ಧಾರವಾಡ

ಪಡಿತರ ಪಟ್ಟಿಯಲ್ಲಿ ಹೆಸರಿದ್ರೆ ಕಾಳು-ಕಡಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 20
ಆಹಾರ ಇಲಾಖೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ಕಳುಹಿಸುವ ಪಟ್ಟಿಯಲ್ಲಿ ಫಲಾನುಭವಿಗಳ ಹೆಸರಿದ್ದರೆ ಪುಣ್ಯ. ಇಲದಿದ್ದರೆ, ಆ ತಿಂಗಳಲ್ಲಿ ಅನ್ನಭಾಗ್ಯವೂ ಇಲ್ಲ, ಸಕ್ಕರೆ, ಗೋಧಿ ಇನ್ನಿತರೆ ಕಾಳು ಭಾಗ್ಯವೂ ಇಲ್ಲ!
ಆಹಾರ ಇಲಾಖೆ ಅಧಿಕೃತವಾಗಿ ನೀಡಿದ ಭಾವಚಿತ್ರವಿರುವ ಪಡಿತರ ಚೀಟಿ ಕೈಯಲ್ಲಿದ್ದರೂ ನ್ಯಾಯಬೆಲೆ ಅಂಗಡಿಗಳಲ್ಲಿ ಇಲಾಖೆ ಪ್ರತಿ ತಿಂಗಳು ಕಳುಹಿಸುವ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಪಡಿತರ ವಿತರಿಸುತ್ತಾರೆ. ಇಲ್ಲದಿದ್ದರೆ ಇಲ್ಲ.
ಮೂರು ತಿಂಗಳಿಂದ ಆರಂಭವಾಗಿರುವ ನೂತನ ಕ್ರಮದಿಂದಾಗಿ ಸಾಕಷ್ಟು ಅರ್ಹ ಬಡವರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ತಮ್ಮದಲ್ಲದ ತಪ್ಪಿಗೆ ಅರ್ಹ ಬಡ ಕುಟುಂಬಗಳು ನಿತ್ಯ ಆಹಾರ ಇಲಾಖೆ ಹಾಗೂ ನ್ಯಾಯ ಬೆಲೆ ಅಂಗಡಿಗಳಿಗೆ ಅಲೆದಾಡಬೇಕಾಗಿದೆ.
ಹೆಸರಿಲ್ಲ, ಪಡಿತರವೂ ಇಲ್ಲ!
ಧಾರವಾಡ ನಗರವೊಂದರಲ್ಲಿ 90 ನ್ಯಾಯಬೆಲೆ ಅಂಗಡಿಗಳಿದ್ದು, ಪ್ರತಿ ತಿಂಗಳು ಒಂದು ಅಂಗಡಿಗೆ ಕಡಿಮೆ ಎಂದರೆ 10ರಿಂದ 15 ಫಲಾನುಭವಿಗಳ ಹೆಸರು ಕೈಬಿಡಲಾಗುತ್ತಿದೆ. ಈ ಲೆಕ್ಕಾಚಾರದಲ್ಲಿ ಜಿಲ್ಲಾದ್ಯಂತ ನೂರಾರು ಬಡ ಕುಟುಂಬಗಳು ಅನ್ನಭಾಗ್ಯದಿಂದ ವಂಚಿತವಾಗುತ್ತಿವೆ. ಪಡಿತರ ಚೀಟಿ ಹಿಡಿದು ಅಂಗಡಿಗೆ ಬಂದು ಕಾಳು ಕೇಳಿದರೆ, ನಿಮ್ಮ ಹೆಸರು ಈ ಬಾರಿ ಪಟ್ಟಿಯಲ್ಲಿ ಇಲ್ಲ. ನಿಮ್ಮ ಹೆಸರಿಗಿರುವ ಪಡಿತರ ಬಂದಿಲ್ಲ. ಇಲಾಖೆ ಅಧಿಕಾರಿಗಳನ್ನು ಕೇಳಿ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಸಾಗ ಹಾಕುತ್ತಾರೆ. ಕಳೆದ ತಿಂಗಳು ಪಡೆದಿದ್ದೇವಲ್ಲ ಎಂದು ಕೇಳಿದರೂ, ಅದು ನಮಗೆ ಗೊತ್ತಿಲ್ಲ. ಈ ಬಾರಿ ಪಡಿತರ ಬಂದಿಲ್ಲ ಅಷ್ಟೇ ಎಂದು ಹೇಳಿ ಕಳುಹಿಸುತ್ತಾರೆ. ಈ ಮುಂಚೆ ಒಂದು ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುವ ಕಾರ್ಡ್‌ಗಳಿಗೆ ತಕ್ಕಂತೆ ಪಡಿತರ ವಿತರಣೆಯಾಗುತ್ತಿತ್ತು. ಆದರೆ, ಈಗ ಫಲಾನುಭವಿಗಳ ಹೆಸರಿರುವ ಪಟ್ಟಿ ಮೂಲಕ ವಿತರಿಸುತ್ತಿದ್ದು, ಕಚೇರಿ ಕಂಪ್ಯೂಟರ್ ಅಥವಾ ಕಣ್ತಪ್ಪಿನಿಂದಾಗಿ ಪಟ್ಟಿಯಲ್ಲಿ ಹೆಸರುಗಳು ಕಾಣದಾಗಿವೆ. ಇದು ಬಿಪಿಎಲ್ ಕಾರ್ಡ್ ಹೊಂದಿದ ಫಲಾನುಭವಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಮುಂದಿನ ತಿಂಗಳು ಅನ್ನುತ್ತಾರೆ
ತಮ್ಮ ಹೆಸರು ಪಟ್ಟಿಯಲ್ಲಿ ಏಕಿಲ್ಲ ಎಂದು ಅಧಿಕಾರಿಗಳನ್ನು ಕೇಳಿದರೆ, ಮುಂದಿನ ತಿಂಗಳು ಬರುತ್ತದೆ ಹೋಗಿ ಎಂದು ಉತ್ತರಿಸಿ ಕಳುಹಿಸುತ್ತಾರೆ. ಅಧಿಕಾರಿಗಳ ತಪ್ಪಿನಿಂದಾಗಿ ಒಂದು ತಿಂಗಳ ಪಡಿತರವನ್ನು ಕಳೆದುಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ ಎಂದು ನೊಂದ ಫಲಾನುಭವಿ, ಕೊಪ್ಪದಕೇರಿಯ ಪ್ರಕಾಶ ಗಾಣಗೇರ ಬೇಸರ ವ್ಯಕ್ತಪಡಿಸುತ್ತಾರೆ.
