ಧಾರವಾಡ

ಭಾವಿ ಪತ್ರಕರ್ತರಲ್ಲಿ ಸಾಮಾಜಿಕ ಬದ್ಧತೆ ಮುಖ್ಯ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 16
ಸಾಮಾಜಿಕ ಕಳಕಳಿ, ಬದ್ಧತೆ ಹಾಗೂ ಜನಹಿತಕ್ಕಾಗಿ ಕೆಲಸ ಮಾಡಬೇಕೆಂಬ ಮಹತ್ತ ಉದ್ದೇಶ ಹೊಂದಿ ಭಾವಿ ಪತ್ರಕರ್ತರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಧುಮುಕ ಬೇಕು ಎಂದು ಹಿರಿಯ ಪತ್ರಕರ್ತೆ ಡಾ೤ ಆರ್. ಪೂರ್ಣಿಮಾ ಹೇಳಿದರು.
ಕೆಎಲ್‌ಇ ಸಂಸ್ಥೆಯ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಾಗೂ ಕೆಎಲ್‌ಇ ಧ್ವನಿ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಮತ್ತು ಮಾಧ್ಯಮೋತ್ಸವದಲ್ಲಿ 'ಮಾಧ್ಯಮ: ವರ್ತಮಾನ ಮತ್ತು ಭವಿಷ್ಯ' ಕುರಿತಾಗಿ ಅವರು ಮಾತನಾಡಿದರು.
ರಾಷ್ಟ್ರೀಯ ವಿಚಾರವಾದ, ಸಮಾಜಕ್ಕೆ ಹಿತಕಾರಿಯಾದ ಸುದ್ದಿಗಳನ್ನು ಹೆಚ್ಚು ಹೆಚ್ಚು ಪ್ರಕಟಿಸುವ ಹಾಗೂ ಬಿತ್ತರಿಸುವ ಮೂಲಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ಸಾಮಾಜಿಕ ಕಾಳಜಿ ಮೆರೆಯಬೇಕಿದೆ. ಬೆಡ್ ರೂಮ್ ಸಂಗತಿಗಳನ್ನು ಪರದ ಮೇಲೆ ತೋರಿಸುವುದು ಸರಿಯಲ್ಲ. ಇದು ಸಮಾಜದ ಸ್ವಾಸ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದೂ ಡಾ೤ ಪೂರ್ಣಿಮಾ ಅಭಿಪ್ರಾಯಪಟ್ಟರು. ವರ್ತಮಾನದ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಆದ್ಯತೆ ಏನು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಸಮಾಜದ ಬದ್ಧತೆ, ಜನಹಿತ ಹಾಗೂ ಜನರ ಅನುಕೂಲಕ್ಕೆ ನಮ್ಮ ಬದ್ಧತೆ ಮೀಸಲಿಡಬೇಕಿದೆ. ತಂತ್ರಜ್ಞಾನದಲ್ಲಿ ಆಗುತ್ತಿರುವ ಅವಿಷ್ಕಾರದಿಂದಾಗಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆದರೆ, ಇದರಿಂದ ನಾವು ಸಾಧಿಸಿದ್ದೆಷ್ಟು ಹಾಗೂ ಕಳೆದುಕೊಂಡಿದ್ದು ಎಷ್ಟು ಎಂಬುದನ್ನು ಮನನ ಮಾಡಿಕೊಳ್ಳಬೇಕಿದೆ ಎಂದು ಮಾರ್ಮಿಕವಾಗಿ ನುಡಿದರು.
ರಾಷ್ಟ್ರೀಯ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದ ನಾಯಕರು ಮಾಧ್ಯಮ ಕ್ಷೇತ್ರದಲ್ಲಿಯೂ ಧುಮಕುವ ಮೂಲಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಮಾಜದ ಒಳಿತಿನ ಬುನಾದಿ ಹಾಕಿಕೊಟ್ಟಿದ್ದಾರೆ. ಅದನ್ನು ನಾವೆಂದಿಗೂ ಮರೆಯಲು ಸಾಧ್ಯವಿಲ್ಲ. ಹೆಣ್ಣು ಹುಟ್ಟುವ ಮೊದಲೇ ಸಾಯಿಸುತ್ತಾರೆ. ಮಹಿಳೆಯರು ಪೌಷ್ಟಿಕಾಂಶವುಳ್ಳ ಆಹಾರ ಸಿಗದೆ ಸಾವನ್ನಪ್ಪುತ್ತಾರೆ. ಸಾಕ್ಷರತೆ ಪ್ರಮಾಣದಲ್ಲೂ ಮಹಿಳೆಯರು ಹಿಂದೆ ಉಳಿದಿದ್ದಾರೆ. ಈ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಪೂರ್ಣಿಮಾ ಅಭಿಪ್ರಾಯಪಟ್ಟರು.
ಧಾರವಾಡ ಆಕಾಶವಾಣಿ ನಿರ್ದೇಶಕ ಸಿ.ಯು. ಬೆಳ್ಳಕ್ಕಿ, ಪತ್ರಿಕೋದ್ಯಮದಲ್ಲಿ ಅವಕಾಶಗಳಿಗೆ ಕೊರತೆ ಇಲ್ಲ. ವಿದ್ಯಾರ್ಥಿಗಳಲ್ಲಿ ಹಿಂಜರಿಕೆ ಪರಿಣಾಮ ಈ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಲು ಬಹುತೇಕರಿಗೆ ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ಸುವರ್ಣ ನ್ಯೂಸ್ ಅಪರಾಧ ಸುದ್ದಿ ವಿಭಾಗದ ಮುಖ್ಯಸ್ಥ ಅಜಿತ ಹನಮಕ್ಕನವರ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಪಠ್ಯಕ್ರಮದೊಂದಿಗೆ ಜಗತ್ತಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಕೆಎಲ್‌ಇ ಧ್ವನಿ ಆರಂಭಿಸಲಾಗಿದ್ದು ಇದರ ಪ್ರಯೋಜನ ಪಡೆದು ನಿಷ್ಪಕ್ಷಪಾತ ವರದಿ ಮಾಡಲು ಭಾವಿ ಪತ್ರಕರ್ತರು ಮುಂದಾಗಬೇಕೆಂದರು. ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿ.ಬಿ. ಪಾಟೀಲ, ಪತ್ರಕರ್ತರಾದ ಗೋಪಾಲ ಹೆಗಡೆ, ಅರುಣಕುಮಾರ ಹಬ್ಬು, ಪ್ರಾಚಾರ್ಯ ಡಾ೤ ಎಂ.ಟಿ. ಕುರಣಿ, ಗ್ರಂಥಪಾಲಕ ಬಿ.ಎಸ್. ಮಾಳವಾಡ, ವಿನಯಕುಮಾರ ಕಾಶಪ್ಪನವರ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.