ಪಿಯುಸಿ ಫಲಿತಾಂಶ: ಧಾರವಾಡ ಜಿಲ್ಲೆಗೆ 13ನೇ ಸ್ಥಾನ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 8
2013-14ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಧಾರವಾಡ ಜಿಲ್ಲೆಯು ಈ ಬಾರಿ ಶೇ. 59.37ರಷ್ಟು ಸಾಧನೆ ಮಾಡುವ ಮೂಲಕ 13ನೇ ಸ್ಥಾನ ಕಂಡಿದೆ.
ಕಳೆದ ವರ್ಷ ಶೇ. 66.26ರಷ್ಟು ಸಾಧನೆ ಮಾಡಿದ್ದರೂ ಧಾರವಾಡ ಜಿಲ್ಲೆ 16ನೇ ಸ್ಥಾನದಲ್ಲಿತ್ತು. ಪ್ರಸಕ್ತ ವರ್ಷ ಮೂರು ಸ್ಥಾನಗಳ ಏರಿಕೆ ಕಂಡಿದೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಯಾರ್ಯಾರು ಪಡೆದಿದ್ದಾರೆಂದು ಶುಕ್ರವಾರ ಸಂಪೂರ್ಣ ಮಾಹಿತಿ ದೊರೆಯಲಿದೆ.
ಇಲ್ಲಿಯ ಶೀತಲ ಎಜ್ಯುಕೇಶನ್ ಸೊಸೈಟಿಯ ವಿದ್ಯಾ ಪಿ. ಹಂಚಿನಮನಿ ಪಿಯು ವಿಜ್ಞಾನ ಕಾಲೇಜ್ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ವಿನುತ ದಿಗರಾಜ 579 (ಶೇ. 96.5), ಮಂದಾರ ದೀಕ್ಷಿತ್ 571 (ಶೇ. 95.16), ಟಿ.ಎಂ. ಶರಣಕುಮಾರ 571 (ಶೇ. 96.16), ಅನುಷ್ಕಾ ಶೆಟ್ಟಿ 569 (ಶೇ. 94.83), ವೆಂಕಟೇಶ ಅಂಟಲಮರದ 568 (ಶೇ.94.66), ಸುಧನ್ವಾ ಆಲೂರು 565 (ಶೇ. 94.16), ರಾಘವೇಂದ್ರ ದೇಸಾಯಿ 564 (ಶೇ. 94.6), ಆತ್ಮೀಯ ವನಕುದುರೆ 563 (ಶೇ. 93.83), ಪ್ರವೀಣ ಶೇಟ್ 562 (ಶೇ. 93.66), ಆದಿಲ್ ಸೌದಾಗರ 559 (ಶೇ. 93.16) ಹೀಗೆ ಹಲವು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.
ವಿದ್ಯಾಪೋಷಕ: ವಿದ್ಯಾಪೋಷಕ ಸಂಸ್ಥೆ ವತಿಯಿಂದ ಪ್ರಸಕ್ತ ವರ್ಷ ದ್ವಿತೀಯ ಪಿಯುಸಿಯಲ್ಲಿ 189 ವಿದ್ಯಾರ್ಥಿಗಳಿಗೆ ಸಹಾಯಧನ ಮಾಡಿದ್ದಾರೆ. ಪುಸ್ತಕ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸಿ ಮಾರ್ಗದರ್ಶನ ನೀಡಲಾಗಿತ್ತು. ಈ ವಿದ್ಯಾರ್ಥಿಗಳ ಪೈಕಿ 40 ಪ್ರತಿಭಾನ್ವಿತ ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.
