ಅಲ್ಪಾವಧಿಯಲ್ಲೇ ಸರ್ಕಾರ ಹೆಚ್ಚಿನ ಸಾಧನೆ: ರಾಮಕೃಷ್ಣ
ಮುಂಡರಗಿ: ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನತೆಗೆ ಮುಟ್ಟಿಸಿ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡುವ ಉದ್ದೇಶದಿಂದ ಹೊರಡಿಸಲಾಗಿರುವ ಶಾಸಕ ರಾಮಕೃಷ್ಣ ದೊಡ್ಡಮನಿ ಮತ್ತು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹೇಮಂತಗೌಡ ಪಾಟೀಲ ನೇತೃತ್ವದ ಭಾರತ ನಿರ್ಮಾಣ ಪಾದಯಾತ್ರೆಯನ್ನು ಗುರುವಾರ ಸ್ಥಳೀಯ ಕೋಟೆ ಭಾಗದ ಸರ್. ಸಿದ್ದಪ್ಪ ಕಂಬಳಿ ವೃತ್ತದಿಂದ ಪ್ರಾರಂಭಗೊಂಡಿತು.
ಭಾರತ ನಿರ್ಮಾಣ ಜಾಗೃತಿ ಪಾದಯಾತ್ರೆಗೆ ಶಾಸಕ ರಾಮಕೃಷ್ಣ ದೊಡ್ಡಮನಿ ಚಾಲನೆ ನೀಡಿದರು.
ಬಳಿಕ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪ ಅವಧಿಯಲ್ಲಿಯೇ ಹೆಚ್ಚಿನ ಸಾಧನೆ ಮಾಡಿ ಜನಮೆಚ್ಚುಗೆ ಪಡೆದುಕೊಂಡಿದೆ. ಕ್ಷೀರಭಾಗ್ಯ, ಅನ್ನಭಾಗ್ಯ ಯೋಜನೆಗಳ ಜತೆಗೆ ಹೈನುಗಾರಿಕೆಗೆ ಉತ್ತೇಜನ ನೀಡುವ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.
ಅವಿವಾಹಿತ ಹೆಣ್ಣುಮಕ್ಕಳಿಗೆ ತಿಂಗಳಿಗೆ ರು. 500 ಗೌರವಧನ ನೀಡುವ ಮನಸ್ವಿನಿ ಯೋಜನೆ, ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಸಾಲಮನ್ನಾ ಯೋಜನೆ, ರೈತರಿಗೆ ಬಡ್ಡಿ ರಹಿತ ಸಾಲ ನೀಡುವುದು ಸೇರಿದಂತೆ ಹಲವಾರು ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸಿ ಜನಮನ್ನಣೆ ಪಡೆದುಕೊಂಡಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ ಕೊಟ್ರೇಶ ಅಂಗಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ಕೆಪಿಸಿಸಿ ಸದಸ್ಯ ವಾಸಣ್ಣ ಕುರಡಗಿ, ಚಂದ್ರಹಾಸ ಉಳ್ಳಾಗಡ್ಡಿ, ಭೀಮಸಿಂಗ್ ರಾಠೋಡ, ರಾಮು ಕಲಾಲ ಮುಂತಾದವರು ಕಾಂಗ್ರೆಸ್ ಸರ್ಕಾರದ ಸಾಧನೆಗಳ ಕುರಿತು ಮಾತನಾಡಿದರು.
ಭಾರತ ನಿರ್ಮಾಣ ಪಾದಯಾತ್ರೆ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ತಾಲೂಕಿನ ಬ್ಯಾಲವಾಡಗಿ, ಮುಕ್ತಂಪುರ, ಬೆಣ್ಣೆಹಳ್ಳಿ, ಕೊರ್ಲಹಳ್ಳಿ, ಶೀರನಹಳ್ಳಿ, ಶಿಂಗಟಾಲೂರು ಗ್ರಾಮಗಳಲ್ಲಿ ಸಂಚರಿಸಿ ಶಿಂಗಟಾಲೂರು ಹತ್ತಿರ ಹರಿದಿರುವ ತುಂಗಭದ್ರಾ ನದಿ ತೀರದಲ್ಲಿ ಪಾದಯಾತ್ರೆ ಮುಕ್ತಾಯಗೊಳಿಸಲಾಯಿತು. ಪಾದಯಾತ್ರೆಯಲ್ಲಿ ಟಿ.ಬಿ. ಮೇಟಿ, ಎಸ್.ಡಿ. ಮಕಾಂದಾರ, ಬಸವರಾಜ ಬಿಸನಳ್ಳಿ, ಅಬ್ದುಲ್ ಖುರೇಶಿ, ದೃವಕುಮಾರ ಹೊಸಮನಿ, ಸೊಲಬಣ್ಣ ಜೋಬಾಳಿ, ಸೋಮನಗೌಡ ಪಾಟೀಲ ಇತರರು ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

