ಧಾರವಾಡ

ವಿದ್ಯಾಕಾಶಿ ಧಾರವಾಡದಲ್ಲಿವಿಪರೀತ ವಾಹನ ದಟ್ಟಣೆ

Published On :

ಧಾರವಾಡ: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಧಾರವಾಡ ನಗರ ಇತ್ತೀಚಿನ ಐದು ವರ್ಷಗಳಿಂದ ವಿಪರೀತ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದೆ. ನಿತ್ಯ ಹತ್ತಾರು ಹೊಸ ಬೈಕು, ಕಾರು ಹಾಗೂ ಇನ್ನಿತರ ವಾಹನಗಳು ರಸ್ತೆಗಿಳಿಯುತ್ತಿದ್ದು ಟ್ರಾಫಿಕ್‌ನೊಂದಿಗೆ ಪಾರ್ಕಿಂಗ್ ಸಮಸ್ಯೆಯೂ ನಗರಕ್ಕೆ ತಲೆನೋವಾಗಿ ಪರಿಣಮಿಸಿದೆ. ಪಾರ್ಕಿಂಗ್ ಮಾಡಲು ಸರಿಯಾದ ಸ್ಥಳಾವಕಾಶ ಇರದ ಕಾರಣ ಬೈಕು, ಕಾರು ಎಲ್ಲೆಂದರಲ್ಲಿ ಪಾರ್ಕ್ ಮಾಡಲಾಗುತ್ತಿದೆ. ಈ ಕಾರಣದಿಂದಲೇ ಟ್ರಾಫಿಕ್ ಸಮಸ್ಯೆ ದ್ವಿಗುಣವಾಗುತ್ತಿದೆ. ಧಾರವಾಡಕ್ಕೆ ಒಂದೇ ಮಾರುಕಟ್ಟೆ ಇದ್ದು, ಎಲ್ಲದಕ್ಕೂ ಇದೇ ಮಾರುಕಟ್ಟೆ ಅವಲಂಬಿಸಲಾಗಿದೆ. ಸಪ್ತಾಪುರ, ಜೆಎಸ್ಸೆಸ್ ಕಾಲೇಜು ಬಳಿ 2 ನೂತನ ಮಾರುಕಟ್ಟೆಗಳಾದರೆ ಟ್ರಾಫಿಕ್, ಜನಜಂಗುಳಿ ತುಸು ಹಂಚಿಕೆ ಆಗಬಹುದೆಂಬ ಲೆಕ್ಕಾಚಾರ. ಸ್ಥಳೀಯ ಆಡಳಿತ ಈ ಬಗ್ಗೆ ಚಿಂತನೆ ಮಾಡಿಲ್ಲ. ಕರ್ನಾಟಕ ಕಾಲೇಜು ರಸ್ತೆಯಿಂದ ಸಪ್ತಾಪುರ, ಜಯನಗರ, ಶ್ರೀನಗರ ವರೆಗೂ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಇದೇ ರಸ್ತೆ ಮೂಲಕ ಕರ್ನಾಟಕ ವಿವಿಗೆ ಸಾಗಬೇಕು. ಈ ಹಿನ್ನೆಲೆಯಲ್ಲಿ ನಿತ್ಯ ಈ ರಸ್ತೆ ತುಂಬಿ ತುಳಕಾಡುತ್ತದೆ. ಸಪ್ತಾಪುರ, ಜಯನಗರ ಹಾಗೂ ಶ್ರೀನಗರ ವೃತ್ತವಂತೂ ಪ್ರತಿ ದಿನ ಸಂಜೆ ಬೆಂಗಳೂರು ಮಾದರಿಯಲ್ಲಿ ಟ್ರಾಫಿಕ್ ಜಾಮ್ ಆಗಿರುತ್ತದೆ.
