ವರ್ತಕರ ನೋಂದಣಿ ಪ್ರಕ್ರಿಯೆಗೆ ತಿದ್ದುಪಡಿ
ಹುಬ್ಬಳ್ಳಿ: ವರ್ತಕರ ನೋಂದಣಿ ಪ್ರಕ್ರಿಯೆಗೆ ಮೂರ್ನಾಲ್ಕು ತಿಂಗಳಲ್ಲಿ ತಿದ್ದುಪಡಿ ತರುವ ಮೂಲಕ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಅಜಯ ಸೇಠ್ ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮೌಲ್ಯವರ್ಧಿತ ತೆರಿಗೆ ಕಾನೂನು ಕುರಿತು ವರ್ತಕರ ಜತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ವರ್ತಕರಿಂದ ಬಂದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ವರ್ತಕರ ನೋಂದಣಿ ಪ್ರಕ್ರಿಯೆ ಸರಳೀಕರಣಗೊಳಿಸುವ ನಿಟ್ಟಿನಲ್ಲಿ ತಿದ್ದುಪಡಿ ಮಾಡಲಾಗುವುದು. ವ್ಯಾಟ್ ಪಾವತಿಸಲು ವಿಳಂಬವಾಗಿರುವ ವರ್ತಕರಿಗೆ ಮೊದಲು ನೋಟಿಸ್ ಜಾರಿಗೊಳಿಸಿ ನಂತರ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದರು.
ವರ್ತಕರು ಪ್ರತಿ ತಿಂಗಳು ರಿಟರ್ನ್ ಫಾರ್ಮ್-ವ್ಯಾಟ್ 100 ಸಲ್ಲಿಸುವಾಗ ಯಾವುದೇ ಕಾರಣದಿಂದ ವಿಳಂಬವಾದಲ್ಲಿ ಇ-ಸುಗಮ ವ್ಯವಸ್ಥೆಯನ್ನು ಯಾವುದೇ ಮುನ್ಸೂಚನೆ ನೀಡದೆ ಅನೂರ್ಜಿತಗೊಳಿಸಲಾಗುತ್ತಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಆಯುಕ್ತ ಸೇಠ್, ಇ-ಸುಗಮ ವ್ಯವಸ್ಥೆ ಸತತವಾಗಿ ಲಭ್ಯವಾಗುವಂತೆ ಕ್ರಮಕೈಗೊಳ್ಳಲಾಗುವುದೆಂದರು.
ಆದಾಯ ತೆರಿಗೆ ಇಲಾಖೆಯಲ್ಲಿ ರಿಫಂಡ್ಗೆ ಬಡ್ಡಿ ಸೇರಿಸಿ ಹಣ ಮರಳಿಸಲಾಗುತ್ತಿದೆ. ಆದರೆ, ವಾಣಿಜ್ಯ ತೆರಿಗೆ ಇಲಾಖೆ ಮಾತ್ರ, ರಿಫಂಡ್ನ್ನು ಸರಿಯಾದ ಸಮಯಕ್ಕೆ ವಾಪಸ್ ನೀಡುವುದಿಲ್ಲ. ಮಾತ್ರಲ್ಲದೆ, ಬಡ್ಡಿಯನ್ನೂ ಸೇರಿಸಿ ಸಂದಾಯ ಮಾಡುವುದಿಲ್ಲ. ವರ್ತಕರು, ಇಲಾಖೆಗೆ ತೆರಿಗೆ ಪಾವತಿಸುವಲ್ಲಿ ವಿಳಂಬವಾದರೆ ದಂಡ ವಿಧಿಸಲಾಗುತ್ತಿದೆ. ಇದು ಯಾವ ನ್ಯಾಯ? ಎಂದು ಸಂವಾದದಲ್ಲಿ ಪಾಲ್ಗೊಂಡಿದ್ದ ಬಹುತೇಕ ವರ್ತಕರು ಪ್ರಶ್ನಿಸಿದರು.
