ಬಿಜೆಪಿ-ಕಾಂಗ್ರೆಸ್ ಮಧ್ಯೆ ಬಿಗ್ಫೈಟ್
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 28
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರನ್ನು ಶತಾಯ-ಗತಾಯ ಸೋಲಿಸಬೇಕೆನ್ನುವ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಳೆದು ತೂಗಿ ಕೊನೆಗೂ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಹುರಿಯಾಳುವನ್ನು ಅಣಿಗೊಳಿಸಿದ್ದು, ಇನ್ಮುಂದೆ ಶುರುವಾಗಲಿದೆ ಚುನಾವಣೆಯ ರಿಯಲ್ ಫೈಟ್.
ಧಾರವಾಡ ಲೋಕಸಭೆಗೆ ಈಗಾಗಲೇ ಬಿಜೆಪಿಯಿಂದ ಪ್ರಹ್ಲಾದ ಜೋಶಿ ನಾಮಪತ್ರ ಸಲ್ಲಿಸಿದ್ದು, ಬುಧವಾರವಷ್ಟೇ ಕಾಂಗ್ರೆಸ್ಸಿನಿಂದ ವಿನಯ ಕುಲಕರ್ಣಿ, ಪಕ್ಷೇತರರಾಗಿ ಪ್ರಮೋದ ಮುತಾಲಿಕ, ಜೆಡಿಎಸ್ ನಿಂದ ಹನುಮಂತಪ್ಪ ಬಂಕಾಪುರ ಸೇರಿದಂತೆ 21 ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಇಷ್ಟೆಲ್ಲ ಅಭ್ಯರ್ಥಿಗಳಿದ್ದರೂ ನೇರ ಸ್ಪರ್ಧೆ ಮಾತ್ರ ಬಿಜೆಪಿಯ ಪ್ರಹ್ಲಾದ ಜೋಶಿ ಹಾಗೂ ಕಾಂಗ್ರೆಸ್ಸಿನ ವಿನಯ ಕುಲಕರ್ಣಿ ಮಧ್ಯೆ ನಡೆಯುವುದು ಸ್ಪಷ್ಟ.
ಸತತವಾಗಿ ಎರಡು ಬಾರಿ ಗೆಲವು ಸಾಧಿಸಿದ ಪ್ರಹ್ಲಾದ ಜೋಶಿ ವಿರುದ್ಧ ತೊಡೆ ತಟ್ಟಿ ನಿಲ್ಲುತ್ತೇವೆಂದು ಜಿಲ್ಲೆಯ ಹಲವು ಕಾಂಗ್ರೆಸ್ ಮುಖಂಡರು ದೆಹಲಿ ಮಟ್ಟದಲ್ಲಿ ಪ್ರಯತ್ನಿಸಿದರು ಸಹ, ಪಕ್ಷದ ವರಿಷ್ಠರು ಮಾತ್ರ ಯಾರ ಒತ್ತಾಯವನ್ನು ಕಿವಿಗೆ ಹಾಕಿಕೊಳ್ಳದೇ ಧಾರವಾಡ ವಿಧಾನಸಭೆ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರನ್ನೇ ಕಣಕ್ಕೆ ಇಳಿಸಿದೆ. ಇದೀಗ ಜೋಶಿಯವರಿಗೆ ವಿನಯ ಕುಲಕರ್ಣಿಯೊಂದಿಗೆ ಶ್ರೀರಾಮಸೇನೆಯ ಪ್ರಮೋದ ಮುತಾಲಿಕ ಸಹ ತಲೆನೋವಾಗಿ ಪರಿಣಮಿಸಿದ್ದಾರೆ. ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ, ಇದರಿಂದ ಕಾಂಗ್ರೆಸ್ ಮತಗಳು ಇಬ್ಭಾಗವಾಗಬಹುದೆಂಬ ಬಿಜೆಪಿ ಲೆಕ್ಕಾಚಾರವೂ ತಲೆಕೆಳಗಾಗಿದೆ. ಇದೀಗ ಕ್ಷೇತ್ರಕ್ಕೆ ಪರಿಚಯವೇ ಇಲ್ಲದ ಹನುಮಂತಪ್ಪ ಬಂಕಾಪುರ ಜೆಡಿಎಸ್ ಸ್ಪರ್ಧೆಗೆ ನೂಕಿದೆ. ಇದು ಸಹ ಜೋಶಿ ಅವರಿಗೆ ನುಂಗಲಾರದ ತುತ್ತಾಗಿದೆ. ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿಸಬೇಕೆಂಬ ಕನಸು ಹೊತ್ತ ಪ್ರಮುಖ ಬಿಜೆಪಿ ಮುಖಂಡರಲ್ಲಿ ಪ್ರಹ್ಲಾದ ಜೋಶಿ ಸಹ ಒಬ್ಬರು. ಒಂದು ವೇಳೆ ಮೋದಿ ಪ್ರಧಾನಿಯಾದರೆ, ತಾವು ಈ ಧಾರವಾಡ ಕ್ಷೇತ್ರದಲ್ಲಿ ಗೆದ್ದು ಈ ಬಾರಿ ಕೇಂದ್ರದ ಸಚಿವ ಸ್ಥಾನ ಪಡೆಯುವುದು ಗ್ಯಾರಂಟಿ. ಈ ಮೂಲಕ ಧಾರವಾಡ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವುದಾಗಿ ಜೋಶಿ ಕನಸು ಕಂಡಿದ್ದಾರೆ. ವಿನಯ ಕುಲಕರ್ಣಿ ಕೇವಲ ಒಂದು ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ನಾನು ಎರಡು ಬಾರಿ ಸಂಸದನಾಗಿ ಇಡೀ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದೇನೆ. ಜನಸಾಮಾನ್ಯರ ಸಂಕಷ್ಟಗಳನ್ನು ಅರಿತು ಅವುಗಳಿಗೆ ಪರಿಹಾರ ನೀಡಿದ್ದೇನೆ. ಕ್ಷೇತ್ರದ ಒಂದೆರೆಡು ಹಳ್ಳಿಗಳನ್ನು ಹೊರತು ಪಡಿಸಿ ಎಲ್ಲ ಗ್ರಾಮಗಳಲ್ಲಿ ಜನರೊಂದಿಗೆ ನೇರ ಸಂಪರ್ಕದಲ್ಲಿದ್ದೇನೆ. ಇದಕ್ಕಿಂತ ಹೆಚ್ಚಾಗಿ ಪಕ್ಷದ ಸಂಘಟನೆ, ಮೋದಿ ಅಲೆ, ಹತ್ತು ವರ್ಷಗಳ ಸಾಧನೆ. ಈ ಎಲ್ಲ ಅಂಶಗಳು ನನಗೆ ಶ್ರೀರಕ್ಷೆಯಾಗಲಿವೆ ಎಂದು ಅಡ್ಡಿ-ಆತಂಕಗಳನ್ನು ಎದುರಿಸಿ ಗೆದ್ದು ಬರುತ್ತೇನೆಂದು ಜೋಶಿ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಕಳೆದ 18 ವರ್ಷಗಳಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು, ಈ ಬಾರಿ ಕಾಂಗ್ರೆಸ್ ಗೆಲವು ಖಚಿತ. ಪಕ್ಷ ಕ್ಷೇತ್ರದಲ್ಲಿ ಅನುಭವಿಸುತ್ತಿದ್ದ ವನವಾಸ ಈ ಮೂಲಕ ತಪ್ಪಿಸಲಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಸಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕ್ಷೇತ್ರದಲ್ಲಿ ಇದೀಗ ಚುನಾವಣೆಯ ಕಾವು ಏರುತ್ತಿದ್ದು, ಬಿಜೆಪಿ ಪ್ರಹ್ಲಾದ ಜೋಶಿ ಹಾಗೂ ಕಾಂಗ್ರೆಸ್ಸಿನ ವಿನಯ ಕುಲಕರ್ಣಿ ಯಾವ ರೀತಿ ಮತದಾರರ ಮನ ಓಲೈಸಿ ತಮ್ಮ ಕಡೆ ಒಲಿಸಿಕೊಳ್ಳುತ್ತಾರೆಯೋ ಕಾದು ನೋಡಬೇಕಿದೆ.
ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