ಪ್ರಮುಖ ರಸ್ತೆಗಳ ಅಗಲೀಕರಣ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಸರಿಯಾದ ಕ್ರಮಗಳನ್ನು ಕೈಗೊಳ್ಳದಿದ್ದರೆ ಬರುವ ದಿನಗಳಲ್ಲಿ ಧಾರವಾಡ ನಗರವು ಬೆಂಗಳೂರು ಮಾದರಿಯಲ್ಲಿ ಟ್ರಾಫಿಕ್ ತೊಂದರೆಯಲ್ಲಿ ಸಿಲುಕುವುದರಲ್ಲಿ ಯಾವುದೇ ಸಂಶಯವಿಲ್ಲ.
ಎಲ್ಲೆಲ್ಲಿ ಟ್ರಾಫಿಕ್?
ಧಾರವಾಡ ಹಳೇ ಬಸ್ ನಿಲ್ದಾಣ ತೆರವುಗೊಳಿಸಿದ್ದು, ನಗರಕ್ಕೆ ಸೀಮಿತವಾಗಿದ್ದ ಟ್ರಾಫಿಕ್ ಸಮಸ್ಯೆ ಇದೀಗ ನಗರ ಬಿಟ್ಟು ಹೊರಗೂ ಚಾಚಿದೆ. ಹಳೆ ಎಸ್ಪಿ ಕಚೇರಿ ವೃತ್ತ, ಕಲಾಭವನ ವೃತ್ತ, ಕೋರ್ಟ್ ವೃತ್ತ, ಶಿವಾಜಿ ವೃತ್ತ, ಎನ್‌ಟಿಟಿಎಫ್ ಹಾಗೂ ಎಲ್‌ಐಸಿ ಪ್ರದೇಶಗಳಲ್ಲಿ ವಾಹನಗಳ ಭರಾಟೆ ಜಾಸ್ತಿಯಾಗಿದೆ. ಬೆಳಗ್ಗೆ ಹಾಗೂ ಸಂಜೆ ಪದಾಚಾರಿಗಳು ರಸ್ತೆಯಿಂದ ರಸ್ತೆ ದಾಟಲು ಪರದಾಡಬೇಕಾದ ಸ್ಥಿತಿ ಉಂಟಾಗಿದೆ. ಅಪಘಾತಗಳೂ ನಿರಂತರ ನಡೆಯುತ್ತಿವೆ. ನಗರದಲ್ಲಿ ಸಾರಿಗೆ ಸಂಸ್ಥೆಗಳ ಬಸ್ಸುಗಳಿಗಿಂತ ಇತ್ತೀಚೆಗೆ ಖಾಸಗಿ ವಾಹನಗಳ ಭರಾಟೆ ಜಾಸ್ತಿಯಾಗಿದೆ. ಪ್ರತಿ ಹಳ್ಳಿಗೂ ಟೆಂಪೋ ಟ್ರ್ಯಾಕ್ಸ್, ಟಾಟಾ ಏಸ್‌ನಂತಹ ವಾಹನಗಳು ಸಂಚರಿಸುತ್ತಿದ್ದು, ಈ ಖಾಸಗಿ ವಾಹನಗಳಿಂದಲೇ ನಗರದಲ್ಲಿ ಟ್ರಾಫಿಕ್ ತೊಂದರೆ ಕಾಣುತ್ತಿದೆ.
ಅನಧಿಕೃತ ಅಂಗಡಿ ತೆರವು
ಧಾರವಾಡದ ಮಾರುಕಟ್ಟೆಗಳಲ್ಲಿ ರಸ್ತೆ ಬದಿ ವ್ಯಾಪಾರಸ್ಥರು ಹಾಗೂ ಮಾರುಕಟ್ಟೆ ಸಮೀಪದ ಪ್ರದೇಶದಲ್ಲಿ ರಸ್ತೆ ಬದಿ ಅನಧಿಕೃತ ಅಂಗಡಿಗಳು ತಲೆ ಎತ್ತಿವೆ. ಈ ಕಾರಣದಿಂದಲೇ ಟ್ರಾಫಿಕ್ ಜಾಮ್ ಆಗುತ್ತಿದೆ. ಮೊದಲು ಮಾರುಕಟ್ಟೆ ಹಾಗೂ ಸುತ್ತಲಿನ ಅನಧಿಕೃತ ಅಂಗಡಿಗಳು ತೆರವುಗೊಂಡರೆ ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆ ಉಂಟಾಗೋದಿಲ್ಲ.
- ವಸಂತ ಅರ್ಕಾಚಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.