ಹೈಟೆಕ್ ಪ್ರಚಾರಕ್ಕೆ ಬಿಜೆಪಿ ಸಜ್ಜು
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 18
ಲೋಕಸಭಾ ಚುನಾವಣೆ ಘೋಷಣೆಯಾಗಿ 15 ದಿನ ಕಳೆದು, ನಾಮಪತ್ರ ಸಲ್ಲಿಕೆಯ ಮುಹೂರ್ತ ಬಂದರೂ, ಧಾರವಾಡ ಕ್ಷೇತ್ರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕೃತ ಅಭ್ಯರ್ಥಿಗಳ ಹೆಸರೇ ಇಲ್ಲ!
ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಧಾರವಾಡ ಕ್ಷೇತ್ರ ಮರಳಿ ಪಡೆಯಲು ಆ ಪಕ್ಷದ ಕಾರ್ಯಕರ್ತರು ಉತ್ಸುಕರಾಗಿದ್ದರೂ, ಪಕ್ಷದ ವರಿಷ್ಠರು ಇನ್ನೂ ಅಭ್ಯರ್ಥಿ ಘೋಷಿಸದಿರುವುದು ಗೊಂದಲ ಮೂಡಿಸಿದೆ. ದಿನದಿಂದ ದಿನಕ್ಕೆ ಅವರ ಉತ್ಸಾಹ ಕುಂದುತ್ತಿದೆ. ಜೆಡಿಎಸ್ ಅವಸ್ಥೆಯೂ ಇದೇ. ಈ ವಿಳಂಬದ ಲಾಭ ಪಡೆಯಲು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಅಭ್ಯರ್ಥಿ ಪ್ರಹ್ಲಾದ ಜೋಶಿ ಯತ್ನಿಸುತ್ತಿದ್ದಾರೆ. ಹೈಟೆಕ್ ಪ್ರಚಾರಕ್ಕೂ ಪಕ್ಷ ಮುಂದಾಗಿದೆ.
ಯಾರೆಷ್ಟು ಸಿದ್ಧ...?: ಧಾರವಾಡ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಸಂಭವವಿದೆ. ಬಿಜೆಪಿ ಸಮರೋಪಾದಿಯಲ್ಲಿ ಚುನಾವಣೆಗೆ ತಯಾರಾಗಿದೆ. ಹುಬ್ಬಳ್ಳಿಯಲ್ಲಿ ಪ್ರಮುಖ ಕಾರ್ಯಕರ್ತರ ಸಭೆ ನಡೆಸಿ ಜವಾಬ್ದಾರಿಗಳನ್ನೂ ಹಂಚಲಾಗಿದೆ. ಪಕ್ಷದ ಎಲ್ಲ ಮೋರ್ಚಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬೂಥ್ ಮಟ್ಟದಲ್ಲಿ ಕೆಲಸ ಆರಂಭಿಸಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ತಲಾ 20 ಜನರ ಚುನಾವಣಾ ನಿರ್ವಹಣಾ ಸಮಿತಿ ರಚನೆಯಾಗಿದ್ದು, ತರಬೇತಿ ನೀಡಲಾಗಿದೆ. ಪಕ್ಷದ ಕಚೇರಿಯಲ್ಲಿ ನಿತ್ಯ ಸಭೆ, ಚರ್ಚೆಗಳು ನಡೆಯುತ್ತಿದ್ದು, ಚುನಾವಣೆಗೆ ತಾವು ಸರ್ವಸಿದ್ಧ ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ ಹೇಳುತ್ತಾರೆ.
ತಂತ್ರಜ್ಞಾನದ ನೆರವು: ಪಕ್ಷದ ಕಾರ್ಯಾಲಯಗಳ ಜತೆಗೆ ಚುನಾವಣಾ ಕಚೇರಿಯನ್ನು ಹುಬ್ಬಳ್ಳಿಯಲ್ಲಿ ಆರಂಭಿಸಲಾಗುತ್ತಿದ್ದು, ಅಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪ್ರಚಾರ ಕಾರ್ಯ ನಿರ್ವಹಿಸಲಾಗುತ್ತದೆ. ಪಕ್ಷದ ಮಾಹಿತಿ ತಂತ್ರಜ್ಞಾನ ಕೇಂದ್ರದ ಮೂಲಕ ವೆಬ್ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಸಾಧನೆಗಳನ್ನು ಬಿಂಬಿಸಲಾಗುತ್ತಿದೆ. ಆರು ತಿಂಗಳಿಂದಲೇ ಬಿಜೆಪಿ ಚುನಾವಣೆಗೆ ಸಿದ್ಧವಾಗುತ್ತಿದ್ದು, ಪ್ರಹ್ಲಾದ ಜೋಶಿ ಅವರಿಗೆ ಹ್ಯಾಟ್ರಿಕ್ ಗೆಲವು ತಂದು ಕೊಡಲು ಒಗ್ಗಟ್ಟಿನಿಂದ ದುಡಿಯುತ್ತಿರುವುದಾಗಿ ಪಾಟೀಲ ಹೇಳಿದರು.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಒಮ್ಮೆ ಕ್ಷೇತ್ರಕ್ಕೆ ಕರೆಯಿಸಿ ಸಮಾವೇಶ ನಡೆಸಲಾಗಿದೆ. ಕಾಂಗ್ರೆಸ್, ಜೆಡಿಎಸ್ ಇನ್ನೂ ಅಭ್ಯರ್ಥಿಗಳನ್ನೇ ಘೋಷಿಸದಿರುವುದು ನಮಗೆ ಅನುಕೂಲಕರ ವಾತಾವರಣ ಕಲ್ಪಿಸಿದೆ. ಆ ಪಕ್ಷಗಳಲ್ಲಿ ಚುನಾವಣೆ ತಯಾರಿಯೂ ಆಗಿಲ್ಲ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ಕ್ಷೇತ್ರಗಳ ಪೈಕಿ ಐದರಲ್ಲಿ ಆ ಪಕ್ಷದ ಶಾಸಕರೇ ಇದ್ದಾರೆ. ಆದರೂ ಸಿದ್ಧತೆ ಹಾಗೂ ಪ್ರಚಾರದಲ್ಲಿ ಬಿಜೆಪಿ ಮುಂದಿದೆ. ಸಂಸದ ಜೋಶಿ ಅವರ ಸಾಧನೆಗಳು ಮತದಾರರ ಕಣ್ಣೆದುರಿಗೇ ಇವೆ. ಬೇರೆ ಪಕ್ಷಗಳಿಗೆ ಗೆಲ್ಲುವ ಅವಕಾಶ ಕೊಡಲ್ಲ ಎಂದು ಲಿಂಗರಾಜ ಪಾಟೀಲ ವಿಶ್ವಾಸದಿಂದ ಹೇಳಿದರು.
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

