ಶೌಚಾಲಯಕ್ಕೆ ಬೀಗ: ಮಕ್ಕಳ ಪರದಾಟ
ಲಕ್ಷ್ಮೇಶ್ವರ: ಪ್ರತಿ ಕಾಲೇಜಿನಲ್ಲಿ ಮತ್ತು ಶಾಲೆಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಅವಶ್ಯ ಎಂದು ಸರ್ವೋಚ್ಚ ನ್ಯಾಯಾಲಯವು ಸೂಚಿಸಿದೆ. ಆದರೆ, ಪಟ್ಟಣದ ಪುರಸಭೆಯ ಕಲಾ ಪದವಿ ಮಹಾವಿದ್ಯಾಲಯದಲ್ಲಿ ಶೌಚಾಲಯಗಳನ್ನು ನಿರ್ಮಿಸಿದ್ದರೂ ಅವುಗಳಿಗೆ ಬೀಗ ಜಡಿದಿದ್ದು, ಇದರಿಂದ ಶೌಚಕ್ಕಾಗಿ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಪುರಸಭೆ ಆಡಳಿತ ಮಂಡಳಿಯ ಕಲಾ ಪದವಿ ಮಹಾವಿದ್ಯಾಲಯದ ಹೊಸ ಕಟ್ಟಡ ಉದ್ಘಾಟನೆಗೊಂಡು 4-5 ತಿಂಗಳು ಗತಿಸಿದರೂ ವಿದ್ಯಾರ್ಥಿಗಳಿಗೆ ಶೌಚಾಲಯ ಸೌಲಭ್ಯವಿಲ್ಲ. ಈ ಕಾಲೇಜಿಗೆ ಹೊಸ ಕಟ್ಟಡ ನಿರ್ಮಿಸುವಾಗ ಶೌಚಾಲಯಕ್ಕೆ ಬೇಕಾಗಿರುವ ಸೆಪ್ಟಿಕ್ ಟ್ಯಾಂಕ್‌ನ್ನು ನಿರ್ಮಾಣ ಮಾಡಿಲ್ಲ ಹಾಗೂ ಆ ಶೌಚಾಲಯಗಳಿಗೆ ಮಲ, ಮೂತ್ರ ಹೊರ ಹೋಗಲು ಅಳವಡಿಸಬೇಕಾದ ಪ್ಲಾಸ್ಟಿಕ್ ಪೈಪ್‌ಗಳನ್ನು ಅಳವಡಿಸಿಲ್ಲ. ಹೀಗಾಗಿ ಅವುಗಳನ್ನು ಬಂದ್ ಮಾಡಲಾಗಿದೆ. 4-5 ತಿಂಗಳಿಂದ ವಿದ್ಯಾರ್ಥಿಗಳು ಶೌಚಾಲಯವಿಲ್ಲದೆ ತೊಂದರೆ ಎದುರಿಸುತ್ತಿದ್ದರೂ ಇದರ ಬಗ್ಗೆ ಪ್ರಾಚಾರ್ಯರು ಮಾತ್ರ ಗಮನ ನೀಡುತ್ತಿಲ್ಲ. ಇದು ವಿದ್ಯಾರ್ಥಿಗಳಲ್ಲಿ ಬೇಸರ ತಂದಿದೆ.
