12ರಂದು ವೀರಭದ್ರ ಜಾತ್ರೆ
ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಆ. 12ರಂದು ಜರುಗಲಿದೆ. ಆ. 11ರ ರಾತ್ರಿ 8 ಗಂಟೆಗೆ ಅಗ್ನಿಕುಂಡ ನಿರ್ಮಿಸುವುದು, ನಂತರ ಸಕಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ಯಾಂಬಳ, ನಂದಿ ಧ್ವಜ, ಕರಡಿಮಜಲುಗಳೊಂದಿಗೆ ಮೆರವಣಿಗೆ ಜರುಗುವುದು. ಮತ್ತು ರಾತ್ರಿಯಿಡಿ ಭಜನಾ ಜಾಗರಣಾ ಕಾರ್ಯಕ್ರಮ ನಡೆಯುವುದು. ಆ. 12ರ ಬೆಳಗ್ಗೆ 5ಕ್ಕೆ ವೀರಭದ್ರೇಶ್ವರನಿಗೆ ಮಹಾರುದ್ರಾಭಿಷೇಕ ಜರುಗಲಿದೆ. ಬೆಳಗ್ಗೆ 8.30ಕ್ಕೆ ವೀರಭದ್ರೇಶ್ವರ ಅಗ್ನಿ ಉತ್ಸವಕ್ಕೆ ವಿಶೇಷ ಪೂಜೆ, ನಂತರ ಮುತೈದೆಯರೊಂದಿಗೆ ಗಂಗೆಗೆ ಹೊರಡುವ ಕಾರ್ಯಕ್ರಮ ಜರುಗಲಿದೆ ಎಂದು ವೀರಭದ್ರೇಶ್ವರ ಸೇವಾ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದೆ.
ಬೈಕ್ ಕಳ್ಳರ ಬಂಧನ
ಗದಗ: ಗದಗ ಹಾಗೂ ಹುಬ್ಬಳ್ಳಿ ಶಹರಗಳಲ್ಲಿ ಬೈಕ್ ಕಳ್ಳತನ ಮಾಡಿ, ಅವುಗಳ ನಂಬರ್ ಪ್ಲೇಟ್ಗಳನ್ನು ಬದಲಾಯಿಸಿ ಮಾರಾಟ ಮಾಡುತ್ತಿದ್ದ 3 ಜನರನ್ನು ಬಂಧಿಸಿ, ಅವರಿಂದ 1 ಲಕ್ಷ 30 ಸಾವಿರ ಮೌಲ್ಯದ 7 ಬೈಕ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಶಹರ ಪೊಲೀಸ್ ಠಾಣೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಲ್ಲಿ ಗದಗನ ಗಂಗಿಮಡಿ ಭಾಗದ ಮಹಬೂಬಲಿ ಅಬ್ಬಿಗೇರಿ, ಹುಬ್ಬಳ್ಳಿ ಗಣೇಶಪೇಟೆಯ ನಿವಾಸಿ ಹಾಗೂ ಮಹಬೂಬಲಿಯ ಸಂಬಂಧಿಗಳಾದ ರಿಯಾಜಅಹ್ಮದ ಬೇಪಾರಿ, ರಿಂಕುಸಾವ ಸಾವ್ ಎನ್ನುವವರನ್ನು ಬಂಧಿಸಲಾಗಿದೆ. ತನಿಖೆಯಲ್ಲಿ ಪಿಎಸ್ಐ ಮಹಾಂತೇಶ, ಸಿಪಿಐ ಸಂತೋಷ್ ಪವಾರ ಹಾಗೂ ಡಿಎಸ್ಪಿ ವಿ.ವಿ. ಕುಂಬಾರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಯೋಧರ ಹತ್ಯೆ: ಖಂಡನೆ
ಗದಗ: ಜಮ್ಮು ಕಾಶ್ಮೀರದ ಪೂಂಛ್ ವಲಯದಲ್ಲಿ ನಡೆದ ಐವರು ಭಾರತೀಯ ಯೋಧರ ಹತ್ಯೆಯನ್ನು ಕನ್ನಡ ಜಾಗೃತಿ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೋಕಾವಿ ಹೇಳಿದರು. ಈ ಕುರಿತು ಪ್ರಕಟಣೆ ನೀಡಿರುವ ಅವರು, 60 ವರ್ಷಗಳಿಂದ ನಮ್ಮ ದೇಶದ ಜಮ್ಮು ಕಾಶ್ಮೀರ ಪ್ರಾಂತ್ಯಗಳಲ್ಲಿ ನಡೆಯುತ್ತಿರುವ ಅಮಾಯಕ ನಾಗರಿಕರ ಮತ್ತು ಭಾರತೀಯ ಯೋಧರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳಿಂದ ಹಲವಾರು ಜನ ಸೈನಿಕರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಸೈನಿಕರ ಜೀವಕ್ಕೆ ಬೆಲೆ ಇಲ್ಲದಂತೆ ವರ್ತಿಸುತ್ತಿದೆ. ಪಾಕಿಸ್ತಾನದಿಂದ ಎಷ್ಟು ದಾಳಿಗಳೂ ನಡೆದರೂ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವ ಕೇಂದ್ರ ಸರ್ಕಾರ, ದೇಶದ ಭದ್ರತೆಯ ಹಿತಾಸಕ್ತಿಯಿಂದ ಈಗಲಾದರೂ ಮಹತ್ವದ ನಿರ್ಣಯ ಕೈಗೊಳ್ಳಬೇಕೆಂದು ಜಿಲ್ಲಾ ಉಪಾಧ್ಯಕ್ಷ ಪ್ರಭುರಾಜಗೌಡ ಪಾಟೀಲ, ಸಂಘಟನಾ ಕಾರ್ಯದರ್ಶಿ ಸಂತೋಷ ಪಾಟೀಲ, ಕಾರ್ಯದರ್ಶಿ ಮಲ್ಲು ಗೊಲ್ಲರ, ವಿಜಯಕುಮಾರ ಮುದಿಯಪ್ಪನವರ ಹಾಗೂ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಇಂದು ಕ್ವಿಟ್ ಇಂಡಿಯಾ ಡೇ
