ಕ್ರೀಡೆ, ಆರೋಗ್ಯಕ್ಕೆ ಆದ್ಯತೆ, ಮಹಿಳೆಯರಿಗೆ ರಕ್ಷಣೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 4
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿಯಲು ವಿವಿಧ ರಾಜಕೀಯ ಪಕ್ಷಗಳು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಮಂಗಳವಾರ ಪಾಲಿಕೆಯ 2014-15ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಕ್ರೀಡೆ, ಆರೋಗ್ಯ, ಮಹಿಳಾ ಸುರಕ್ಷತೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಸಮುದಾಯ ಭವನ ಸೇರಿದಂತೆ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ರು. 2.94 ಕೋಟಿಯ ಉಳಿತಾಯದ ಬಜೆಟ್ ಮಂಡಿಸಿದ್ದಾರೆ.
ಪಾಲಿಕೆ ಬೇಂದ್ರೆ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಜೆಟ್ ಅಂಶಗಳನ್ನು ವಿವರಿಸಿದ ಅವರು, ರಾಜಸ್ವ, ಬಂಡವಾಳ ಸೇರಿದಂತೆ ಇನ್ನಿತರ ಮೂಲಗಳಿಂದ ರು. 344 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಒಟ್ಟು ಆದಾಯ ವೆಚ್ಚ ರು. 341 ಕೋಟಿ ಎಂದು ಅಂದಾಜಿಸಿ ಬಜೆಟ್ ಮಂಡಿಸಲಾಗಿದೆ ಎಂದರು.
ಕ್ರೀಡೆಗೆ ಏನೆಲ್ಲಾ?: ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎನ್ನಿಸಿಕೊಳ್ಳುತ್ತಿರುವ ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ ಸಿಕ್ಕಿದೆ. 2 ಟೆನ್ನಿಸ್ ಕೋರ್ಟ್, 4 ಬ್ಯಾಡ್ಮಿಂಟನ್ ಕೋರ್ಟ್ 2 ಟೇಬಲ್ ಟೆನ್ನಿಸ್ ಕೋರ್ಟ್ ಒಳಗೊಂಡ ರು. 1 ಕೋಟಿ ವೆಚ್ಚದಲ್ಲಿ ಒಳ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ತಲಾ ರು. 25 ಲಕ್ಷ ವೆಚ್ಚದಲ್ಲಿ ಜಿಮ್ ನಿರ್ಮಿಸಲಾಗುತ್ತಿದೆ. ಕ್ರೀಡಾ ಚಟುವಟಿಕೆಗಳಿಗೆ ರು. 20 ಲಕ್ಷ, ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪುರಸ್ಕಾರಕ್ಕಾಗಿ ರು. 5 ಲಕ್ಷ ಮೀಸಲಿರಿಸಲಾಗಿದೆ.
ಆರೋಗ್ಯಕ್ಕೆ ಒತ್ತು: ರೋಗಗ್ರಸ್ತವಾಗಿರುವ ಪಾಲಿಕೆ ಆಸ್ಪತ್ರೆಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಧಾರವಾಡ ಆಸ್ಪತ್ರೆ ಅಭಿವೃದ್ಧಿಗೆ ರು. 35 ಲಕ್ಷ ಮೀಸಲಿರಿಸಲಾಗಿದ್ದು, ಕಳೆದ ವರ್ಷದ ಬಜೆಟ್ನಲ್ಲಿ ಮಂಜೂರಾಗಿದ್ದ ರು. 50 ಲಕ್ಷ ಸೇರಿದಂತೆ ಒಟ್ಟು ರು. 85 ಲಕ್ಷವೆಚ್ಚದಲ್ಲಿ ಆಸ್ಪತ್ರೆ ಅಭಿವೃದ್ಧಿಗೊಳಿಸಲಾಗುವುದು. ಚಿಟಗುಪ್ಪಿ ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿ ಎರಡು ಮಾದರಿ ಆಸ್ಪತ್ರೆ ಅಭಿವೃದ್ಧಿ ಪಡಿಸಲು ರು. 75 ಲಕ್ಷ ಮೀಸಲಿಡಲಾಗಿದೆ. ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ತಲಾ ಒಂದೊಂದು ಶ್ರದ್ಧಾಂಜಲಿ ವಾಹನ ಖರೀದಿಗೆ ರು. 20 ಲಕ್ಷ ಹಣ ತೆಗೆದಿಡಲಾಗಿದೆ. ಹದಗೆಟ್ಟಿರುವ ಹುಬ್ಬಳ್ಳಿ-ಧಾರವಾಡದ 5 ಸ್ಮಶಾನಗಳ ಅಭಿವೃದ್ಧಿಗೆ ರು. 2.5 ಕೋಟಿ ಖರ್ಚು ಮಾಡಲಾಗುತ್ತಿದೆ. ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ರು. 10 ಲಕ್ಷ ತೆಗೆದಿರಿಸಲಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಸರಿಯಾದ ಸಮುದಾಯ ಭವನವಿಲ್ಲ ಎನ್ನುವ ಜನರ ಕೊರಗಿಗೆ ಸ್ಪಂದಿಸಲಾಗಿದೆ. ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ತಲಾ ರು. 50 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಹುಬ್ಬಳ್ಳಿಯ ಟೌನ್ ಹಾಲ್ ಅಭಿವೃದ್ಧಿಗೆ ರು. 50 ಲಕ್ಷ ತೆಗೆದಿರಿಸಲಾಗಿದೆ.
ಫುಟ್ಪಾತ್ ನಿರ್ಮಾಣ: ಹುಬ್ಬಳ್ಳಿ-ಧಾರವಾಡ ಅವಳಿನಗರದ ಎಷ್ಟೋ ಪ್ರದೇಶಗಳಲ್ಲಿ ಇಂದಿಗೂ ಫುಟ್ಪಾತ್ ಇಲ್ಲ, ಇದ್ದರೂ ಹದಗೆಟ್ಟಿವೆ. ಈ ನಿಟ್ಟಿನಲ್ಲಿ ಪಾದಚಾರಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಫುಟ್ಪಾತ್ ನಿರ್ಮಾಣಕ್ಕೆ ರು. 3.95 ಕೋಟಿ ಮೀಸಲಿರಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿಯೂ ಗಮನ ಹರಿಸಲಾಗಿದೆ. ವಿಜ್ಞಾನ ಅರಿವು ಕಾರ್ಯಕ್ರಮದ ಮೂಲಕ ಕೊಳಚೆ ಪ್ರದೇಶದ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ರು. 10 ಲಕ್ಷ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ರು. 10 ಲಕ್ಷ ತೆಗೆದಿಡಲಾಗಿದೆ. ಪಾಲಿಕೆ ಆಯುಕ್ತ ರಮಣದೀಪ್ ಚೌಧರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

