ಧಾರವಾಡ

ಪ್ರಯಾಣ ಭತ್ಯೆ, ಊಟವಿಲ್ಲ: ತರಬೇತಿಗೆ ಬಹಿಷ್ಕಾರ

Published On :

ಶಿರಹಟ್ಟಿ: ಏಡ್ಸ್ ನಿಯಂತ್ರಣ ಕುರಿತು ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ, ಯುವಕರಲ್ಲಿ ಜಾಗೃತಿ ಮೂಡಿಸಲು ಕರೆಯಲಾಗಿದ್ದ ತರಬೇತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ತಾಲೂಕಿನ 50ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಊಟದ ವ್ಯವಸ್ಥೆ, ಪ್ರಯಾಣ ಭತ್ಯೆ ನೀಡದ್ದಕ್ಕೆ ತರಬೇತಿ ಬಹಿಷ್ಕರಿಸಿ ಹೊರನಡೆದ ಪ್ರಸಂಗ ಮಂಗಳವಾರ ತಾಲೂಕು ಆಸ್ಪತ್ರೆಯಲ್ಲಿ ಜರುಗಿತು.
ಜಿಲ್ಲಾ ಏಡ್ಸ್ ನಿಯಂತ್ರಣ ನೋಡೆಲ್ ಅಧಿಕಾರಿ ಅರುಂದತಿ ಕುಲಕರ್ಣಿ, ತಾಲೂಕು ಆರೋಗ್ಯಾಧಿಕಾರಿ ಶ್ರೀಕಾಂತ ಕಾಟೇವಾಲೆ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸರಸ್ವತಿ ಹೊನ್ನೇಗೌಡರ ತರಬೇತಿ ನೀಡುವ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಗ್ರ ಮಾಹಿತಿ ನೀಡದೇ ತರಬೇತಿಗೆ ಹಾಜರಾಗುವಂತೆ ಮೌಖಿಕವಾಗಿ ತಿಳಿಸಿದ್ದರಿಂದ ವಿವಿಧ ಗ್ರಾಮಗಳಿಂದ 50ಕ್ಕೂ ಹೆಚ್ಚು ಕಾರ್ಯಕರ್ತೆಯರು ತಮ್ಮ ಸ್ವಂತ ಖರ್ಚಿನಿಂದ ಆಗಮಿಸಿದ್ದರು.
ತಾಲೂಕು ಆಸ್ಪತ್ರೆಯಲ್ಲಿ ಬೆಳಗ್ಗೆ 10.30ಕ್ಕೆ ನಡೆಯಬೇಕಿದ್ದ ಏಡ್ಸ್ ಅರಿವು ಕಾರ್ಯಕ್ರಮ 1 ಗಂಟೆಯಾದರೂ ಆರಂಭವಾಗದ್ದಕ್ಕೆ ಕೆಲ ಅಂಗನವಾಡಿ ಕಾರ್ಯಕರ್ತೆಯರು ವಿರೋಧ ವ್ಯಕ್ತಪಡಿಸಿದರು. ಬೆಳಗ್ಗೆಯೇ ಆಗಮಿಸಿದ್ದು ಅಲ್ಪೋಪಹಾರವನ್ನಾದರೂ ನೀಡಿ ಎಂದು ಕೇಳಿದಾಗ ನಿಮಗೆ ತರಬೇತಿ ನೀಡುವ ಅಧಿಕಾರಿಗಳು ಇನ್ನು ಬಂದಿಲ್ಲ. ಅವರನ್ನೇ ಕೇಳಿಕೊಳ್ಳಿ ಎಂದು ಆಸ್ಪತ್ರೆ ಸಿಬ್ಬಂದಿ ಬೇಜವಾಬ್ದಾರಿತನದ ಉತ್ತರ ನೀಡಿದ್ದೇ ಈ ಘಟನೆಗೆ ಕಾರಣವಾಯಿತು. ಕಡಿಮೆ ಸಂಬಳ ಪಡೆಯುವುದಲ್ಲದೇ ಸರಿಯಾಗಿ ಅನುದಾನ ಬರದಿರುವುದರಿಂದ 3 ತಿಂಗಳಿಗೊಮ್ಮೆ ವೇತನ ಪಡೆವ ಸ್ಥಿತಿ ನಮ್ಮದಾಗಿದೆ. ಸ್ವಂತ ಹಣ ಖರ್ಚು ಮಾಡಿಕೊಂಡು ಬಂದಿದ್ದು, ನಮಗೆ ಪ್ರಯಾಣ ಭತ್ಯೆ ನೀಡುವಂತೆ ಎಲ್ಲ ಕಾರ್ಯಕರ್ತೆಯರು ಆಸ್ಪತ್ರೆ ಎದುರು ನಿಂತು ಆಗ್ರಹಪಡಿಸಿದರಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬೇಡ ಎಂದು ತೀರ್ಮಾನಿಸಿ ಅಲ್ಲಿಂದ ಹೊರ ನಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.