ಧಾರವಾಡ

ಪದವೀಧರರ ಉಂಡೆಲೆಯಂತೆ ಬಿಸಾಡುವ ರಾಜಕಾರಣಿ

Published On :

ಕನ್ನಡಪ್ರಭ ವಾರ್ತೆ, ಅಣ್ಣಿಗೇರಿ, ಮೇ 25
ರಾಜಕಾರಣಿಗಳು ಪದವೀಧರ ಕ್ಷೇತ್ರವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ಎಂಎಲ್ಸಿ, ಮಂತ್ರಿಗಳಾದರೆ ಹೊರತು, ಪದವೀಧರರಿಗಾಗಿ ಏನೂ ಮಾಡಿಲ್ಲ ಎಂದು ರಾಜ್ಯ ಪದವೀಧರರ ಹಿತರಕ್ಷಣೆ ಸಮಿತಿ ಉಪಾಧ್ಯಕ್ಷ, ನ್ಯಾಯವಾದಿ ಅಶೋಕ ಬಡಿಗೇರ ಆಕ್ರೋಶ ವ್ಯಕ್ತಪಡಿಸಿದರು.
ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಚುನಾವಣೆಗೆ ಸ್ಪರ್ಧಿಸಲಿರುವ ಸಮಿತಿ ಅಧ್ಯಕ್ಷ ದಶರಥ ರಂಗರಡ್ಡಿ ಪರ ಇಲ್ಲಿಯ ಐತಿಹಾಸಿಕ ಅಮೃತೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಬಳಿಕ ಪದವೀಧರರನ್ನು ಉಂಡೆಲೆಗಳಂತೆ ಬಿಸಾಡುವ ರಾಜಕಾರಣಿಗಳ ಪ್ರವೃತ್ತಿಗೆ ಅಂತ್ಯ ಹಾಡಲೆಂದೇ ತಮ್ಮ ಸಮಿತಿ ಜನ್ಮ ತಳೆದಿದೆ ಎಂದರು.
ಈಗಿರುವ ಪದವೀಧರರ ಮತ ನೋಂದಣಿ ಕ್ರಮವೇ ದುರುದ್ದೇಶದಿಂದ ಕೂಡಿದೆ. ವಿಶ್ವ ವಿದ್ಯಾಲಯ ಮಟ್ಟದಲ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಸಾಮಾನ್ಯ ಕೂಲಿಗಳಿಗಿರುವ ಉದ್ಯೋಗ ಖಾತ್ರಿ ಯೋಜನೆ ಪದವೀಧರರಿಗಿಲ್ಲ. ಇದರ ಪರಿಹಾರಕ್ಕಾಗಿ ಗ್ರಾಮ ಮಟ್ಟದಲ್ಲೇ ಸಮಿತಿಯಾಗಬೇಕು ಎಂದರು.
ಗಣತಿ ಕಾರ್ಯ ಶಿಕ್ಷಕರಿಗೆ ಹೊರೆಯಾಗಿ ಪರಿಣಮಿಸಿದ್ದು, ಅದನ್ನು ನಿರುದ್ಯೋಗಿ ಪದವೀಧರರಿಗೆ ವರ್ಗಾಯಿಸಬೇಕು. ಗುತ್ತಿಗೆ ಆಧಾರದ ನೌಕರಿಗಳನ್ನು ನಿವೃತ್ತರ ಬದಲು ಇವರಿಗೆ ನೀಡಬೇಕು. ನಿರುದ್ಯೋಗಿ ಪದವೀಧರರಿಗೆ ಯಶಸ್ವಿನಿ ಯೋಜನೆಯನ್ನು ಅಳವಡಿಸಬೇಕು. ಅವರಿಗೆ ರು. 5 ಸಾವಿರ ಮಾಸಾಶನ ನೀಡಬೇಕು.
ಅನುದಾನರಹಿತ ಶಾಲೆ ಕಾಲೇಜುಗಳ ಪದವೀಧರರಿಗೆ ಸರ್ಕಾರ-ಸಂಸ್ಥೆ ಜಂಟಿಯಾಗಿ ಕೈ ಜೋಡಿಸಿ ಕನಿಷ್ಠ ವೇತನ ನೀಡಬೇಕು. ಎರಡು ವರ್ಷದ ಪಿಯುಸಿ ಬಳಿಕ ಮೂರು ವರ್ಷದ ಡಿಪ್ಲೋಮಾ ಕೋರ್ಸ್ ಮುಗಿಸಿದವರಿಗೂ ಪದವೀಧರ ಮತದ ಹಕ್ಕನ್ನು ನೀಡಬೇಕು ಎನ್ನುವುದು ತಮ್ಮ ಕಾರ್ಯ ಯೋಜನೆಗಳಾಗಿವೆ ಎಂದು ಅಶೋಕ ಬಡಿಗೇರ ಪ್ರತಿಪಾದಿಸಿದರು.
ತಾವೂ ಸಮಿತಿ ನಿರ್ಧಾರದಂತೆ ಚುನಾವಣೆಗೆ ಸ್ಪರ್ಧಿಸಿದ್ದು ಹಿಂತೆಗೆಯುವ ಪ್ರಶ್ನೆಯೇ ಇಲ್ಲವೆಂದು ದಶರಥ ರಂಗರಡ್ಡಿ ಹೇಳಿದರು.
ಸಮಿತಿಯ ಪದಾಧಿಕಾರಿಗಳಾದ ಮಹಾವೀರ ಅಪ್ಪಣ್ಣವರ, ಆರ್.ಬಿ. ಬೀಳಗಿ, ಶಿವಪುತ್ರಪ್ಪ ಇಟಗಿ, ಎಫ್.ಜಿ. ಸಾಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.