ತುಂಬದ ಮಲಪ್ರಭೆ ಜಲಾಶಯ
-ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ, ನರಗುಂದ, ಆ. 2
ಉತ್ತರ ಕರ್ನಾಟಕ ಭಾಗದ 9 ತಾಲೂಕು ಹಾಗೂ 4 ಜಿಲ್ಲೆಗಳ ರೈತ ಸಮುದಾಯ ಮಲಪ್ರಭಾ ಜಲಾಶಯವನ್ನೇ ನಂಬಿದೆ. ಆದರೆ, 3 ವರ್ಷದಿಂದ ಈ ಭಾಗದಲ್ಲಿ ಸರಿಯಾಗಿ ಮಳೆಯಾಗದೇ ಮಲಪ್ರಭಾ ಜಲಾಶಯ ತುಂಬಿಲ್ಲ. ಇದರಿಂದಾಗಿ ಈ ಭಾಗದ ಜನರಲ್ಲಿ ಮುಂದೇನು ಎಂಬ ಚಿಂತೆ ಕಾಡುತ್ತಿದ್ದು, ತಲೆಮೇಲೆ ಕೈಹೊತ್ತು ಕೂಡುವ ಪರಿಸ್ಥಿತಿ ಎದುರಾಗಿದೆ.
ಈಗಾಗಲೇ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಆದರೆ, ಮಲಪ್ರಭಾ ಜಲಾಶಯ ತುಂಬಲು ಬೇಕಾದ ಸಮರ್ಪಕ ನೀರು ಸಂಗ್ರಹವಾಗದೇ ಇರುವುದು ಈ ಭಾಗದ ರೈತರ ದೌರ್ಭಾಗ್ಯ. ನವೀಲುತಿರ್ಥ ಭಾಗದಲ್ಲಿ ಸಮರ್ಪಕ ಮಳೆಯಾದರೆ ಮಲಪ್ರಭಾ ನದಿಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತಿತ್ತು. ಆದರೆ, ಈ ಬಾರಿಯೂ ನವೀಲು ತೀರ್ಥ ಭಾಗದಲ್ಲಿ ಉತ್ತಮ ಮಳೆಯಾಗದೇ ಇರುವುದರಿಂದ ಜಲಾಶಯದ ಕಾಲುವೆಯ ನೀರನ್ನೇ ನಂಬಿಕೊಂಡು ಬದುಕುತ್ತಿರುವ ರೈತರು ಇಂದು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ತಾಲೂಕಿನ ರೈತರಿಗೆ ಗುಳೆ ಹೋಗುವ ಪರಿಸ್ಥಿತಿ ಎದುರಾಗಲಿದೆ.
ನೀರಿನ ಮಟ್ಟ: ಮಲಪ್ರಭಾ ಜಲಾಶಯಕ್ಕೆ 2011-12ನೇ ಸಾಲಿನಲ್ಲಿ 2079.58, 2012-13 ರಲ್ಲಿ 61.40, 2013-14ರ ಈಗ ಕೇವಲ 62 ಅಡಿ ನೀರು ಬಂದಿದೆ. ಈ ಭಾಗದ 1,80,000 ಹೆಕ್ಟೇರ್ ಪ್ರದೇಶದ ಜಮೀನುಗಳು ಈ ಕಾಲುವೆ ನೀರಿನ್ನೇ ಅವಲಂಬಿಸಿದ್ದು, ಈಗಿರುವ ಅಲ್ಪ ಪ್ರಮಾಣದ ನೀರನ್ನು ಕಾಲುವೆಗೆ ಹರಿಸಿದಲ್ಲಿ ನದಿಯ ನೀರು ಕಾಲುವೆಯ ಮೂಲಕ ಹೊಲಗಳಿಗೆ ಬರುವ ಮುನ್ನವೇ ಖಾಲಿಯಾಗುವ ಸಂಭವವಿದೆ.
ಮೋಡವಿದ್ದರೂ ಮಳೆಯಾಗುತ್ತಿಲ್ಲ: ಈ ಬಾರಿ ಮುಂಗಾರು ಮಳೆ ಹವಾಮಾನ ಇಲಾಖೆಯ ಪ್ರಕಾರ ಉತ್ತಮ ಮಳೆಯಾಗಲಿದೆ ಎಂದು ಹೇಳಲಾಗಿತ್ತು. ಇದನ್ನೇ ನಂಬಿಕೊಂಡ ತಾಲೂಕಿನ ರೈತ ಸಮುದಾಯವು ಈಗಾಗಲೇ ಹೆಸರು, ಈರುಳ್ಳಿಯನ್ನು ಬಿತ್ತನೆ ಮಾಡಿದ್ದಾರೆ. ಆದರೆ ರೈತನಿಗೆ ಗಾಯದ ಮೇಲೆ ಬರೆ ಎನ್ನುವಂತೆ ಈ ವರ್ಷವೂ ಮುಂಗಾರು ಮಳೆ ಮುಗಿಯುವ ಹಂತಕ್ಕೆ ಬಂದರೂ ಕೂಡ ಅಗತ್ಯ ಪ್ರಮಾಣದಲ್ಲಿ ಮಳೆಯಾಗಿಲ್ಲ. ಹೀಗಾಗಿ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.