ಜೆಎಸ್ಸೆಸ್: ಹುಕ್ಕೇರಿಕರ ಪಿಯು ಕಾಲೇಜು ಸಹ ಉತ್ತಮ ಸಾಧನೆ ಮಾಡಿದೆ. ಒಟ್ಟು 591 ವಿದ್ಯಾರ್ಥಿಗಳ ಪೈಕಿ 503 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 85.11ರಷ್ಟು ಫಲಿತಾಂಶ ಪಡೆದಿದ್ದಾರೆ. ಈ ಪೈಕಿ 146 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 130 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಒಟ್ಟು 33 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ವಿದ್ಯಾರ್ಥಿಗಳು, ಪ್ರಾಧ್ಯಾಪಕರನ್ನು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ನ. ವಜ್ರಕುಮಾರ ಮತ್ತು ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಶ್ಲಾಘಿಸಿದ್ದಾರೆ. ಕಾಲೇಜ್ ಪ್ರಾಚಾರ್ಯೆ ಭಾರತಿ ಶಾನಭಾಗ, ಪ್ರೊ. ವೈ.ಎಸ್. ರಾಯಬಾಗಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕೆಎಲ್ಇ ವಿದ್ಯಾರ್ಥಿಗಳ ಸಾಧನೆ: ಕೆಎಲ್ಇ ಸಂಸ್ಥೆಯ ಪ್ರೇರಣಾ ಪದವಿ ಪೂರ್ವ ಮಹಾವಿದ್ಯಾಲಯದ 126 ವಿದ್ಯಾರ್ಥಿಗಳಲ್ಲಿ 68 ವಿದ್ಯಾರ್ಥಿಗಳು ವಿಶಿಷ್ಟ ಸ್ಥಾನದಲ್ಲಿ (ಡಿಸ್ಟಿಂಕ್ಷನ್), 56 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪಿಸಿಎಂಎಸ್ನಲ್ಲಿ ಶೇ. 100ರಷ್ಟು ಫಲಿತಾಂಶ ದಾಖಲಾಗಿದ್ದು, ಪಿಸಿಎಂಬಿ ವಿಭಾಗದಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳಷ್ಟೇ ಅನುತ್ತೀರ್ಣರಾಗಿದ್ದಾರೆ. ಪ್ರಭುಗೌಡ ತಿರಕನಗೌಡರ ಪ್ರಥಮ ಸ್ಥಾನ ಪಡೆದಿದ್ದು, 583 (ಶೇ. 97.17) ಅಂಕ ಗಳಿಸಿದ್ದಾರೆ (ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲಿ ಶೇ. 100, ಪಿಸಿಎಂನಲ್ಲಿ ಶೇ. 99). ಮಿಹರ್ ಸಾವಕಾರ, ಆಜ್ಞಾ ಕಟ್ಟಿ ಹಾಗೂ ಸಂಕೇತ ಭಟ್ ತಲಾ ಶೇ. 95.67 ರಷ್ಟು ಅಂಕ ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಪೂಜಾ ಲಾಹೋಟಿ ಶೇ. 95.50 ಪಡೆದು ತೃತೀಯ ಸ್ಥಾನ, ಸಾಗರ ಗೋಯಲ್ ಶೇ. 95 ಅಂಕ ಪಡೆದು ನಾಲ್ಕನೇ ಸ್ಥಾನ ಹಾಗೂ ರೋಹಿಣಿ ಭಟಕೋರ್ಸೆ ಶೇ. 94.67 ಅಂಕ ಪಡೆದು ಐದನೇ ಸ್ಥಾನದಲ್ಲಿದ್ದಾರೆ. ಸಂಖ್ಯಾಶಾಸ್ತ್ರದಲ್ಲಿ 14 ವಿದ್ಯಾರ್ಥಿಗಳು, ಗಣಿತದಲ್ಲಿ 9 ವಿದ್ಯಾರ್ಥಿಗಳು, ಗಣಕಶಾಸ್ತ್ರದಲ್ಲಿ ಮೂವರು ವಿದ್ಯಾರ್ಥಿಗಳು, ರಸಾಯನಶಾಸ್ತ್ರದಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಜೀವಶಾಸ್ತ್ರದಲ್ಲಿ ಒಬ್ಬ ವಿದ್ಯಾರ್ಥಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಸಂಸ್ಥೆ ಚೇರ್ಮನ್ ಪ್ರಭಾಕರ ಕೋರೆ ಅಭಿನಂದಿಸಿದ್ದಾರೆ.
