ಬಸ್ನಲ್ಲಿ ಮಹಿಳೆ ಎಷ್ಟು ಸುರಕ್ಷಿತ?
ಕಳೆದ ವಾರ ರಾಜ್ಯದ ರಾಜಧಾನಿಯಲ್ಲಿ ಮಹಾನಗರ ಸಾರಿಗೆ ಬಸ್ ಚಾಲಕನಿಂದ ಯುವತಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಯತ್ನ ಮತ್ತೆ ಸಾರಿಗೆ ಬಸ್ಗಳಲ್ಲಿ ಮಹಿಳಾ ಸುರಕ್ಷತೆ ಪ್ರಶ್ನೆಯನ್ನು ಎತ್ತಿದೆ. ಕೆಲ ದಿನ ಮಹಿಳಾ ಸುರಕ್ಷತೆಗೆ ಕಾಳಜಿ ತೋರಿದಂತೆ ಮಾಡಿದ್ದ ಎನ್ಡಬ್ಲ್ಯೂಕೆಎಸ್ಆರ್ಟಿಸಿ ಇದೀಗ ಗಡದ್ದಾಗಿ ನಿದ್ದೆ ಮಾಡುತ್ತಿದೆ.
ಕಾರಣ ಇಷ್ಟೇ, ದೂರದ ದೆಹಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಂತಹ ಬೆಚ್ಚಿಬೀಳಿಸುವ ಘಟನೆಯಿಂದ ಎಚ್ಚೆತ್ತುಕೊಂಡಂತೆ ಕಾಣಿಸಿದ್ದ ಎನ್ಡಬ್ಲ್ಯೂಕೆಆರ್ಟಿಸಿ ಹುಬ್ಬಳ್ಳಿ-ಬೆಳಗಾವಿ ಬಸ್ಗಳಿಗೆ ಹೋಮ್ಗಾರ್ಡ್ ನೇಮಕ, ಹುಬ್ಬಳ್ಳಿ-ಧಾರವಾಡ ಮಧ್ಯೆ ಸಾರಥಿ, ಪರಿವಾರ ಹೆಸರಿನಲ್ಲಿ ಮಹಿಳೆಯರಿಗಾಗಿ ಬಸ್ಗಳನ್ನು ಓಡಿಸಿತ್ತು. ಆದರೆ ಕಾಲ ಕಳೆದಂತೆ ಮತ್ತು ಜನರ ಮನಸ್ಸಿನಿಂದ ಸಾಮೂಹಿಕ ಅತ್ಯಾಚಾರ ಪ್ರಕರಣ ಮರೆಯಾಗುತ್ತಿದ್ದಂತೆಯೇ ಹೋಮ್ಗಾರ್ಡ್ಗಳು, ಸಾರಥಿ, ಪರಿವಾರಗಳು ಸಾರಿಗೆಯಿಂದ ಕಣ್ಮರೆಯಾದವು.
ಇದೀಗ ಸಾರಿಗೆ ಸಂಸ್ಥೆಯ ಸಿಬ್ಬಂದಿಯಿಂದಲೇ ಮಹಿಳೆಯ ಅತ್ಯಾಚಾರಕ್ಕೆ ಪ್ರಯತ್ನ ನಡೆದಿರುವುದು ಒಂಟಿ ಮಹಿಳಾ ಪ್ರಯಾಣಿಕರ ಸುರಕ್ಷತೆಯ ಸವಾಲನ್ನು ರಾಜ್ಯದಲ್ಲಿ ಮತ್ತೆ ಎತ್ತಿದೆ.
ಅಂದಿನ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯವಸ್ಥಾಪಕರಾಗಿದ್ದ ಮನೋಜಕುಮಾರ್ ಜೈನ್, ಹುಬ್ಬಳ್ಳಿ-ಬೆಳಗಾವಿ ಬಸ್ಗಳಿಗೆ ಹೋಮ್ಗಾರ್ಡ್ಗಳ ನೇಮಕ ರಾಜ್ಯದಲ್ಲಿಯೇ ಮಹಿಳಾ ಸುರಕ್ಷತೆಗೆ ತೆಗೆದುಕೊಂಡ ಮೊಟ್ಟಮೊದಲನೇ ಕ್ರಮ ಎಂದು ಹೇಳಿದ್ದರು. ಇದರ ಜತೆಗೆ ಮಹಿಳಾ ಪ್ರಯಾಣಿಕರು ಯಾವ ಸಮಯದಲ್ಲಿ ಪ್ರಯಾಣಿಸುತ್ತಾರೆ ಎನ್ನುವುದನ್ನು ಸಮೀಕ್ಷೆ ಮಾಡುವುದಕ್ಕೆ ಸರ್ಕಾರೇತರ ಸಂಸ್ಥೆಯೊಂದನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದ್ದರು.
