ಮರಳು ಸಾಗಾಟ ಅವ್ಯಾಹತ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ. 8
ತಾಲೂಕಿನ ಅಂಕಲಿ, ಗೋವನಕೊಪ್ಪ, ಕೋಗನೂರ ಗ್ರಾಮಗಳ ಮಧ್ಯ ಇರುವ ಹಳ್ಳದಲ್ಲಿ ಯಾಂತ್ರೀಕೃತ ದೋಣಿ ಮತ್ತು ಹಿಟಾಚಿ ಬಳಸಿ ಮರಳು ಎತ್ತುತ್ತಿದ್ದು, ದೋಣಿಗಳಿಂದ ಸೋರಿಕೆಯಾಗಿರುವ ಸೀಮೆ ಎಣ್ಣೆ, ಆಯಿಲ್ ಮಿಶ್ರಣಗೊಂಡು ನೀರು ಪೂರ್ಣ ಕಲುಷಿತಗೊಳ್ಳುವ ಎಲ್ಲ ಲಕ್ಷಣಗಳು ಕಾಣುತ್ತಿದ್ದು, ತಾಲೂಕು ಆಡಳಿತ, ಲೋಕೋಪಯೋಗಿ ಇಲಾಖೆ ಮಾತ್ರ ಯಾವುದೂ ನಡೆದೆ ಇಲ್ಲ ಎಂಬಂತೆ ಕುಳಿತಿರುವುದು ಸಂಶಯಕ್ಕೆ ಕಾರಣವಾಗಿದೆ.
ರೈತರ ಗೋಳು ತಪ್ಪುತ್ತಿಲ್ಲ: ಈ ಮೂರು ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಕ್ಕೆ ಹೊಂದಿಕೊಂಡಿರುವ ಸುಮಾರು 200 ಎಕರೆ ಜಮೀನುಗಳಿಗೆ ಇದೇ ನೀರು ಬಳಕೆ ಮಾಡಿಕೊಂಡು ನೀರಾವರಿ ಬೆಳೆ ತೆಗೆಯುತ್ತಿದ್ದು, ಸದ್ಯ ಅಕ್ರಮವಾಗಿ ಹಳ್ಳದಲ್ಲಿಯ ಮರಳು ಸಾಗಿಸುತ್ತಿದ್ದು, ಹೊಲದಲ್ಲಿ ರೈತರು ಹಾಕಿಸಿದ ಕೊಳವೆಬಾವಿಗಳು ಬತ್ತುತ್ತಿವೆ. ಸರಿಯಾದ ಸಮಯಕ್ಕೆ ಮಳೆ ಬಾರದೇ ಇದ್ದುದರಿಂದ ಅಲ್ಪ ಪ್ರಮಾಣದ ಹಳ್ಳದ ನೀರನ್ನೇ ಬಳಕೆ ಮಾಡಿಕೊಂಡು ಗೋವಿನಜೋಳ, ಹತ್ತಿ, ಈರುಳ್ಳಿ ಬೆಳೆ ಹಾಕಿದ್ದು, ಒಣಗಲಾರಂಭಿಸಿದೆ.
ಹೊಸ ಮರಳು ನೀತಿ ಜಾರಿಯಾಗಿಲ್ಲ: ಅಕ್ರಮ ಮರಳು ಮಾಫಿಯಾದಿಂದ ನದಿ, ಹಳ್ಳ ನೀರಿಲ್ಲದೇ ಬತ್ತಿ ಹೋಗುತ್ತಿದೆ. ಇದರಿಂದ ಜಾನುವಾರುಗಳಿಗೆ, ಸುತ್ತಲಿನ ಗ್ರಾಮಗಳ ಜನರಿಗೆ ಕುಡಿಯುವ ನೀರಿಗೆ ತತ್ವಾರ ಬಂದಿದೆ. ಮರಳು ಸಾಗಣೆ ಮಾಡಬಾರದೆಂದು ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಈ ಭಾಗದಲ್ಲಿ ಹಗಲು, ರಾತ್ರಿ ಎನ್ನದೇ ಅಕ್ರಮ ಮರಳು ಸಾಗಾಟ ಮಾತ್ರ ಜೋರಾಗಿಯೇ ನಡೆಯುತ್ತಿದೆ. ನಿತ್ಯ ನೂರಾರು ಲಾರಿಗಳು ತಹಸೀಲ್ದಾರ್ ಕಾರ್ಯಾಲಯ ಹಾಗೂ ಲೋಕೋಪಯೋಗಿ ಇಲಾಖೆ ಎದುರುಗಡೆಯಿಂದಲೇ ಮರಳನ್ನು ಹೊತ್ತೊಯ್ಯುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ದಿನವಹಿ ಲಕ್ಷಾಂತರ ರು. ನಷ್ಟವಾಗುತ್ತಿದೆ.