ಹುಸಿಯಾಯ್ತು ರೈತನ ನಂಬಿಕೆ: 2-3 ವರ್ಷದಿಂದ ಸಮರ್ಪಕ ಮಳೆ ಇಲ್ಲ. ಲಾಶಯಕ್ಕೆ ನೀರು ಬಂದಿಲ್ಲ. ಈ ವರ್ಷ ಉತ್ತಮ ಮಳೆಯಾಗಿ ಮಲಪ್ರಭೆ ಮೈ ತುಂಬಿಕೊಳ್ಳುವಳೆಂದು ರೈತರು ಮುಂಗಾರು ಮುಂಚೆಯೇ ತುಂಬಾ ಹರ್ಷದಲ್ಲಿದ್ದರು. ಆದರೆ, ಮುಂಗಾರು ಹಂಗಾಮು ಮುಗಿಯುವ ಹಂತಕ್ಕೆ ತಲುಪಿದರೂ ಮಳೆಯಾಗಿಲ್ಲ. ಹೀಗಾಗಿ ಮಲಪ್ರಭಾ ಜಲಾಶಯಕ್ಕೆ ನೀರೆ ಇಲ್ಲ. ಇನ್ನು 15 ದಿನಗಳಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಉತ್ತಮ ಮಳೆ ಆಗದಿದ್ದರೆ ಮತ್ತೆ ಮಲಪ್ರಭಾ ಜಲಾಶಯಕ್ಕೆ ಹೊಂದಿಕೊಂಡಿರುವ ಸಾವಿರಾರು ಹೆಕ್ಟೇರ್ ನೀರಾವರಿ ಪ್ರದೇಶಗಳಿಗೆ ಈ ವರ್ಷವೂ ನೀರಿನ ಬರ ಎದುರಾಗಲಿದೆ.
ಯೋಜನೆಗಳಲ್ಲಿ ರಾಜಕಾರಣ: ಈ ಜಲಾಶಯಕ್ಕೆ ಬಿಜೆಪಿಯವರು ಕಳಾಸ-ಬಂಡೂರಿ ಮತ್ತು ಇತರ ಹಳ್ಳಗಳನ್ನು ಜೋಡಿಸಿದರೆ 7.34 ಟಿಎಂಸಿ ನೀರು ಬರುತ್ತದೆಂದು ಹೇಳಿ ಕಳಸಾ ಕಾಮಗಾರಿ ಪ್ರಾರಂಭಿಸಿದ್ದಾರೆ. ಆದರೆ, ಅದು ಪೂರ್ಣವಾಗದೆ ಅರ್ಧಕ್ಕೆ ನಿಂತಿದೆ. ಈಚೆಗೆ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗ ಕಾಂಗ್ರೆಸ್ ಸರ್ಕಾರದ ಶಾಸಕ ಬಿ.ಆರ್. ಯಾವಗಲ್ ಕಳಸಾ ಬಂಡೂರಿ ಯೋಜನೆಯಿಂದ ತಾಲೂಕಿಗೆ ಸಮರ್ಪಕ ನೀರು ಬರುವುದಿಲ್ಲ ಎಂಬ ಹೇಳಿಕೆ ನೀಡಿ, ಈಗ ಮಹದಾಯಿ ಜೋಡಣೆಗೆ ಮುಂದಾಗಿದ್ದು, ಈ ಕುರಿತು ತಾಲೂಕಿನ ಕೆಲ ರೈತರೊಂದಿಗೆ ತೆರಳಿ ಸಿಎಂಗೆ ಮನವಿ ಮಾಡಿದ್ದಾರೆ. ಯಾವುದಾದರೂ ಯೋಜನೆ ತರಲಿ. ಒಟ್ಟಿನಲ್ಲಿ ನಮ್ಮ ಜಮೀನುಗಳಿಗೆ ಸಮರ್ಪಕ ನೀರು ಕೊಡಲಿ ಎಂಬುದು ಇಲ್ಲಿನ ರೈತರ ಆಶಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