ಗದಗ: ಬೆಟಗೇರಿಯ ಮಹಾರಾಣಾ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆಶ್ರಯದಲ್ಲಿ ಆ. 9ರಂದು ಕ್ವಿಟ್ ಇಂಡಿಯಾ ಡೇ ಆಚರಿಸಲಾಗುತ್ತಿದ್ದು, ಮಾಜಿ ಶಾಸಕ ಡಿ.ಆರ್. ಪಾಟೀಲ ಸಮ್ಮುಖದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಂದು ಬೆಳಗ್ಗೆ 11 ಗಂಟೆಗೆ ಬೆಟಗೇರಿಯ ಟೆಂಗಿನಕಾಯಿ ಬಜಾರದಲ್ಲಿ ಕ್ವಿಟ್ ಇಂಡಿಯಾ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಗೌಡರ ಹಾಗೂ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ವೈ.ಆರ್. ಹಿರೇಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದಿ ಶಿಕ್ಷಕ ತರಬೇತಿ ಕೋರ್ಸ್ ಪರೀಕ್ಷೆ
ಗದಗ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷೆ ಮಂಡಳಿ ಬೆಂಗಳೂರು ವತಿಯಿಂದ ಮೇ-2013ರಲ್ಲಿ ನಡೆಯಬೇಕಿದ್ದ ಹಿಂದಿ ಶಿಕ್ಷಕ ಕೋರ್ಸ್ ಪರೀಕ್ಷೆಯು ಆ. 26ರಿಂದ ಪ್ರಾರಂಭವಾಗಲಿದ್ದು, ಕಾಲೇಜಿನ ವಿವಿಧ ಜಿಲ್ಲೆಯ ಪ್ರಶಿಕ್ಷಣಾರ್ಥಿಗಳು ಪ್ರವೇಶಪತ್ರಕ್ಕಾಗಿ ಪ್ರಾಂಶುಪಾಲರನ್ನು ಸಂಪರ್ಕಿಸಲು ಸೂಚಿಸುತ್ತಾ, 2013-14ನೇ ಸಾಲಿಗೆ ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳು ಪ್ರಾಂಶುಪಾಲರು, ಹಿಂದಿ ಶಿಕ್ಷಕ ಟ್ರೇನಿಂಗ್ ಕಾಲೇಜ್, ಕರ್ನಾಟಕ ಹಿಂದಿ ಸಭಾ, ಹಿಂದಿ ಭವನ ಜಿಪಂ ಕಚೇರಿ ಎದುರು ಮಂಡ್ಯ ಇಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ. 08232-226667, 9448268114 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಪಾಕಿಸ್ತಾನದೊಂದಿಗೆ ಯುದ್ಧ ಸಾರಲಿ
ಗದಗ: ಭಾರತದ ಮೇಲೆ ಪದೇ ಪದೇ ಆಕ್ರಮಣ ಮಾಡುತ್ತಿರುವ ಪಾಕಿಸ್ತಾನದ ಹುಟ್ಟಡಗಿಸಲು ಭಾರತ ಸರ್ಕಾರ ಕೂಡಲೇ ಪಾಕಿಸ್ತಾನದೊಂದಿಗೆ ಯುದ್ಧ ಸಾರಬೇಕು ಎಂದು ಗದಗ ಜಿಲ್ಲಾ ಬಜರಂಗ ದಳದ ಸಂಚಾಲಕ ಮಾರುತಿ ಪವಾರ ಆಗ್ರಹಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತ ಶಾಂತಿ ಪ್ರಿಯ ದೇಶವಾಗಿದ್ದು, ಅದು ಅನೇಕ ದಶಕಗಳಿಂದಲೂ ನೆರೆಯ ಪಾಕಿಸ್ತಾನದಿಂದ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಭಾರತೀಯರು ಶಾಂತಿ ಪ್ರಿಯರು ಎಂದರೆ ಕೈಲಾಗದ ಹೇಡಿಗಳೆಂದು ಪಾಕಿಸ್ತಾನಿಯರು ಹಾಗೂ ನೆರೆಯ ದೇಶಗಳ ಭಯೋತ್ಪಾದಕರು ತಿಳಿದುಕೊಂಡಿದ್ದಾರೆ. ಈ ತಪ್ಪು ಭ್ರಾಂತಿಯಿಂದ ಕೂಡಿದ ನೆರೆಯ ದೇಶಗಳಿಗೆ ತಕ್ಕ ಪಾಠ ಕಲಿಸಲು ಪಾಕಿಸ್ತಾನದ ಮೇಲೆ ಯುದ್ಧ ಸಾರುವುದೊಂದೇ ಭಾರತಕ್ಕಿರುವ ದಾರಿಯಾಗಿದೆ. ನೆರೆಯ ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುವ ಮೂಲಕ ದೇಶದಲ್ಲಿ ಆಂತರಿಕ ಭದ್ರತೆಗೆ ತೀವ್ರ ಧಕ್ಕೆ ತಂದಿದೆ. ಆದರೆ ಕೇಂದ್ರದ ಯುಪಿಎ ಸರ್ಕಾರ ಅಲ್ಪಸಂಖ್ಯಾತರ ತುಷ್ಟಿಕರಣಕ್ಕಾಗಿ ಪಾಕಿಸ್ತಾನ ಎಷ್ಟೆ ಕಿರುಕುಳ ನೀಡಿದರೂ ಸಹ ಮೌನವಾಗಿ ಸಹಿಸುತ್ತಿದೆ. ಇದು ಅಕ್ಷಮ್ಯ ಅಪರಾಧವಾಗಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಭಾರತ ಮತ್ತೊಮ್ಮೆ ಪರಕೀಯರ ಕೈಯಲ್ಲಿ ಹೋಗುವುದು ನಿಶ್ಚಿತವಾಗಿದೆ. ಈಚೆಗೆ ಜಮ್ಮು ಕಾಶ್ಮೀರದಲ್ಲಿ ಗಸ್ತು ಕಾಯುತ್ತಿದ್ದ ಭಾರತೀಯ ಯೋಧರ ಹತ್ಯೆ ಪ್ರಕರಣ ಅತ್ಯಂತ ಖಂಡನೀಯವಾಗಿದೆ. ಪಾಕಿಸ್ತಾನದೊಂದಿಗೆ ಭಾರತ ಕೂಡಲೇ ಎಲ್ಲ ರಾಜತಾಂತ್ರಿಕ ವ್ಯವಸ್ಥೆಯನ್ನು ಕೊನೆಗೊಳಿಸಬೇಕು. ಭಾರತೀಯ ಸೈನಿಕರ ಹತ್ಯೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಪ್ರಶ್ನಿಸಬೇಕೆಂದು ಆಗ್ರಹಿಸಿದರು.
ಮಳಿಮಠ ಆಯ್ಕೆ
ಲಕ್ಷ್ಮೇಶ್ವರ: ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘಕ್ಕೆ ಶಿರಹಟ್ಟಿ ತಾಲೂಕು ಪ್ರೌಢಶಾಲಾ ವಿಭಾಗದಿಂದ ಬಾಲೆಹೊಸೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಂ.ಎಸ್. ಮಳಿಮಠ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಶಿರಹಟ್ಟಿ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘವು ತಿಳಿಸಿದೆ. ಆಯ್ಕೆಯಾದ ಮಳಿಮಠ ಮಾತನಾಡಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ನಿಮ್ಮ ಕಾರ್ಯಗಳನ್ನು ಮಾಡುತ್ತೇನೆ. ರಾಜ್ಯ ಸರ್ಕಾರದಿಂದ ಪ್ರೌಢಶಾಲಾ ಶಿಕ್ಷಕರಿಗೆ ಸಿಗಬೇಕಾದ ಹಲವು ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ವಿರೋಧವಾಗಿ ಎಲ್ಲ ಶಿಕ್ಷಕರು ಆಯ್ಕೆ ಮಾಡಿದ್ದರಿಂದ ನನ್ನ ಜವಾಬ್ದಾರಿಗಳು ಹೆಚ್ಚಾಗಿವೆ. ನಿಮ್ಮ ಋಣ ತೀರಿಸುವ ಕಾರ್ಯವನ್ನು ಮಾಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಎ.ಎಸ್. ಥೋರತ್, ಬಿ.ಎಂ. ಲಮಾಣಿ, ಎಂ.ಬಿ. ಹೊಸಮನಿ, ಕೆ.ಎ. ಬಳಿಗೇರ, ಎಂ.ಎ. ಮಕಾನದಾರ, ಜಿ.ಡಿ. ಈರಕ್ಕನವರ, ಎಚ್.ಎಫ್. ನದಾಫ, ಜೆ.ಎಸ್. ರಾಮಶೆಟ್ರ, ಎಚ್.ಬಿ. ರಡ್ಡೇರ, ಸಿ.ಜಿ. ಹಿರೇಮಠ, ಎಂ.ಡಿ.ತಳ್ಳಳ್ಳಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

