ಧಾರವಾಡ

ಚಿಣ್ಣರ ಬಣ್ಣದಾಟಕ್ಕೆ ಅಡ್ಡಿಯಾದ ಪರೀಕ್ಷೆ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 15
ಹೋಳಿ ಹಬ್ಬ ಆಚರಣೆಗೆ ಇಡೀ ಉತ್ತರ ಕರ್ನಾಟಕದಲ್ಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ವಿಶೇಷ ಗಮನ ಸೆಳೆಯುತ್ತದೆ. ಪ್ರತಿ ವರ್ಷವೂ ಬಣ್ಣದ ಹಬ್ಬ ಬರುವುದನ್ನು ಚಿಣ್ಣರಿಂದ ಹಿಡಿದು ವಯೋವೃದ್ಧರವರೆಗೂ ಎದುರು ನೋಡುವುದು ಸಾಮಾನ್ಯ.
ಆದರೆ, ಪ್ರಸಕ್ತ ವರ್ಷ ಬಣ್ಣದ ಹಬ್ಬ ಆಚರಣೆಯಿಂದ ಚಿಣ್ಣರಿಂದ ಹಿಡಿದು ಯುವಕರು ಪಾಲ್ಗೊಳ್ಳದಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು ತಹರೇವಾರಿ ಬಣ್ಣಗಳಲ್ಲಿ ಮಿಂದೇಳಬೇಕೆಂಬ ಖುಷಿಯಲ್ಲಿದ್ದ ಚಿಣ್ಣರ ಆಸೆಗೆ ತಣ್ಣಿರೆರಚಿದಂತಾಗಿದೆ.
ದಶಕಗಳ ಹಿಂದೆ ಅತಿ ಸೂಕ್ಷ್ಮ ಪ್ರದೇಶ ಎಂಬ ಕುಖ್ಯಾತಿಗೆ ಒಳಗಾಗಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಇದೀಗ ಸಂಪೂರ್ಣ ಶಾಂತಿ ನೆಲೆಸಿದೆ ಎಂಬುದನ್ನು ಯಾರೊಬ್ಬರೂ ಅಲ್ಲಗಳೆಯುವಂತಿಲ್ಲ. ಇಂತಹ ಸಂದರ್ಭದಲ್ಲಿ ಹೋಳಿ ಹಬ್ಬದ ಸವಿ ಸವಿಯಬೇಕೆಂಬ ಉತ್ಸುಕತೆಯಲ್ಲಿದ್ದ ಮಕ್ಕಳ ಆಸೆಗೆ ಪರೀಕ್ಷೆ ಹಾಗೂ ಆಯಾ ಶಾಲೆಗಳ ಆಡಳಿತ ಮಂಡಳಿಗಳು ಕೈಗೊಂಡಿರುವ ನಿರ್ಧಾರ ತಣ್ಣೀರೆರಚಿದೆ.
ಇಂದು ಪ್ರತಿಷ್ಠಾಪನೆ: ಅವಳಿನಗರದ ಮಾ. 16ರಂದು ಒಟ್ಟು 331 ಪ್ರದೇಶಗಳಲ್ಲಿ ಸಾರ್ವಜನಿಕ ಕಾಮಣ್ಣ-ರತಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಧಾರವಾಡ ಸೇರಿದಂತೆ ಹುಬ್ಬಳ್ಳಿಯ ಬೆರಳಣಿಕೆಯಷ್ಟು ಪ್ರದೇಶಗಳಲ್ಲಿ ಮಾತ್ರ ಕಾಮಣ್ಣ-ರತಿದೇವಿಯರನ್ನು ಪ್ರತಿಷ್ಠಾಪಿಸಿದ ದಿನ ಹಾಗೂ ಎರಡನೇ ದಿನದಂದು ಕಾಮನನ್ನು ದಹಿಸಿ ಬಣ್ಣದೆರಚಾಟದಲ್ಲಿ ಎಲ್ಲರೂ ತೊಡಗುತ್ತಾರೆ.
