ಗದಗ

ಇಂದು ಕಾರ್ಯಾಗಾರ

Published On :

ಗದಗ: ಆ. 7ರಂದು ಬೆಳಗ್ಗೆ 10 ಗಂಟೆಗೆ ಗದಗ ಜಿಲ್ಲೆಯ 5 ತಾಲೂಕುಗಳ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಬಾಲ್ಯ ವಿವಾಹ ನಿಷೇಧ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಆಡಳಿತ ಭವನ, ಕೊಠಡಿ ಸಂಖ್ಯೆ 122 ರಲ್ಲಿ ಏರ್ಪಡಿಸಲಾಗಿದೆ ಎಂದು ಗದಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಂಥಾಲಯ ಶಾಖೆ ಪ್ರಾರಂಭ
ಗದಗ: 29-12-2012ರಂದು ಉದ್ಘಾಟನೆಗೊಂಡ ಕೆ.ಎಚ್.ಪಾಟೀಲ ಕ್ರೀಡಾಂಗಣದ ಗ್ರಂಥಾಲಯ ಕಟ್ಟಡದಲ್ಲಿ ನಗರ ಕೇಂದ್ರ ಗ್ರಂಥಾಲಯದ ಶಾಖೆಯನ್ನು ಆ. 7ರಂದು ದಿನಪತ್ರಿಕೆ ಮತ್ತು ನಿಯತಕಾಲಿಕಾ ವಿಭಾಗವನ್ನು ಪ್ರಾರಂಭಿಸಲಾಗುವುದು. ಸದರಿ ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಗದಗ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂರ್ತಿ ಮೆರವಣಿಗೆ
ಲಕ್ಷ್ಮೇಶ್ವರ: ಪಟ್ಟಣದ ಶಿವಶರಣೆ ಅಕ್ಕಮಹಾದೇವಿ ಬಳಗ ಹಾಗೂ ಕದಳಿ ಮಹಿಳಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಿರ್ಮಿಸಲಾಗಿರುವ ಅಕ್ಕಮಹಾದೇವಿ ದೇವಸ್ಥಾನದ ಉದ್ಘಾಟನೆಯು ಆ. 14ರಂದು ನೆರವೇರಲಿದ್ದು, ಆ. 7ರಂದು ಮಧ್ಯಾಹ್ನ 2 ಗಂಟೆಗೆ ಪ್ರತಿಷ್ಠಾಪನಗೊಳ್ಳಲಿರುವ ಅಕ್ಕಮಹಾದೇವಿಯ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವಸ್ಥಾನಕ್ಕೆ ತರಲಾಗುತ್ತದೆ. ಪೂಜಾ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಆ. 14ರಂದು ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದ್ದು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವೇದಿಕೆಯ ಅಧ್ಯಕ್ಷೆ ಪ್ರೇಮಕ್ಕ ಬಿಂಕದಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಲಕೋಟಿ: ಸರಣಿ ಕಳ್ಳತನ
ಗದಗ: ತಾಲೂಕಿನ ಹುಲಕೋಟಿ ಗ್ರಾಮದಲ್ಲಿನ 3 ಅಂಗಡಿ ಹಾಗೂ ಒಂದು ಮನೆಯಲ್ಲಿ ಸರಣಿ ಕಳ್ಳತನ ನಡೆದ ಘಟನೆ ಸೋಮವಾರ ರಾತ್ರಿ ಜರುಗಿದೆ. ಮನೆಯಲ್ಲಿದ್ದ ರು. 65 ಸಾವಿರ ಹಾಗೂ 20 ಗ್ರಾಂ ಬಂಗಾರವನ್ನು ಕಳ್ಳರು ದೋಚಿದ್ದು, ಇದರೊಟ್ಟಿಗೆ 2 ಸಣ್ಣ ಅಂಗಡಿಗಳು ಹಾಗೂ ಒಂದು ಮೆಡಿಕಲ್ ಶಾಪ್‌ನಲ್ಲಿಯೂ ಕಳ್ಳತನ ನಡೆದಿದೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಬೆರಳಚ್ಚು ತಜ್ಞರು ಹಾಗೂ ಶ್ವಾನದಳದೊಂದಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕಟಣೆ ದಾಖಲಾಗಿದೆ.
ವಚನಗಳು ಬದುಕನ್ನು ತಿದ್ದುತ್ತವೆ: ಶ್ರೀಗಳು
ಮುಂಡರಗಿ: ಇತಿಹಾಸದ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಇರಬೇಕು. ಒಳ್ಳೆಯ ಕೆಲಸವನ್ನು ಮಾಡುವವರನ್ನು ಗುರುತಿಸಬೇಕು. ಈ ಹಿನ್ನೆಲೆಯಲ್ಲಿ ಅನುಭವ ಮಂಟಪದಲ್ಲಿ ಹೇಳಲಾದ ಶರಣರ ವಚನ ಬರೆದು ಅವುಗಳನ್ನು ಸಂಗ್ರಹಿಸುವ ಕೆಲಸವನ್ನು ವಚನ ಭಂಡಾರಿ ಶಾಂತರಸ ಮಾಡಿರುವುದರಿಂದಲೇ ಇಂದಿಗೂ ವಚನಗಳು ಬದುಕನ್ನು ತಿದ್ದುವ ಉಪಕರಣಗಳಾಗಿ ಕೆಲಸಮಾಡುತ್ತಿವೆ ಎಂದು ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಕುಮಾರ ದೇವರು ಹೇಳಿದರು.
ಅವರು ಈಚೆಗೆ ಜ. ತೋಂಟದಾರ್ಯ ಶಾಖಾಮಠದಲ್ಲಿ ನಡೆಯುತ್ತಿರುವ ವಚನ ಸಂಸ್ಕೃತಿ ದರ್ಶನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು. ಶಾಂತರಸ ಮಾಡಿದ ಕೆಲಸ ಇತಿಹಾಸವನ್ನು ನಿರ್ಮಿಸಿದಷ್ಟು ಮೌಲ್ಯತೆ ಪಡೆದುಕೊಂಡಿದೆ. ವಚನಗಳು ಎಂಬುದು ಒಂದು ಹಾಲಿನಹೊಳೆ ಇದ್ದಂತೆ, ಅದನ್ನು ಕುಡಿದವರೇ ಪುಣ್ಯವಂತರು. ಅಲ್ಲದೇ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಬಹುದು ಎಂದರು. ಕಲ್ಯಾಣದ ಶರಣರ ಶ್ರಮ ಸಾರ್ಥಕವಾಗಬೇಕಾದರೆ ಎಲ್ಲರೂ ಮನೆಯಲ್ಲಿ ವಚನ ಸಾಹಿತ್ಯ ಇಟ್ಟುಕೊಂಡು ಓದಬೇಕು. ವಚನಗಳು ಅರ್ಥವಾಗುತ್ತಾ ಹೋಗುತ್ತಿದ್ದಂತೆ ಬದುಕಿನ ಹಂತಗಳು ಪ್ರಕಾಶಮಾನವಾಗುತ್ತಾ ಹೋಗುತ್ತವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.