ಸರ್ಕಾರ ಜಾರಿಗೆ ತಂದಿರುವ ಹೊಸ ಮರಳು ನೀತಿ ಮಾತ್ರ ಜಾರಿಯಾಗಿಲ್ಲ. ಹಳ್ಳಕ್ಕೆ ಹೊಂದಿಕೊಂಡಿರುವ ಹತ್ತಾರು ಎಕರೆ ರೈತರ ಜಮೀನಿನಲ್ಲಿಯೇ ಮರಳು ಸಾಗಾಣಿಕೆ ತಾತ್ಕಾಲಿಕ ರಸ್ತೆ ನಿರ್ಮಿಸಿಕೊಂಡಿದ್ದು, ಯಾವೊಬ್ಬ ಅಧಿಕಾರಿಯೂ ಇತ್ತ ತಿರುಗಿ ನೋಡುತ್ತಿಲ್ಲ. ಇದರಿಂದ ರಾಷ್ಟ್ರೀಯ ಸಂಪತ್ತಿಗೆ ಆಪತ್ತು ಎದುರಾಗಿದೆ. ಪ್ರಕೃತಿ ದತ್ತವಾಗಿ ಹರಿಯುತ್ತಿರುವ ಹಳ್ಳಕ್ಕೆ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಹಳ್ಳದಲ್ಲಿ ನೀರು ಹರಿಯದೇ ತಗ್ಗು ಗುಂಡಿಗಳಲ್ಲಿ ನಿಂತು ಸಂಪೂರ್ಣ ಕಲುಷಿತಗೊಂಡಿದೆ.
ತಾಲೂಕಿನ ಬಹುತೇಕ ಭಾಗಗಳಲ್ಲಿ ಕಬ್ಬಿಣದ ಅದಿರಿನಂತೆ ಮರಳಿನ ಲೂಟಿ ನಿತ್ಯ ನಿರಂತರ ನಡೆದಿದ್ದು, ತಾಲೂಕು ಆಡಳಿತ, ಲೋಕೋಪಯೋಗಿ ಇಲಾಖೆ, ಪೊಲೀಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮೌನವಹಿಸಿರುವುದು ಏಕೆ? ಎಲ್ಲ ಕಡೆಗಳಲ್ಲಿಯೂ ಮರಳು ನೀತಿ ಹೇರಿ ಮರಳು ಮಾಫಿಯಾ ತಡೆಗಟ್ಟಿದ್ದರೂ ತಾಲೂಕಿನಲ್ಲಿ ಎಗ್ಗಿಲ್ಲದೆ ಮರಳು ಲೂಟಿ ನಡೆದಿದ್ದು, ಇದಕ್ಕೆ ಯಾರ ಕುಮ್ಮಕ್ಕು ಇದೆ ಎಂದು ಸಾರ್ವಜನಿಕರಿಗೆ ಪ್ರಶ್ನೆ ಎದುರಾಗಿದೆ.
ಪ್ರತಿಭಟನೆಯ ಎಚ್ಚರಿಕೆ
ತಕ್ಷಣ ಅಧಿಕಾರಿಗಳು ಮರಳು ಸಾಗಾಟ ತಡೆಯದೇ ಇದ್ದಲ್ಲಿ ಲೋಕೋಪಯೋಗಿ ಕಾರ್ಯಾಲಯದೆದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತರಾದ ಮಾರುತಿ ದಾಸರ, ಗುಡ್ಡಪ್ಪ ಕಬ್ಬೇರಳ್ಳಿ, ನಿಂಗಪ್ಪ ಕಬ್ಬೇರಳ್ಳಿ, ಕಲ್ಲಪ್ಪ ಹೂಗಾರ, ಸುರೇಶ ಹೂಗಾರ, ಮಮ್ಮದಹನೀಫ ನದಾಫ, ಫಕೀರೇಶ ಗೊರವರ, ಕೋಟೆಪ್ಪ ಕಬ್ಬೇರಳ್ಳಿ ಎಚ್ಚರಿಕೆ ನೀಡಿದ್ದಾರೆ.
ಮನವಿಗೆ ಸ್ಪಂದಿಸಿಲ್ಲ
ಸೋಮವಾರ ಆ. 5ರಂದು ಅಂಕಲಿ, ಗೋವನಕೊಪ್ಪ, ಕೋಗನೂರ ಗ್ರಾಮಗಳ ರೈತರು ಹಳ್ಳದಲ್ಲಿ ಯಾವುದೇ ಇಲಾಖೆಯ ಪರವಾನಗಿ ಇಲ್ಲದೇ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದಾರೆ. ಇದರಿಂದ ರೈತರ ಬೆಳೆಗಳಿಗೆ, ಜಾನುವಾರುಗಳಿಗೆ ನೀರಿನ ತೊಂದರೆಯಾಗುತ್ತಿದೆ. ತಕ್ಷಣ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಮರಳು ಸಾಗಾಟ ತಡೆಯುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರೂ ತಹಸೀಲ್ದಾರ್ ಸ್ಪಂದಿಸಿಲ್ಲ ಎಂದು ಕೋಗನೂರ ಗ್ರಾ.ಪಂ. ಅಧ್ಯಕ್ಷ ಮುದಕಪ್ಪ ಸೂರಣಗಿ, ಭೀಮಪ್ಪ ಇಮ್ಮಡಿ, ದೇವಪ್ಪ ಹೂಗಾರ ಆರೋಪಿಸಿದ್ದಾರೆ.
- ಮಹದೇವಪ್ಪ ಎಂ. ಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

