ಧಾರವಾಡ

ಗೆಲುವಿನ ಅಂತರದಲ್ಲೂ ಕಾಂಗ್ರೆಸ್ ದಾಖಲೆ

Published On :

ಹುಬ್ಬಳ್ಳಿ: ಧಾರವಾಡ ಲೋಕಸಭೆ ಕ್ಷೇತ್ರದ ಇದುವರೆಗಿನ ಚುನಾವಣೆಗಳಲ್ಲಿ ಅತಿ ಹೆಚ್ಚು ಅಂತರ ಹಾಗೂ ಕಡಿಮೆ ಅಂತರದಿಂದ ಗೆಲುವು ಪಡೆದಿರುವ ಎರಡೂ ದಾಖಲೆಗಳು ಕಾಂಗ್ರೆಸ್ ಸಂಸದರದ್ದು.
1962ರಲ್ಲಿ ಕಾಂಗ್ರೆಸ್ ಸಂಸದೆ ಸರೋಜಿನಿ ಮಹಿಷಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರೆ, 1991ರಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ನಾಯ್ಕರ್ ಅತಿ ಪ್ರಯಾಸದ ಜಯ ಸಾಧಿಸಿದ್ದರು.
1952ರಿಂದ 2009ರ ವರೆಗೆ ಲೋಕಸಭೆಗೆ ನಡೆದ 15 ಚುನಾವಣೆಗಳಲ್ಲಿ ಧಾರವಾಡ ಕ್ಷೇತ್ರದ ಅತಿ ಹೆಚ್ಚು, ಅತಿ ಕಡಿಮೆ ಮತಗಳ ಅಂತರ ಎರಡೂ ಕಾಂಗ್ರೆಸ್‌ನ ದಾಖಲೆಯೇ ಆಗಿದ್ದು ಗಮನಾರ್ಹ.
1962ರಲ್ಲಿ ಕಾಂಗ್ರೆಸ್ ಸಂಸದೆ ಸರೋಜಿನಿ ಮಹಿಷಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಎ.ಎ. ಶಿವಳ್ಳಿ ಅವರ ವಿರುದ್ಧ 1,53,550 ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಆಮೇಲಿನ ಯಾವುದೇ ಚುನಾವಣೆಯಲ್ಲೂ ಗೆಲುವಿನ ಅಂತರ ಇಷ್ಟೊಂದು ಆಗಿಲ್ಲ. ಆ ಚುನಾವಣೆಯಲ್ಲಿ ಸರೋಜಿನಿ ಮಹಿಷಿ 1,87,654 ಮತಗಳನ್ನು ಪಡೆದಿದ್ದರೆ, ಶಿವಳ್ಳಿ ಕೇವಲ 34,104 ಮತ ಪಡೆದಿದ್ದರು. ಒಟ್ಟು 4,39,047 ಮತಗಳಲ್ಲಿ 2,61,957 ಚಲಾವಣೆಗೊಂಡಿದ್ದು, 13,361 ತಿರಸ್ಕೃತಗೊಂಡಿದ್ದವು. ಸರೋಜಿನಿ ಮಹಿಷಿ ಈ ಮೂಲಕ ಕರ್ನಾಟಕದಿಂದ ಆಯ್ಕೆಯಾದ ಮೊದಲ ಮಹಿಳಾ ಸಂಸದೆಯೂ ಆಗಿ ದಾಖಲೆ ಬರೆದರು.
1991ರಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ನಾಯ್ಕರ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಜನತಾದಳದ ಚಂದ್ರಕಾಂತ ಬೆಲ್ಲದ ವಿರುದ್ಧ ಕೇವಲ 21,791 ಮತಗಳ ಅಂತರದಿಂದ ಜಯ ಗಳಿಸಿದ್ದರು. ಡಿ.ಕೆ. ನಾಯ್ಕರ್ 1,57,682 ಮತಗಳನ್ನು ಗಳಿಸಿದ್ದರೆ, ಚಂದ್ರಕಾಂತ ಬೆಲ್ಲದ ಅವರಿಗೆ 1,35,891 ಮತಗಳು ಲಭಿಸಿದ್ದವು. ಒಟ್ಟು 9,58,551 ಮತಗಳಲ್ಲಿ 4,88,525 ಚಲಾವಣೆಗೊಂಡಿದ್ದು, 14,395 ಮತಗಳು ತಿರಸ್ಕೃತವಾಗಿದ್ದವು. 2009ರ ಚುನಾವಣೆಯಲ್ಲಿ ಬಿಜೆಪಿಯ ಸಂಸದ ಪ್ರಹ್ಲಾದ ಜೋಶಿ 1,37,663 ಮತಗಳ ಅಂತರದಿಂದ ಗೆಲವು ಪಡೆದಿದ್ದರು. ಜೋಶಿ 4,46,786 ಮತ ಪಡೆದಿದ್ದರೆ, ಸಮೀಪದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಕುನ್ನೂರ 3,09,123 ಮತ ಪಡೆದಿದ್ದರು. ಒಟ್ಟು 13,72,873 ಮತಗಳಲ್ಲಿ 7,98,294 ಚಲಾವಣೆಗೊಂಡಿದ್ದು, 80 ತಿರಸ್ಕೃತಗೊಂಡಿದ್ದವು. ಸರೋಜಿನಿ ಮಹಿಷಿ ಬಳಿಕ ಹೆಚ್ಚಿನ ಅಂತರದಿಂದ ಗೆದ್ದವರಲ್ಲಿ ಪ್ರಹ್ಲಾದ ಜೋಶಿ ಅವರೇ ಇದ್ದಾರೆ.
- ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.