ಚೇತನಾ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಮಾ ಶಾನಭಾಗ ಪಿಸಿಎಂಎಸ್ನಲ್ಲಿ ಶೇ. 97ರಷ್ಟು ಅಂಕ ಪಡೆದಿದ್ದು, ಒಟ್ಟು ಶೇ. 96.67ರಷ್ಟು ಅಂಕ ಪಡೆದುಕೊಂಡಿದ್ದಾಳೆ. ಪಿ.ಸಿ. ಜಾಬಿನ್ ಕಾಲೇಜಿನ ಮೇಘಾ ಬಡಿಗೇರ ಶೇ. 95.66 ರಷ್ಟು (574 ಅಂಕ) ಅಂಕ ಪಡೆದಿದ್ದು, ರಸಾಯನ ಶಾಸ್ತ್ರದಲ್ಲಿ ಶೇ. 99ರಷ್ಟು ಅಂಕ ಪಡೆದಿದ್ದಾರೆ. ರೋಹಿನಿ ಸಾಂಗ್ಲಿ (564 ಅಂಕ) ಹಾಗೂ ಅಬ್ದುಲ್ಖಾದರ ಕರಿಗಾರ (567 ಅಂಕ) ಕ್ರಮವಾಗಿ ಶೇ. 94 ಹಾಗೂ ಶೇ. 94.05ರಷ್ಟು ಅಂಕ ಪಡೆದಿದ್ದಾರೆ. ಧಾರವಾಡದ ಶಾರದಾ ಪ್ರಕಾಶ ಉಡಿಕೇರಿ ವಿಜ್ಞಾನ ವಿಭಾಗದಲ್ಲಿ ಶೇ. 97.66ರಷ್ಟು ಅಂಕಗಳಿಸಿದ್ದಾಳೆ. ಮೂಲತಃ ಧಾರವಾಡದವರಾಗಿದ್ದು ಮೂಡಬಿದ್ರಿಯ ಆಳ್ವಾ ಪಿ.ಯು. ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದಾಳೆ. ಗಣಿತ ಮತ್ತು ಜೀವಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಧಾರವಾಡದ ಹಿರಿಯ ನ್ಯಾಯವಾದಿ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಪ್ರಕಾಶ ಉಡಿಕೇರಿ ಹಾಗೂ ಮೃತ್ಯುಂಜಯ ಕಾಲೇಜು ಪ್ರಾಧ್ಯಾಪಕಿ ಪೂರ್ಣಿಮಾ ಅವರ ಮಗಳಾಗಿದ್ದಾರೆ. ವಿದ್ಯಾರ್ಥಿನಿ ಸಾಧನೆಗೆ ಕಾರ್ಮಿಕ ಧುರೀಣರಾದ ಎಂ.ಬಿ. ಕಟ್ಟಿ, ವಿ. ಜಿ. ಕಮ್ಮಾರ ಹಾಗೂ ಸಾಹಿತಿ ಮೋಹನ ನಾಗಮ್ಮನವರ ಅಭಿನಂದಿಸಿದ್ದಾರೆ.
ನೆಟ್ಗೆ ಮುಗಿಬಿದ್ದ ವಿದ್ಯಾರ್ಥಿಗಳು: ಪಿಯುಸಿ ಪರೀಕ್ಷಾ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಗುರುವಾರ ಇಂಟರ್ನೆಟ್ ಸೆಂಟರ್ಗಳಿಗೆ ಮುಗಿಬಿದ್ದಿದ್ದರು. ಬೆಳಗ್ಗೆ 11ಕ್ಕೆ ಇಂಟರ್ನೆಟ್ ಮೂಲಕ ಫಲಿತಾಂಶ ಪ್ರಕಟಿಸುವುದಾಗಿ ಪಿಯು ಮಂಡಳಿ ಬುಧವಾರ ಸಂಜೆ ಘೋಷಿಸಿತ್ತಾದರೂ ಹುಬ್ಬಳ್ಳಿಯಲ್ಲಿ ಅನೇಕ ಇಂಟರ್ನೆಟ್ ಸೆಂಟರ್ಗಳು ಬೆಳಗ್ಗೆ 8ಕ್ಕೆ ಬಾಗಿಲು ತೆಗೆದಿದ್ದವು. ಫಲಿತಾಂಶದ ಮುದ್ರಣಕ್ಕೆ ಕನಿಷ್ಠ ರು. 10ರಿಂದ ಗರಿಷ್ಠ ರು. 25ರವರೆಗೂ ಶುಲ್ಕ ನಿಗದಿಪಡಿಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