ಮಹಿಳಾ ಸುರಕ್ಷತೆಯಲ್ಲಿ ತುರ್ತುಕ್ರಮವಾಗಿ ಅಂದು ಹುಬ್ಬಳ್ಳಿ-ಧಾರವಾಡ ಮಧ್ಯೆ ಪರಿಚಯಿಸಿದ್ದ ಪರಿವಾರ ಬಸ್ಗಳು ಈಗ ಓಡುತ್ತಿಲ್ಲ. ಮಹಿಳೆ ಮತ್ತು ಪರಿವಾರವಿದ್ದರೆ ಮಾತ್ರ ಈ ಬಸ್ಗಳಲ್ಲಿ ಪುರುಷರಿಗೆ ಪ್ರಯಾಣಿಸುವುದಕ್ಕೆ ಅವಕಾಶ ಇತ್ತು. ಅಂದು ತುರ್ತಾಗಿ ಬಸ್ಗಳನ್ನು ಪರಿಚಯಿಸಿದ ಅನಂತರ ಪ್ರತಿಕ್ರಿಯಿಸಿದ್ದ ಮುಖ್ಯ ಸಾರಿಗೆ ವ್ಯವಸ್ಥಾಪಕ ಕುರುಂಬಯ್ಯ ಅವರು ಪರಿವಾರ ಬಸ್ಗಳಿಗೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಎಲ್ಲ ಟ್ರಿಪ್ಗಳಲ್ಲೂ ಮಹಿಳಾ ಪ್ರಯಾಣಿಕರಿಂದ ತುಂಬಿರುತ್ತದೆ ಎಂದು ಹೇಳಿದ್ದರು. ಹದಿನೈದು ತಿಂಗಳ ಅನಂತರ ನೋಡಿದರೆ ಈಗ ಪರಿವಾರ, ಸಾರಥಿಗಳು ರಸ್ತೆ ಮೇಲೆ ಕಾಣುವುದೇ ಇಲ್ಲ. ಅದ್ಯಾವುದೋ ಕಾರಣಗಳನ್ನು ನೀಡಿ ಮಹಿಳಾ ವಿಶೇಷ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಹೆಲ್ಪಲೈನ್ ಬಂದ್: ಕುಂದುಕೊರತೆಗಳ ಬಗ್ಗೆ ದೂರು ಸಲ್ಲಿಸುವುದಕ್ಕೆ ಎನ್ಡಬ್ಲ್ಯೂಕೆಆರ್ಟಿಸಿ ಆರಂಭಿಸಿರುವ 18004251836ಗೆ ಕರೆ ಮಾಡಿ ದೂರು ನೀಡೋಣ, ಸಮಸ್ಯೆ ಹೇಳಿಕೊಳ್ಳೊಣ ಎಂದರೆ ಕರೆ ಸ್ವೀಕರಿಸುವುದಕ್ಕೆ ಸಿಬ್ಬಂದಿಯೇ ಇಲ್ಲ. ಮಹಿಳಾ ಮತ್ತು ಪರಿವಾರ ಬಸ್ ಸ್ಥಗಿತದ ಕುರಿತು 'ಕನ್ನಡಪ್ರಭ' ದೊಂದಿಗೆ ಮಾತನಾಡಿದ ವಿಭಾಗೀಯ ನಿಯಂತ್ರಣಾಧಿಕಾರಿ ನಮಾಜಿ, ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಭವಿಸಿದ ಬಳಿಕ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮಹಿಳಾ ವಿಶೇಷ ಬಸ್ಗಳು ಮತ್ತು ಹುಬ್ಬಳ್ಳಿ-ಬೆಳಗಾವಿ ಬಸ್ಗಳಿಗೆ ಹೋಮಗಾರ್ಡ್ಗಳನ್ನು ಪ್ರಾಯೋಗಿಕ ವ್ಯವಸ್ಥೆ ಮಾಡಲಾಗಿತ್ತು. ಅನಂತರ ಇದನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸಭೆ: ಸಾರಿಗೆ ಸಂಸ್ಥೆ ಸಿಬ್ಬಂದಿಯಿಂದ ನಡೆದ ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಈಶಾನ್ಯ, ವಾಯವ್ಯ, ಕರ್ನಾಟಕ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರ ನಿರ್ದೇಶಕರ ಸಭೆ ಮಂಗಳವಾರ ನಡೆದಿದೆ ಎನ್ನಲಾಗಿದೆ. ಬಸ್ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು ಸೇರಿದಂತೆ ಇನ್ನಿತರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಹಿಳೆಯರಿಗೆ ಸುರಕ್ಷತೆ ಕಲ್ಪಿಸುವ ನಿಟ್ಟಿನಲ್ಲಿ ಇನ್ನಾದರೂ ವಾಯವ್ಯ ಸಾರಿಗೆ ಸಂಸ್ಥೆ ಎಚ್ಚೆತ್ತುಕೊಳ್ಳಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