ಬಡವರ ಹೆಸರಿಗೆ ಬಂದ ಪಡಿತರ ಬೇರೆಡೆ ಸಾಗುತ್ತಿದೆ ಎಂಬ ಆರೋಪಗಳಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಪ್ರತಿ ತಿಂಗಳು ಹತ್ತಾರು ಫಲಾನುಭವಿಗಳ ಹೆಸರು ಪಟ್ಟಿಯಿಂದ ಕಾಣೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇಲಾಖೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಆಯಾ ನ್ಯಾಯಬೆಲೆ ಅಂಗಡಿ ವ್ಯಾಪ್ತಿ ಬರುವ ಫಲಾನುಭವಿಗಳ ಎಲ್ಲ ಹೆಸರುಗಳನ್ನು ಪ್ರಕಟವಾಗುವಂತೆ ನೋಡಿಕೊಳ್ಳಬೇಕಿದೆ.
ಇಲಾಖೆ ನೀಡಿದ ಫಲಾನುಭವಿಗಳ ಪಟ್ಟಿಗೆ ಅನುಗುಣವಾಗಿ ನ್ಯಾಯಬೆಲೆ ಅಂಗಡಿಗೆ ಪಡಿತರ ಬಂದಿರುತ್ತದೆ.
 ಕಾರ್ಡ್ ಇದ್ದರೂ ಹೆಸರು ಇಲ್ಲದಿದ್ದರೆ ಹೇಗೆ ತಾನೆ ಪಡಿತರ ಕೊಡಬೇಕು? ಮೂರು ತಿಂಗಳಿಂದ ಇಲಾಖೆ ಈ ನೂತನ ಕ್ರಮ ಕೈಗೊಂಡಿದ್ದು, ನ್ಯಾಯಬೆಲೆ ಅಂಗಡಿಕಾರರಿಗೆ ತಲೆನೋವಾಗಿ ಪರಿಣಮಿಸಿದೆ. ನಿತ್ಯ ಫಲಾನುಭವಿಗಳು ಗೋಳಾಡುತ್ತಾರೆ. ಇಲಾಖೆ ಅಧಿಕಾರಿಗಳ ಜತೆಗೆ ನಾವೂ ಬೈಯಿಸಿಕೊಳ್ಳಬೇಕೆಂದು ನ್ಯಾಯಬೆಲೆ ಅಂಗಡಿಗಾರು ಬೇಸರ ವ್ಯಕ್ತಪಡಿಸುತ್ತಾರೆ.

ಕಣ್ತಪ್ಪಿನಿಂದ ಬಿಟ್ಟು ಹೋಗಿದೆ
ಕಂಪ್ಯೂಟರ್‌ನಲ್ಲಿ ಹೆಸರು ದಾಖಲಿಸುವಾಗ ಕಣ್ತಪ್ಪಿನಿಂದಾಗಿ ಕೆಲ ಅಂಗಡಿಗಳ ವ್ಯಾಪ್ತಿಯ ಕೆಲ ಫಲಾನುಭವಿಗಳ ಹೆಸರು ಕಾಣೆಯಾಗಿರಬಹುದು. ಅಂತಹವರು ಇಲಾಖೆಗೆ ಬಂದು ತಮ್ಮ ಕಾರ್ಡ್ ಯಥಾಪ್ರತಿ ನೀಡಿದರೆ, ಮುಂದಿನ ತಿಂಗಳ ಹೊತ್ತಿಗೆ ಸರಿ ಮಾಡಿಕೊಡುತ್ತೇವೆ. ಆದರೆ, ಸುಳ್ಳು ದಾಖಲೆ ಮತ್ತಿತರ ಕಾರಣಗಳಿಂದ ನೂರಾರು ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿದ್ದು, ಅಂಥವುಗಳಿಗೆ ಪಡಿತರ ನೀಡುವುದಿಲ್ಲ.
            - ಕೆ.ಎಸ್. ಕಲ್ಲನಗೌಡರ
             (ಆಹಾರ ಮತ್ತು ನಾಗರಿಕ
        ಸರಬರಾಜು ಇಲಾಖೆ ಉಪ ನಿರ್ದೇಶಕ)
- ಹೊನ್ನಪ್ಪ ಲಕ್ಕಮ್ಮನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.