ಗದಗ

ಶುಚಿತ್ವ ಕಾಣದ ಶೌಚಾಲಯಗಳು

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ. 7
ಸುಮಾರು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಬಸ್ ನಿಲ್ದಾಣದಲ್ಲಿ ಸ್ವಚ್ಛ ಇಲ್ಲವೇ ಇಲ್ಲ. ಹೌದು.., ಎಲ್ಲೆಲ್ಲೂ ದುರ್ವಾಸನೆಯಿಂದ ಪ್ರಯಾಣಿಕರು ನಿತ್ಯ ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಹೀನಾಯ ಪರಿಸ್ಥಿತಿ ಬಂದೊದಗಿದೆ.
ಇವನ್ನೆಲ್ಲ ಗಮನಿಸಿದರೆ ನಿಲ್ದಾಣದ ಬಗ್ಗೆ ಯಾರೂ ಲಕ್ಷ ವಹಿಸುತ್ತಿಲ್ಲವೇ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅತ್ತ ಬಸ್ ನಿಲ್ದಾಣದ ಸುತ್ತಮುತ್ತ ವಾಸಿಸುವ ಜನರ ಪಾಡಂತೂ ಹೇಳತೀರದು. ಮೂಗು ಮುಚ್ಚಿಕೊಂಡೇ ಜೀವನ ನಡೆಸಬೇಕಾಗಿದೆ. ಈ ಅವ್ಯವಸ್ಥೆ ಬಗ್ಗೆ ಈ ಹಿಂದೆ ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ ಶ್ಯಾಗೋಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸಾರಿಗೆ ಸಂಸ್ಥೆಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.
 ಸದ್ಯ ಪ್ರಯಾಣಿಕರು, ಸಾರ್ವಜನಿಕರು ರೋಸಿಹೋಗಿದ್ದಾರೆ. ಈ ಬಸ್ ನಿಲ್ದಾಣದ ಸುಧಾರಣೆ ಯಾವಾಗ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಪ್ರಯಾಣಿಕರಿಗೆ ಶುದ್ದ ಕುಡಿಯುವ ನೀರಿಲ್ಲ. ನಿಲ್ದಾಣದಲ್ಲಿ ಕೊಳವೆ ಬಾವಿ ಕೊರೆಸಿದ್ದು, ನೀರು ಸವಳು ಬಂದಿದ್ದು, ಇದೇ ನೀರನ್ನೇ ಪ್ರಯಾಣಿಕರು ಕುಡಿಯಬೇಕಾಗಿದೆ. ನೀರು ಕುಡಿಯಲು ಅಳವಡಿಸಿರುವನಲ್ಲಿ ಪಕ್ಕದಲ್ಲಿಯೇ ನಿತ್ಯ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಜನತೆಯಲ್ಲಿ ಕಾಯಿಲೆ ಭೀತಿ ಮೂಡಿದೆ.
ಬಸ್ ನಿಲ್ದಾಣದ ಸುತ್ತ ಮುತ್ತಲಿನ ಅಂಗಡಿಗಳು ತಮ್ಮ ಕಸವನ್ನು ಬೇರೆಡೆ ಹಾಕುವುದೇ ಇಲ್ಲ. ನೇರವಾಗಿ ಬಸ್ ನಿಲ್ದಾಣದೊಳಗೇ ತೂರಿಬಿಡುತ್ತಾರೆ. ದಿನನಿತ್ಯ ಇದು ನಡೆದಿದ್ದರೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಮೌನವಹಿಸಿದ್ದಾರೆ. ಸುಮಾರು 15 ದಿನಗಳಿಂದ ನಿತ್ಯ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ನಿಲ್ದಾಣದ ಹಿಂಬದಿಯ ಶೌಚಾಲಯ ಸುತ್ತಲೂ ಕೆಸರು ತುಂಬಿದ್ದು, ದುರ್ವಾಸನೆ ಸೂಸುತ್ತದೆ. ಪ್ರಯಾಣಿಕರು ಅನಿವಾರ್ಯವಾಗಿ ಅಂತಹ ವಾತಾವರಣದಲ್ಲಿ ಸಂಚರಿಸಬೇಕಾಗಿದೆ.

-ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.