ತೆರಿಗೆ ಹೊರೆ: ರಾಜ್ಯದ ವರ್ತಕ ಹಾಗೂ ಉದ್ಯಮಿಗಳಿಂದ ಹೆಚ್ಚಿನ ತೆರಿಗೆ ಆಕರಿಸಲಾಗುತ್ತಿರುವುದರಿಂದ ಕರ್ನಾಟಕದಲ್ಲಿ ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ಉದ್ಯಮಗಳು ನಿರೀಕ್ಷಿತ ಮಟ್ಟದಲ್ಲಿ ಬೆಳೆಯುತ್ತಿಲ್ಲ ಎಂದು ವರ್ತಕರು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅನೇಕರು, ಕರ್ನಾಟಕದಲ್ಲಿ ಉತ್ತತ್ತಿಗೆ ಶೇ. 14.5 ರಷ್ಟು ತೆರಿಗೆ ಆಕರಿಸಲಾಗುತ್ತಿದ್ದರೆ ನೆರೆ ರಾಜ್ಯದಲ್ಲಿ ಶೇ. 5., ಹವೀಜ್ ಶೇ. 5.5 ಇದ್ದರೆ ನೆರೆರಾಜ್ಯದಲ್ಲಿ ತೆರಿಗೆ ವಿಧಿಸುತ್ತಿಲ್ಲ. ಡ್ರೈಪುಡ್ಸ್ಗೆ ಕರ್ನಾಟಕದಲ್ಲಿ ಶೇ. 14.5ರಷ್ಟು ತೆರಿಗೆ ಇದ್ದರೆ ನೆರೆರಾಜ್ಯದಲ್ಲಿ ಕೇವಲ ಶೇ. 5ರಷ್ಟು, ಕೃಷಿ ಉಪಕರಣಗಳ ಬಿಡಿಭಾಗಗಳಿಗೆ ಶೇ. 14.5ರಷ್ಟಿದ್ದರೆ ನೆರೆ ರಾಜ್ಯದಲ್ಲಿ ಶೇ. 5 ಹಾಗೂ ವಿದ್ಯಾರ್ಥಿಗಳು ಉಪಯೋಗಿಸುವ ರಬ್ಬರ್ ಹಾಗೂ ಎಕ್ಜಾಮ್ ಕ್ಲಿಪ್ ಬೋರ್ಡ್ಗೆ ಶೇ. 14.5ರಷ್ಟು ತೆರಿಗೆ ಆಕರಿಸಲಾಗುತ್ತಿದ್ದರೆ ನೆರೆರಾಜ್ಯದಲ್ಲಿ ಶೇ. 5ರಷ್ಟು ಆಕರಿಸಲಾಗುತ್ತಿದ್ದು, ಈ ತಾರತಮ್ಯ ಹೋಗಲಾಡಿಸಲು ಕ್ರಮಕೈಗೊಳ್ಳಬೇಕು ಎಂಬ ಸಾರ್ವತ್ರಿಕ ಅಭಿಪ್ರಾಯ ಕೇಳಿ ಬಂದಿತು. ಅಲ್ಲದೇ, ಗಡಿಭಾಗದಲ್ಲಿ ಅಕ್ರಮ ಹತ್ತಿ ಸಾಗಾಣಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಅನೇಕರು ಒತ್ತಾಯಿಸಿದರು.
ವರ್ತಕರಿಂದ ಬಂದ ಹತ್ತಾರು ಪ್ರಶ್ನೆಗಳಿಗೆ ಶಾಂತಚಿತ್ತರಾಗಿ ಉತ್ತರಿಸಿದ ಸೇಠ್, ತಮ್ಮ ವ್ಯಾಪ್ತಿಯಡಿ ಬರುವ ಸಮಸ್ಯೆಗಳನ್ನು ಶೀಫ್ರ ಪರಿಹರಿಸಲು ಕ್ರಮಕೈಗೊಳ್ಳಲಾಗುವುದೆಂದರು.
ಸಂವಾದದಲ್ಲಿ ಆಯುಕ್ತರು ಈ ಕುರಿತಂತೆ ಸೂಕ್ತ ಉತ್ತರ ನೀಡಬಹುದೆಂಬ ಸಂಸ್ಥೆ ಪದಾಧಿಕಾರಿಗಳ ನಿರೀಕ್ಷೆ ಹುಸಿಯಾಯಿತು. ವ್ಯಾಟ್ ಸಲಹಾ ಸಮಿತಿಗೆ ಕೆಸಿಸಿಐ ಸದಸ್ಯರೊಬ್ಬರನ್ನು ಪ್ರತಿನಿಧಿಯಾಗಿಸಿಕೊಳ್ಳಬೇಕೆಂಬ ವಿಚಾರವನ್ನು ಸೇಠ್ ಅಪ್ಪಿತಪ್ಪಿಯೂ ಪ್ರಸ್ತಾಪಿಸಲಿಲ್ಲ. ಕೆಸಿಸಿಐ ಪದಾಧಿಕಾರಿಗಳು 23 ಬೇಡಿಕೆಗಳುಳ್ಳ ಮನವಿಯನ್ನು ಆಯುಕ್ತರಿಗೆ ಸಲ್ಲಿಸಿದರು. ತೆರಿಗೆ ಇಲಾಖೆ ಜಂಟಿ ನಿರ್ದೇಶಕ ಬಿ.ಎ. ನಾಣಿಯಪ್ಪ, ಎಂ.ಜಿ. ಹಿರೇಮಠ, ಸಂಸ್ಥೆ ಪದಾಧಿಕಾರಿಗಳಾದ ಸಿದ್ದೇಶ್ವರ ಕಮ್ಮಾರ, ರಮೇಶ ಪಾಟೀಲ, ವೈ.ಎನ್. ಖಟಾವಕರ್, ಎಂ.ಸಿ. ಹಿರೇಮಠ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