ಆದರೆ, ಬಹುತೇಕ ಪ್ರದೇಶಗಳಲ್ಲಿ ರಂಗಪಂಚಮಿ ಆಚರಣೆ ನಡೆಯುವುದು 5ನೇ ದಿನದಂದೆ. ಅಂದು ಇಡೀ ಹುಬ್ಬಳ್ಳಿ-ಧಾರವಾಡ ಮಹಾನಗರ ಬಣ್ಣದಲ್ಲಿ ಮಿಂದೇಳುತ್ತದೆ. ಚಿಣ್ಣರು, ಯುವತಿಯರು, ಮಹಿಳೆಯರು, ಯುವಕರು ಹಾಗೂ ವಯೋವೃದ್ಧರು ಆದಿಯಾಗಿ ಬಣ್ಣದಾಟದಲ್ಲಿ ತೊಡಗುತ್ತಾರೆ. ಅವಳಿನಗರದಲ್ಲಿ ನಡೆಯುವ ಬಣ್ಣದಾಟವನ್ನು ನೋಡುವುದೇ ಒಂದು ರೀತಿಯ ರೋಮಾಂಚನ ಮೂಡಿಸುತ್ತದೆ ಎಂದರೆ ತಪ್ಪಾಗಲಾರದು.
ಪ್ರೀ ನರ್ಸರಿಯಿಂದ: ಹೋಳಿ ಹಬ್ಬಕ್ಕೆ ಸರ್ಕಾರಿ ರಜೆ ಘೋಷಿಸಲಾಗಿಲ್ಲ. ಅವಳಿ ನಗರದಲ್ಲಿ ಮಾ. 20ಕ್ಕೆ ಸಾಮೂಹಿಕವಾಗಿ ಹೋಳಿ ಹಬ್ಬ ಆಚರಣೆ ಮಾಡಲಾಗುತ್ತದೆ. ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ದಿನಾಂಕಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಏನೋ ನಿಜ. ಆದರೆ, ಪ್ರೀ ನರ್ಸರಿಯಿಂದ ಆರನೇ ತರಗತಿವರೆಗೆ ನಡೆಯುವ ಪರೀಕ್ಷೆಗಳು ಶಾಲಾ ಮಟ್ಟದಲ್ಲೇ ನಡೆಯುವುದರಿಂದ ಅವುಗಳ ದಿನಾಂಕಗಳಲ್ಲಿ ಬದಲಾವಣೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಖಾಸಗಿ ಶಾಲೆಗಳು ಹೊಂದಿವೆ. ಮಹಾನಗರದಲ್ಲಿ ಮಾ. 20ಕ್ಕೆ ಹೋಳಿ ಹಬ್ಬ ಆಚರಣೆಯಿದ್ದರೂ ಅಂದು ಪ್ರೀ ನರ್ಸರಿಯಿಂದ ಮೇಲ್ಪಟ್ಟ ಎಲ್ಲ ತರಗತಿಗಳ ಪರೀಕ್ಷೆಗಳನ್ನು ಆಯೋಜಿಸಲಾಗಿದ್ದು ಪಾಲಕರು ಹಾಗೂ ಚಿಣ್ಣರಲ್ಲಿ ತೀವ್ರ ನಿರಾಸೆ ಮೂಡಿಸಿದ್ದಂತೂ ಸುಳ್ಳಲ್ಲ.
ಇಡೀ ನಗರವೇ ಬಣ್ಣದಾಟದಲ್ಲಿ ತೊಡಗಿಸಿಕೊಂಡಿರುವ ಸಂದರ್ಭದಲ್ಲಿ ಚಿಣ್ಣರು ಪರೀಕ್ಷೆ ಬರೆಯುವ ಧಾವಂತದಲ್ಲಿರುವಂತಾಗಿದ್ದು ಸರಿಯಾದ ಕ್ರಮವಲ್ಲ ಎಂದು ಕೆಲ ಪಾಲಕರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
21ಕ್ಕೆ ರಜೆ: ಮಾ. 21ರಂದು ಯಾವ ಹಬ್ಬ ಹರಿದಿನಗಳಿಲ್ಲದಿದ್ದರೂ ಖಾಸಗಿ ಶಾಲೆಗಳು ಅಂದು ಶಾಲೆಗಳಿಗೆ ರಜೆ ಘೋಷಿಸಿದ್ದು ವಿಚಿತ್ರವೇ ಸರಿ. ಮಾ. 21ರ ಬದಲಾಗಿ 20ರಂದು ರಜೆ ಘೋಷಿಸಿ ಬಣ್ಣವಾಡಬೇಕೆಂಬ ಬಲವಾದ ಇಚ್ಛೆ ಹೊಂದಿರುವ ಮಕ್ಕಳ ಆಸೆ ನೆರವೇರಿಸಿಕೊಡುವಂತೆ ಅನೇಕ ಪಾಲಕರು ಆಯಾ ಶಾಲೆಗಳ ಆಡಳಿತ ಮಂಡಳಿಗೆ ಪತ್ರದ ಮೂಲಕ ವಿನಂತಿಸಿಯೂ ಕೊಂಡಿದ್ದಾರೆ ಎಂದು ಗೊತ್ತಾಗಿದೆ. ಪಾಲಕರ ವಿನಂತಿಗೆ ಯಾವುದೇ ರೀತಿಯ ಮಾನ್ಯ ಮಾಡದ ಶಾಲಾ ಆಡಳಿತ ಮಂಡಳಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆಯೇ ಮಾ. 21ಕ್ಕೆ ರಜೆ ಘೋಷಿಸಿವೆ. ಬಣ್ಣದಾಟದಿಂದ ದೂರು ಸರಿಯುವುದಿಲ್ಲ ಎಂದು ಹಟಮಾಡುತ್ತಿರುವ ತಮ್ಮ ಮಕ್ಕಳನ್ನು ಪಾಲಕರು ರಜೆ ದಿನದಂದು ಬಣ್ಣವಾಡುವಂತೆ ಮನವೊಲಿಸುತ್ತಿರುವುದು ಕಂಡು ಬರುತ್ತದೆ.
ಸ್ವವಿವೇಚನೆ: ಖಾಸಗಿ ಶಾಲೆಗಳನ್ನು ನಡೆಸುತ್ತಿರುವ ಆಡಳಿತ ಮಂಡಳಿಗಳು, ಆಯಾ ಪ್ರದೇಶಗಳಲ್ಲಿನ ಹಬ್ಬ ಹರಿದಿನ ನೋಡಿಕೊಂಡು ವರ್ಷಕ್ಕೆ 5 ದಿನ ರಜೆ ಘೋಷಿಸುವ ಅಧಿಕಾರ ಹೊಂದಿದ್ದಾರೆ. ಇದು ಆಯಾ ಶಾಲೆಗಳ ಆಡಳಿತ ಮಂಡಳಿಗಳ ಸ್ವವಿವೇಚನೆಗೆ ಬಿಟ್ಟ ವಿಷಯವೂ ಹೌದು. ಅವಳಿನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು, ಮಹಾನಗರದಲ್ಲಿ ಮಾ. 20ರಂದು ಹೋಳಿ ಹಬ್ಬದ ಆಚರಣೆ ನಡೆಯಲಿರುವುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂಬ ಅಭಿಪ್ರಾಯ ಕೇಳಿ ಬರುತ್ತದೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಪ್ರೀ ನರ್ಸರಿಯಿಂದ ಹಿಡಿದು 6ನೇ ತರಗತಿವರೆಗಿನ ಪರೀಕ್ಷೆಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡುವಂತೆ ಆಯಾ ಶಾಲೆಗಳ ಆಡಳಿತ ಮಂಡಳಿಗೆ ಸೂಚಿಸುವ ಮೂಲಕ ಮಕ್ಕಳ ಆಸೆಗೆ ಸ್ಪಂದಿಸುವರೇ ಎಂಬುದನ್ನು ಕಾದುನೋಡಬೇಕಿದೆ.
-ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.