ಧಾರವಾಡ

ಇಂದು ಯುವಜನೋತ್ಸವ

Published On :

ಹುಬ್ಬಳ್ಳಿ: ರಾಜ್ಯ ಕಾನೂನು ವಿಶ್ವವಿದ್ಯಾಲಯದ ವತಿಯಿಂದ ಮಾ. 22ರಂದು ಬೆಳಗ್ಗೆ 10.30ಕ್ಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಅಂತರ ವಲಯ ಯುವಜನೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ. ಪರಿಸರವಾದಿ ಸುರೇಶ ಹೆಬ್ಳಿಕರ್ ಯುವಜನೋತ್ಸವ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲ ಕುಲಪತಿ ಡಾ. ಬಿ.ಆರ್. ಅನಂತನ್ ಆಗಮಿಸುವರು. ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ. ಆರ್. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸುವರು. 23ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಜಾನಪದ ಸಾಹಿತಿ ಎಂ.ಜಿ. ಈಶ್ವರಪ್ಪ ಆಗಮಿಸುವರು. ಡಾ. ಟಿ.ಆರ್. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಯೋಧನಿಂದ ಗಲಾಟೆ: ಇಬ್ಬರು ಪೇದೆಗೆ ಗಾಯ
ಹಾನಗಲ್ಲ: ಸಿಆರ್‌ಪಿಎಫ್ ಯೋಧನೋರ್ವ ಕ್ಷುಲ್ಲಕ ಕಾರಣಕ್ಕೆ ಅಡುಗೆ ತಯಾರಕರೊಂದಿಗೆ ತಂಟೆ ತೆಗೆದ ಪರಿಣಾಮ ಹಿರೇಬಾಸೂರು ಗ್ರಾಮದ ಚಿಲುಮವ್ವ ದೇವಿ ಜಾತ್ರಾ ಮಹೋತ್ಸವದಲ್ಲಿ ಗದ್ದಲವಾಗಿ, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ರಜೆ ಹಿನ್ನೆಲೆಯಲ್ಲಿ ಹಿರೇಬಾಸೂರು ಗ್ರಾಮಕ್ಕೆ ಆಗಮಿಸಿರುವ ಸಿಆರ್‌ಪಿಎಫ್ ಯೋಧ ಪ್ರಕಾಶ ನಿಂಗಪ್ಪ ಗೋಡಿ ಜಾತ್ರೆಯ ಅನ್ನಸಂತರ್ಪಣೆ ವಿಭಾಗದಲ್ಲಿ ತಕರಾರು ತೆಗೆದಿದ್ದಾನೆ. ಆಗ ಮಾತಿಗೆ ಮಾತು ಬೆಳೆದು, ಜಗಳ ನಡೆದಿದೆ. ಆಗ ಜಾತ್ರಾ ಸಮಿತಿ ಪದಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಪ್ರಕಾಶ್‌ಗೆ ಬುದ್ಧಿವಾದ ಹೇಳಿದರೂ ಪುಂಡಾಟಿಕೆ ಮುಂದುವರಿಸಿದ್ದಾನೆ. ಆಡೂರು ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದರೂ ಪ್ರಕಾಶ್ ಹಾಗೂ ಆತನ ಸಂಗಡಿಗರ ಗದ್ದಲ ನಿಲ್ಲಲಿಲ್ಲ. ಪೊಲೀಸರನ್ನೂ ಏಕವಚನದಲ್ಲಿ ನಿಂದಿಸಿ, ತಳ್ಳಾಡಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ. ಶಿವರಾಜ್ ರೇವಣಪ್ಪ ತೋಟಗೇರ (19) ಎಂಬ ಯುವಕನೂ ಅಸ್ವಸ್ಥನಾಗಿದ್ದು, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕಾಶ್‌ನ ಸಂಗಡಿಗರು ಪೊಲೀಸ್ ವಾಹನದ ಗಾಲಿಗೆ ಕಲ್ಲಿಟ್ಟು, ತಡೆದಿದ್ದರಿಂದ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹಾನಗಲ್ಲ ಸಿಪಿಐ ಬಿ.ಎಸ್. ಮಂಟೂರ, ಆಡೂರು ಪಿಎಸ್‌ಐ ಕಾಂತರಾಜ್ ಸ್ಥಳಕ್ಕಾಗಮಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಡೂರು ಠಾಣೆಯಲ್ಲಿ ಒಟ್ಟು 53 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಈ ಪೈಕಿ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಲೆ ಮರೆಸಿಕೊಂಡಿರುವ ಯೋಧ ಪ್ರಕಾಶ್ ಹಾಗೂ ಇತರರಿಗಾಗಿ ಶೋಧ ಮುಂದುವರಿದಿದೆ.

ಟ್ರ್ಯಾಕ್ಟರ್ ಪಲ್ಟಿ: ಸಾವು
ಕಲಘಟಗಿ: ತಾಲೂಕಿನ ಗುಡ್ಡದ ಹೂಲಿಕಟ್ಟಿ ರಸ್ತೆ ಮಾರ್ಗದ ಬತ್ತಿದ ಕೆರೆಯಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಮಂಜುನಾಥ ನೇಮಪ್ಪ ಕೊಣ್ಣೂರ (35) ಎಂಬವನು ಮೃತಪಟ್ಟ ಪ್ರಕರಣ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಶುಕ್ರವಾರ ಮಧ್ಯಾಹ್ನ ತಡಸದಿಂದ ಗುಡ್ಡದ ಹೂಲಿಕಟ್ಟಿಗೆ ಬರುತ್ತಿರುವ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ.

ಶ್ರೀಗಳ ಅಗಲಿಕೆ: ಸಂತಾಪ
ಹುಬ್ಬಳ್ಳಿ: ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಹಿರಿಯ ಸ್ವಾಮೀಜಿಗಳಾಗಿದ್ದ ಶ್ರೀ ಸುಯತೀಂದ್ರ ಶ್ರೀಪಾದಂಗಳವರ ಅಗಲಿಕೆಗೆ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ತೀವ್ರ ಸಂತಾಪ ಸೂಚಿಸಿದ್ದಾರೆ. ಶ್ರೀ ರಾಘವೇಂದ್ರ ಸ್ವಾಮೀಜಿಗಳ ಸಕಲ ಸದ್ಭಕ್ತ ವೃಂದಕ್ಕೆ ಪೂಜ್ಯರಾಗಿದ್ದ ಶ್ರೀಗಳ ಅಗಲಿಕೆಯಿಂದ ದೇಶ ಹಾಗೂ ಸಮಾಜ ಒಬ್ಬ ಹಿರಿಯ ಧರ್ಮಗುರುಗಳು ಹಾಗೂ ಧಾರ್ಮಿಕ ಮಹಾಚೇತನವನ್ನು ಕಳೆದುಕೊಂಡಿದೆ ಎಂದೂ ಶೋಕ ವ್ಯಕ್ತಪಡಿಸಿರುವ ಜೋಶಿ, ಶ್ರೀಗಳ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ.

ಶಿವಮ್ಮ ಚರಂತಿಮಠ ನಿಧನ
ನವಲಗುಂದ: ತಾಲೂಕಿನ ಶಲವಡಿ ಗ್ರಾಮದ ಜಂಗಮ ಸಮಾಜದ ಹಿರಿಯರಾದ ಶಿವಮ್ಮ ಸೋಮಶೇಖರಯ್ಯ ಚರಂತಿಮಠ (75) ಶುಕ್ರವಾರ ಮಧ್ಯಾಹ್ನ ನಿಧನರಾದರು. ಮೃತರಿಗೆ ಆರು ಜನ ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.