ಧಾರವಾಡ

ಕಾರ್ಯಾಂಗದ ವೈಫಲ್ಯ ಭ್ರಷ್ಟಾಚಾರಕ್ಕೆ ಕಾರಣ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 23
ರಾಜಕಾರಣಿಗಳ ಒತ್ತಡಕ್ಕೆ ಅಧಿಕಾರಿ ವರ್ಗ ಮಣಿಯದೇ, ಇಲ್ಲವೇ ಸರ್ ನನ್ನಿಂದ ಸಹಿ ಮಾಡಲಿಕ್ಕಾಗುವುದಿಲ್ಲ ಎಂದಿದ್ದರೆ ದೇಶದಲ್ಲಿ ಭ್ರಷ್ಟಾಚಾರ ಹಗರಣಗಳು ಸಂಭವಿಸುತ್ತಲೇ ಇರಲಿಲ್ಲ ಎಂದು ಮಾಜಿ ಲೋಕಾಯುಕ್ತ, ನ್ಯಾ. ಸಂತೋಷ ಹೆಗ್ಡೆ ಹೇಳಿದರು.
ಕೆಎಲ್‌ಇ ಸೊಸೈಟಿಯ ಐಎಂಎಸ್‌ಆರ್ ಮತ್ತು ಜೀತೋ ಭಾರತ್ ಸಂಘಟನೆಯಿಂದ ಭಾನುವಾರ 'ಪ್ರಜಾಪ್ರಭುತ್ವಲ್ಲಿ ಸರ್ಕಾರಿ ಸೇವೆಯ ಪಾತ್ರ ಮತ್ತು ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ' ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಾಂಗ ಸಕ್ರಿಯವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ರಾಜಕಾರಣಿಗಳ ಆಟ ನಡೆಯುವುದಿಲ್ಲ. ಆದರೆ ಇಂದು ಶಾಸಕಾಂಗ ಮತ್ತು ಕಾರ್ಯಾಂಗ ಎರಡರಲ್ಲೂ ಭ್ರಷ್ಟಾಚಾರ ಅತಿಯಾಗಿದೆ. ಇದೇ ಕಾರಣಕ್ಕೆ ಜನರು ಇಂದು ನ್ಯಾಯಾಂಗದತ್ತ ನೋಡುತ್ತಿದ್ದು, ಆದರೆ ನ್ಯಾಯಾಂಗ ಕೂಡ ಭ್ರಷ್ಟತೆಯಿಂದ ಮುಕ್ತವಾಗಿದೆ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ಕೂಡ ಇಂದು ಭ್ರಷ್ಟಾಚಾರದಿಂದ ಹೊರತಾಗಿಲ್ಲ ಎಂದರು.
ದುರಾಸೆಪೀಡಿತ ವ್ಯಕ್ತಿಗೆ ಏನೂ ಕೊಟ್ಟರೂ ಸಾಲದು. ಸಂತೃಪ್ತ ಭಾವದಿಂದ ಮಾತ್ರ ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯ. ವಿಪರ್ಯಾಸ ಎಂದರೆ ಸಮಾಜ ಯಾವಾಗಲೂ ತೋಳ್ಬಲ ಮತ್ತು ಹಣಬಲ ಇರುವವರ ಹಿಂದೆ ಇರುತ್ತದೆ. ಪ್ರಾಮಾಣಿಕರನ್ನು ಸಮಾಜ ಗೌರವಿಸುವುದಿಲ್ಲ. ಆದರೆ ಅವರು ನೆಮ್ಮದಿಯ ಜೀವನ ನಡೆಸುತ್ತಾರೆ ಎಂದು ಹೇಳಿದರು.
ಲೋಕಾಯುಕ್ತ ಕಾಯ್ದೆ ತಿದ್ದುಪಡಿಯ ಸರ್ಕಾರದ ಕ್ರಮವನ್ನು ಟೀಕಿಸಿದ ಅವರು, ಲೋಕಾಯುಕ್ತ ಸಂಸ್ಥೆಯನ್ನು ನಿವೃತ್ತ ಸರ್ಕಾರಿ ನೌಕರರಿಗೆ ಆಶ್ರಯ ಒದಗಿಸುವ ತಾಣವನ್ನಾಗಿ ಮಾಡಲು ಸರ್ಕಾರ ಯೋಜನೆ ರೂಪಿಸಿದೆ. ಕರಡು ಲೋಕಾಯುಕ್ತ ಮಸೂದೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ದಾಖಲಾಗುವ ದೂರುಗಳನ್ನು ತನಿಖೆ ಮಾಡುವುದಕ್ಕೆ ಅವಕಾಶ ನಿರಾಕರಿಸಲಾಗಿದೆ. ಆಯೋಗ್ಯ ರಾಜಕಾರಣಿಗಳನ್ನು ಮತ್ತು ಅಧಿಕಾರಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನೂತನ ಲೋಕಾಯುಕ್ತ ಮಸೂದೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಕೊನೆಯಲ್ಲಿ ಯುವಕರು ಸರ್ಕಾರಿ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೆ ಭ್ರಷ್ಟ ವ್ಯವಸ್ಥೆಯ ಭಾಗವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಐಎಂಎಸ್‌ಆರ್ ನಿರ್ದೇಶಕ ಡಾ. ಪ್ರಸಾದ ರೂಡಗಿ, ಜೀತೋ ಭಾರತ್‌ನ ಸುಧೀರ್ ಗುಪ್ತಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.