ಧಾರವಾಡ

ಕಾಂಗ್ರೆಸ್ ಅತೃಪ್ತರಿಗೆ ಜೆಡಿಎಸ್ ಗಾಳ

Published On :

-ಪ್ರಕಾಶ ಎಸ್. ಶೇಟ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 20

ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಖಾಡಕ್ಕೆ ಇಳಿದಾಗಿದೆ. ಕಾಂಗ್ರೆಸ್ ಅಳೆದು ತೂಗಿ, ಅಭ್ಯರ್ಥಿ ಘೋಷಿಸುವುದೊಂದೇ ಬಾಕಿ ಉಳಿದಿದೆ. ಏತನ್ಮಧ್ಯೆ ಜೆಡಿಎಸ್ ಅತೃಪ್ತರಿಗೆ ಗಾಳ ಹಾಕಲು ಸಜ್ಜಾಗಿ ಕುಳಿತಿದೆ.
ರಾಜ್ಯದ ಬೇರೆ ಬೇರೆ ಕ್ಷೇತ್ರಗಳಲ್ಲಿ ಅತೃಪ್ತರಿಗೆ ಮಣೆ ಹಾಕಿರುವ ಮಾದರಿಯಲ್ಲೇ ಧಾರವಾಡ ಲೋಕಸಭೆ ಕ್ಷೇತ್ರದಿಂದಲೂ ಪಕ್ಷಾಂತರಿಯನ್ನೇ ಅಭ್ಯರ್ಥಿಯಾಗಿಸಲು ಜೆಡಿಎಸ್ ನಿರ್ಧರಿಸಿದೆ. ತನ್ನ ಅಭ್ಯರ್ಥಿಯನ್ನು ಇನ್ನೂ  ಘೋಷಿಸದೆ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಜೋಶಿಗೆ ಪೈಪೋಟಿ ನೀಡುವ ಅಭ್ಯರ್ಥಿ ಜೆಡಿಎಸ್‌ನಲ್ಲಿ ಇಲ್ಲ ಎಂಬುದೇ ಈ ಮೌನಕ್ಕೆ ಕಾರಣ.
ಕಾಂಗ್ರೆಸ್‌ನಿಂದ ಬರುವವರು: ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಯಾರೆಂದು ಸ್ಪಷ್ಟ ನಿರ್ಧಾರ ಹೊರ ಬಿದ್ದಿಲ್ಲ. ವಿನಯ ಕುಲಕರ್ಣಿ, ಮಹೇಶ ನಾಲವಾಡ, ಮಂಜುನಾಥ ಕುನ್ನೂರ, ಎ.ಎಂ. ಹಿಂಡಸಗೇರಿ, ಅಜ್ಜಂಪೀರ್ ಖಾದ್ರಿ ಹೆಸರುಗಳು ಬಲವಾಗಿ ಕೇಳಿ ಬರುತ್ತಿವೆ. ಈ ಐವರ ಪೈಕಿ ಪಕ್ಷ ಯಾರನ್ನೇ ಅಭ್ಯರ್ಥಿಯಾಗಿ ಘೋಷಿಸಿದರೂ ಬಂಡಾಯ ಏಳುವುದು ಮಾತ್ರ ಖಚಿತ.
ಕಾಂಗ್ರೆಸ್ ಮಹಾನಗರ ಜಿಲ್ಲಾಧ್ಯಕ್ಷ ಎ.ಎಂ. ಹಿಂಡಸಗೇರಿ, ತಮಗೇ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ 4 ಲಕ್ಷಕ್ಕೂ ಅಧಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ, ಇಲ್ಲಿ ಅಲ್ಪಸಂಖ್ಯಾತರಿಗೇ ಟಿಕೆಟ್ ನೀಡಬೇಕು. ಈ ಹಿಂದೆ ಮೂರು ಬಾರಿ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ನೀಡಿದಾಗಲೂ ಪಕ್ಷ ಸೋಲನುಭವಿಸಿದೆ. ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದರೆ ಗೆಲುವು ನಿಶ್ಚಿತ ಎಂಬುದು ಅವರ ವಾದ.
ಒಂದು ಹಂತದಲ್ಲಿ ಹಾಲಿ ಶಾಸಕ ವಿನಯ ಕುಲಕರ್ಣಿಯವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂಬ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ಹಿಂಡಸಗೇರಿ ಅಸಮಾಧಾನ ಹೊರಗೆಡವಿದ್ದಾರೆ. ಜೆಡಿಎಸ್ ಹೊಸ್ತಿಲಲ್ಲಿ ನಿಂತಿರುವ ಜಾಫರ್ ಷರೀಫ್ ತಮ್ಮನ್ನು ಅನುಸರಿಸುವಂತೆ ದೂರವಾಣಿ ಕರೆ ಮಾಡಿ ಹೇಳಿದ್ದಾರೆಂದು ಹಿಂಡಸಗೇರಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದು, ಒಂದೊಮ್ಮೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದಲ್ಲಿ ಹಿಂಡಸಗೇರಿ ಜೆಡಿಎಸ್ ಸೇರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲುಂಡಿರುವ ಮಂಜುನಾಥ ಕುನ್ನೂರ ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿಗಳ ಪೈಕಿ ಒಬ್ಬರು. ಒಂದೊಮ್ಮೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದಲ್ಲಿ ಜೆಡಿಎಸ್ ಬಾಗಿಲು ಬಡಿಯುವುದು ನಿಶ್ಚಿತ. ಈಗಾಗಲೇ ಜೆಡಿಎಸ್‌ನಿಂದಲೂ ಕುನ್ನೂರಗೆ ಕರೆ ಬಂದಾಗಿದೆ. ತಮಗೆ ಮನ್ನಣೆ ನೀಡದೇ ಹೋದ ಪಕ್ಷದಲ್ಲಿ ಯಾವುದೇ ಕ್ಷಣದಲ್ಲಾದರೂ ಕಾಂಗ್ರೆಸ್‌ನಿಂದ ಹೊರ ಬರಲು ಸಿದ್ಧವಾಗಿರುವ ಈ ಎರಡೂ ಮುಖಂಡರಿಗಾಗಿ ಜೆಡಿಎಸ್ ಗಾಳ ಹಾಕಲು ಸಜ್ಜಾಗಿ ನಿಂತಿದೆ.
ಜಾತಿ ಲೆಕ್ಕಾಚಾರ: ಕಾಂಗ್ರೆಸ್‌ನಿಂದ ಮುನಿಸಿಕೊಂಡು ಬರುವವರನ್ನು ಜಾತಿ ಲೆಕ್ಕಾಚಾರದ ಮೇಲೆಯೇ ಜೆಡಿಎಸ್ ತನ್ನ ಅಭ್ಯರ್ಥಿಯನ್ನಾಗಿಸಲಿದೆ. ಕಾಂಗ್ರೆಸ್ ಲಿಂಗಾಯತ ಅಭ್ಯರ್ಥಿಗೆ ಮಣೆ ಹಾಕಿದಲ್ಲಿ ಎ.ಎಂ. ಹಿಂಡಸಗೇರಿ ಅವರನ್ನು ಜೆಡಿಎಸ್ ಸೆಳೆಯಲಿದೆ. ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಲಿಂಗಾಯತರಾದ ಮಂಜುನಾಥ ಕುನ್ನೂರಗೆ ಗಾಳ ಹಾಕಲಿದೆ. ಹೀಗಾಗಿ ಪ್ರಸ್ತುತ ಸನ್ನಿವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರೆಂಬ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ನೀಡಲಿದೆ ಎಂದೇ ಹೇಳಬಹುದು.
-ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.