ಮುಖ್ಯಾಧಿಕಾರಿಗೆ ಪತ್ರ: ಪದವಿ ಕಾಲೇಜಿನಲ್ಲಿ ಶೌಚಾಲಯ ನಿರ್ಮಾಣ ಮಾಡಿದರೂ ಅವುಗಳಿಗೆ ಬೀಗ ಜಡಿಯಲಾಗಿರುವ ಕ್ರಮವನ್ನು ಪ್ರಶ್ನಿಸಿ ಪುರಸಭೆ ಸದಸ್ಯೆ ನಿರ್ಮಲಾ ಮೆಕ್ಕಿ ಪುರಸಭೆಯ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ. 4 ತಿಂಗಳಿಂದ ವಿದ್ಯಾರ್ಥಿಗಳಿಗೆ ಮಲ, ಮೂತ್ರ ವಿಸರ್ಜನೆಗೆ ಬಯಲೇ ಗತಿಯಾಗಿದೆ. ಅದಕ್ಕಾಗಿ ಶೌಚಾಲಯದ ಬೀಗ ತೆಗೆದು ಅನುಕೂಲ ಕಲ್ಪಿಸುವಂತೆ ಲಿಖಿತವಾಗಿ ತಿಳಿಸಿದ್ದು, ಅಲ್ಲದೆ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಸುಮಾರು ರು. 1.40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಕಾಲೇಜು ಕಟ್ಟಡವು ಪ್ರಥಮವಾಗಿ ತಯಾರಾಗುವ ನಕ್ಷೆಯಲ್ಲಿ ಶೌಚಾಲಯದಿಂದ ಹೊರ ಹೋಗುವ ತಾಜ್ಯ ಸಂಗ್ರಹಕ್ಕೆ ಸೆಪ್ಟಿಕ್ ಟ್ಯಾಂಕ್ ಬೇಕು ಎನ್ನುವ ಸಣ್ಣ ಪ್ರಮಾಣದ ಜ್ಞಾನ ಇಲ್ಲದೆ ಈ ಕಾಲೇಜಿನ ನೀಲ ನಕ್ಷೆ ತಯಾರಾಗಿದೆಯೇ ಎನ್ನುವ ಅನುಮಾನ ಕಾಡುತ್ತಿದೆ ಅಥವಾ ಬೇಕಂತಲೇ ಅವುಗಳನ್ನು ನಿರ್ಮಿಸಿದ್ದರೂ ಕಾಮಗಾರಿಯಲ್ಲಿ ಲೋಪ ಮಾಡಲಾಗಿದೆಯೇ ತಿಳಿಯುತ್ತಿಲ್ಲ.
4 ತಿಂಗಳಲ್ಲಿ ಬಿರುಕು ಬಿಟ್ಟ ಕಾಲೇಜು ಕಟ್ಟಡ
2013ರ ಫೆಬ್ರವರಿಯಲ್ಲಿ ಉದ್ಘಾಟನೆಯಾದ ಈ ಕಾಲೇಜು ಕಟ್ಟಡ ಈಗಾಗಲೆ ಹಲವು ಕಡೆಗಳಲ್ಲಿ ಬಿರುಕು ಬಿಟ್ಟಿದೆ. ಇದನ್ನು ನೋಡಿದರೆ ಈ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ತಿಳಿದು ಬರುವ ವಿಷಯವಾಗಿದೆ. ಕಟ್ಟಡದ ಬಲ ಬದಿಯ ಗೋಡೆಯ ಸಾಕಷ್ಟು ಕಡೆಗಳಲ್ಲಿ ಬಿರುಕು ಬಿಟ್ಟಿದ್ದು ತಿಳಿದಿದ್ದರೂ ಆಡಳಿತ ಮಂಡಳಿ ಅವುಗಳನ್ನು ಏರ ಕ್ರ್ಯಾಕ್ ಎನ್ನುವ ಮೂಲಕ ಮುಚ್ಚಿ ಹಾಕುವ ಕಾರ್ಯ ಮಾಡುತ್ತಿದ್ದಾರೆ. ಕೇವಲ ನಾಲ್ಕೇ ತಿಂಗಳಲ್ಲಿ ಈ ಕಟ್ಟಡ ಬಿರುಕು ಬಿಟ್ಟಿದ್ದನ್ನು ಗಮನಿಸಿದರೆ ಈ ಕಟ್ಟಡದ ಕಾಮಗಾರಿ ಯಾವ ರೀತಿಯಾಗಿ ನಿರ್ಮಾಣವಾಗಿದೆ ಎನ್ನುವ ಅನುಮಾನ ಮೂಡದೇ ಇರಲಾರದು.
ಶೌಚಾಲಯದಲ್ಲಿ ಸಣ್ಣ ಪುಟ್ಟ ಕಾಮಗಾರಿಗಳು ಬಾಕಿ ಉಳಿದುಕೊಂಡಿದ್ದು, ಅವುಗಳನ್ನು ಪೂರ್ಣಗೊಳಿಸುವಲ್ಲಿ ಅಲ್ಪ ಪ್ರಮಾಣದ ವಿಳಂಬವಾಗಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಿ ಶೌಚಾಲಯವನ್ನು ವಿದ್ಯಾರ್ಥಿಗಳ ಬಳಕೆಗೆ ಮುಕ್ತಗೊಳಿಸಲಾಗುವುದು.
- ಐ.ಸಿ. ದರಣಿ
(ಕಾಲೇಜಿನ ಪ್ರಾಚಾರ್ಯ)
-ಅಶೋಕ ಸೊರಟೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

