ಗದಗ

ನರಗುಂದ: ರೈತಭವನ ದುರ್ಬಳಕೆ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಆ. 1
ರೈತ ಬಂಡಾಯದ ಮೂಲಕ ದಶಕಗಳ ಹಿಂದೆ ದೇಶಾದ್ಯಂತ ಖ್ಯಾತಿ ಗಳಿಸಿದ್ದ ನರಗುಂದದಲ್ಲಿ ಈಗ ರೈತರಿಗಾಗಿಯೇ ನಿರ್ಮಿಸಿದ ರೈತಭವನದಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರು...!
ಹೌದು, ಜಿಲ್ಲೆಯಲ್ಲಿಯೇ ನರಗುಂದ ತಾಲೂಕು ನೀರಾವರಿ ಪ್ರದೇಶವಾಗಿದ್ದು, ಅಲ್ಲಿಯ ರೈತರು ಎಪಿಎಂಸಿ ಮಾರುಕಟ್ಟೆಗೆ ಆಗಮಿಸಿದ ವೇಳೆ ಅವರ ಅನುಕೂಲಕ್ಕಾಗಿ ಸ್ಥಳೀಯ ಎಪಿಎಂಸಿ ಆವರಣದಲ್ಲಿ ರೈತ ಭವನ ನಿರ್ಮಿಸಲಾಗಿದೆ. ರೈತರಿಗಾಗಿ ನಿರ್ಮಾಣವಾಗಿರುವ ಕಟ್ಟಡವೀಗ ತನ್ನ ಮೂಲ ಉದ್ದೇಶವನ್ನೇ ಕಳೆದುಕೊಂಡು, ಖಾಸಗಿ ವ್ಯಕ್ತಿಗಳಿಂದ ದುರ್ಬಳಕೆಯಾಗುತ್ತಿದೆ.
ಈ ದೇಶದ ಸ್ವಾತಂತ್ರ್ಯಕ್ಕಾಗಿ 1857ರಲ್ಲಿ ಬ್ರಿಟಿಷ ಅಧಿಕಾರಿಗಳ ವಿರುದ್ಧ ನರಗುಂದ ಸಂಸ್ಥಾನದ ವೀರ ಬಾಬಾಸಾಹೇಬರು ಹೋರಾಟ ಮಾಡಿ, ಬ್ರಿಟಿಷ್ ಅಧಿಕಾರಿಯ ರುಂಡ ಕಡಿದು ಪಟ್ಟಣದ ಅಗಸಿ ಬಾಗಿಲಿಗೆ ಕಟ್ಟಿದರು. ಅಂದಿನಿಂದ ಇಂದಿಗೂ ಈ ಅಗಸಿಗೆ ಕೆಂಪಅಗಸಿ ಎಂದು ಕರೆಯುತ್ತಾರೆ. 1980 ಜುಲೈ 21ರಂದು ಅಂದಿನ ಗುಂಡೂರಾವ್ ಸರ್ಕಾರವು ಈ ಭಾಗದ ಮಲಪ್ರಭಾ ಕಾಲುವೆ ನೀರಿನ ಕರ ತುಂಬದೇ ಇರುವುದಕ್ಕೆ ರೈತರ ಪಹಣಿ ಪತ್ರದಲ್ಲಿ ಸರ್ಕಾರದ ಕಬ್ಜಾ ಸೇರ್ಪಡೆ ಮಾಡಿದ್ದರಿಂದ ಈ ಭಾಗದ ರೈತರಿಂದ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಬೃಹತ್ ಪ್ರಮಾಣದ ಹೋರಾಟ ನಡೆದು, ರೈತ ಬಂಡಾಯದಿಂದ ದೇಶವೇ ನರಗುಂದ ಪಟ್ಟಣದತ್ತ ನೋಡುವಂತಾಯಿತು. ದೇಶವ್ಯಾಪಿ ರೈತರ ಧ್ವನಿ ಎತ್ತಿ ತೋರಿಸಿದ ಈ ನರಗುಂದ ತಾಲೂಕಿನಲ್ಲಿರುವ ರೈತ ಭವನವು ಇಂದು ರೈತರಿಗೆ ಉಪಯೋಗಕ್ಕೆ ಬಾರದೇ ಇರುವುದು ದುರದೃಷ್ಟಕರ.
ಖಾಸಗಿಯವರಿಂದ ದುರ್ಬಳಕೆ: ಪಟ್ಟಣದ ಬನಹಟ್ಟಿ-ಮೂಗನೂರ ರಸ್ತೆಯಲ್ಲಿ ಅತಿ ವಿಶಾಲವಾದ 100 ಎಕರೆಯಲ್ಲಿ ಎಪಿಎಂಸಿ ಮಾರುಕಟ್ಟೆಯಿದೆ. ಸುಗ್ಗಿಯ ಸಮಯದಲ್ಲಿ ಎಲ್ಲ ವ್ಯವಹಾರ, ವಹಿವಾಟುಗಳು ಇಲ್ಲಿ ನಡೆಯುತ್ತವೆ. ಆದರೆ, 2 ವರ್ಷದಿಂದ ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಈಗ ತಾಲೂಕಿನ ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಕಡಿಮೆಯಾಗಿದೆ. ಆದರೆ ಈ ಎಪಿಎಂಸಿಯಲ್ಲಿ ರೈತರಿಗೆ ಮೀಸಲಾಗಿದ್ದ ರೈತ ಭವನದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಸಿಮೆಂಟ್, ಕಬ್ಬಿಣ ಸೇರಿದಂತೆ ಇತರೆ ವಸ್ತುಗಳನ್ನು ಇರಿಸಿಕೊಳ್ಳುತ್ತಿದ್ದಾರೆ.
ಈ ಭವನದಲ್ಲಿ ಶಿಶು ಅಭಿವೃದ್ಧಿ ಇಲಾಖೆಯವರಿಗೆ ಒಂದು ಕೋಣೆಯನ್ನು ಬಾಡಿಗೆ ನೀಡಲಾಗಿದ್ದು, ಇದರ ಅವಶ್ಯಕತೆ ಏನಿತ್ತು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಲ್ಲದೇ ಈ ರೈತ ಭವನದ ಬಯಲು ಜಾಗೆಯಲ್ಲಿ ಮತ್ತು ಕೆಲವು ಖಾಲಿ ಗೋದಾಮುಗಳಲ್ಲಿ ಖಾಸಗಿ ಗುತ್ತಿಗೆದಾರರು ಕಡಿ, ಉಸುಕು, ಸಿಮೆಂಟ್ ಮತ್ತು ಕೆಇಬಿಯಲ್ಲಿನ  ಗುತ್ತಿಗೆದಾರರು ವಿದ್ಯುತ್ ತಂತಿಗಳು ಸೇರಿದಂತೆ ಹಲವಾರು ವಸ್ತುಗಳನ್ನು ಈ ಗೋದಾಮುಗಳಲ್ಲಿ ಇಡಲಾಗಿದ್ದು, ಯಾವುದೇ ಬಾಡಿಗೆ ಪಡೆದುಕೊಳ್ಳದೇ ಇರಿಸಿಕೊಂಡಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳದೇ ರೈತರಿಗಾಗಿ ನಿರ್ಮಾಣವಾಗಿರುವ ಭವನವನ್ನು ಇನ್ನಾರಿಗೋ ದುರ್ಬಳಕೆಗೆ ಅವಕಾಶ ನೀಡಿರುವುದು ಎಪಿಎಂಸಿ ಅಧಿಕಾರಿಗಳ ಬೇಜವಾಬ್ದಾರಿ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.
- ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.