಲಿ ರೇಲ್ವೆ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು ಎಂದು ಕೋರಿದರು.
ಸಮಿತಿ ಜಿಲ್ಲಾಧ್ಯಕ್ಷ ಬಾಬಾಜಾನ ಮುಧೋಳ, ರಾಜಶೇಖರ ಮೆಣಸಿನಕಾಯಿ, ಎನ್.ಕೆ. ಕೊರ್ಲಹಳ್ಳಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

