ರೊಟ್ಟಿ ಪಂಚಮಿಗೆ ತರಕಾರಿ ಬಿಸಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 8
ನಾಗರಪಂಚಮಿ ನಾಡಿಗೆ ದೊಡ್ಡ ಹಬ್ಬ. ಪಂಚಮಿ ಹಬ್ಬ ಬಂದರೆ ಸಾಕು ಹಬ್ಬಗಳು ಸಾಲುಗಟ್ಟಿ ಬರಲು ಪ್ರಾರಂಭವಾಗುತ್ತದೆ. ಇದೀಗ ಪಂಚಮಿ ಹಬ್ಬ ಬಂದಿದ್ದು, ಹಬ್ಬದ ಮೊದಲ ದಿನವಾದ ಶುಕ್ರವಾರ ರೊಟ್ಟಿ ಪಂಚಮಿ ನಡೆಯಲಿದೆ. ಜನರಿಗೆ ರೊಟ್ಟಿ ಪಂಚಮಿಗೆ ತರಕಾರಿ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ರೊಟ್ಟಿ ಪಂಚಮಿಯಲ್ಲಿ ಜೋಳದ ರೊಟ್ಟಿ, ಸಜ್ಜಿರೊಟ್ಟಿ, ಚಪಾತಿ ಹಾಗೂ ವಿವಿಧ ತರಕಾರಿಗಳ ಪಲ್ಯ ಹಾಗೂ ಸೊಪ್ಪುಗಳಿಂದ ಕೂಡಿದ ಪಚಡಿ ಮತ್ತು ಹೆಸರು, ಮಡಿಕೆ, ಅಲಸಂದಿ ಕಾಳಿನ ಪಲ್ಯ ಮಾಡುವುದು ಈ ರೊಟ್ಟಿ ಹಬ್ಬದ ವಿಶೇಷ.
5-6 ತಿಂಗಳಿನಿಂದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಇದೀಗ ಪಂಚಮಿ ಹಬ್ಬಕ್ಕೆ ಎಲ್ಲರಿಗೂ ಅವಶ್ಯವಿರುವುದರಿಂದ ತರಕಾರಿ ಬೆಲೆ ಇನ್ನಷ್ಟು ಹೆಚ್ಚಿದೆ. ಗ್ರಾಹಕರು ತರಕಾರಿ ಬೆಲೆ ಕೇಳಿ ದಂಗಾಗುತ್ತಿದ್ದಾರೆ.
ಗಗನಕ್ಕೇರಿದ ತರಕಾರಿ ಬೆಲೆ: ಒಂದು ಕೆಜಿ ಟೊಮೆಟೋ ಬೆಲೆ ರು. 40, ಒಂದು ಕೆಜಿ ಸೌತೆಕಾಯಿ ರು. 60, ಒಂದು ಕೆಜಿ ಹಿರೇಕಾಯಿ ರು. 50, ಒಂದು ಕೆಜಿ ಬೆಂಡೆಕಾಯಿ ರು. 60, ಒಂದು ಕೆಜಿ ಹಸಿ ಮೆಣಸಿನಕಾಯಿ ರು. 80, ಒಂದು ಕೆಜಿ ಉಳ್ಳಾಗಡ್ಡಿ ರು. 45 ರಿಂದ 50, ಒಂದು ಕೆಜಿ ಆಲೂಗಡ್ಡೆ ರು. 20, ಕಾಲಿಫ್ಲಾವರ್ ರು. 30, ಬೀಟ್ರೂಟ್ 60, ಕೋಸ್ಗಡ್ಡೆ 40, ಗಜ್ಜರಿ 60, ಹೀಗೆ ಎಲ್ಲ ತರಕಾರಿಗಳ ಬೆಲೆಯೂ ನೂರಕ್ಕೆ ಹತ್ತಿರವಾಗಿಯೇ ಇದೆ. ಅದಕ್ಕಾಗಿ ವ್ಯಾಪಾರಸ್ಥರು ಕೆಜಿ ದರದ ಬದಲು ಕಾಲು ಕೆಜಿ ದರವನ್ನೇ ಹೇಳುತ್ತಾರೆ.
ಈ ಹಬ್ಬಕ್ಕೆ ತರಕಾರಿಯಷ್ಟೇ ಸೊಪ್ಪುಗಳ ಅವಶ್ಯಕತೆಯೂ ಇದೆ. ಒಂದು ಕಟ್ಟು ಸಬ್ಬಸಗಿ ರು. 5, ಒಂದು ಕಟ್ಟು ಮೆಂತೆ ರು. 5, ಒಂದು ಮೂಲಂಗಿ ರು. 5, ಒಂದು ಪುಂಡೀಪಲ್ಯಸಿವುಡು ರು. 5, ಕೊತ್ತಂಬರಿ, ಕರಿಬೇವು ಅಲ್ಲ ಸೇರಿದಂತೆ ಸೊಪ್ಪುಗಳ ಬೆಲೆಯೂ ಸಾಕಷ್ಟು ಹೆಚ್ಚಿದೆ. ಅಲ್ಲದೇ ಹೆಸರು, ಮಡಿಕೆಗಳ ದರವೂ ಹೆಚ್ಚಿದೆ.
ಮಂಕಾದ ತರಕಾರಿ ಮಾರುಕಟ್ಟೆ: ತರಕಾರಿಗಳ ಬೆಲೆ ಏರಿಕೆಯಿಂದ ಗ್ರಾಮೀಣ ಭಾಗದ ಗ್ರಾಹಕರ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ. ಗ್ರಾಹಕರಿಂದ ತುಂಬಿ ತುಳುಕಬೇಕಾಗಿದ್ದ ತರಕಾರಿ ಮಾರುಕಟ್ಟೆ ಅಷ್ಟೊಂದು ಗದ್ದಲವಿಲ್ಲ. ಹರಾಜಿನಲ್ಲಿ ಸಾಕಷ್ಟು ಹೆಚ್ಚಿನ ದರದಲ್ಲಿ ತರಕಾರಿ ತೆಗೆದುಕೊಂಡು ವ್ಯಾಪಾರವಿಲ್ಲದೇ ಸಾಕಷ್ಟು ಹಾನಿಯನ್ನು ಅನುಭವಿಸಬೇಕಾಗಿದೆ.
ಗ್ರಾಮೀಣ ಭಾಗದಲ್ಲಿ ಪಂಚಮಿ ಹಬ್ಬ ಹಾಗೂ ರೊಟ್ಟಿ ಹಬ್ಬವನ್ನು ಹೆಚ್ಚಿನ ಪ್ರಮಾಣದಲ್ಲಿ ಆಚರಿಸುವುದರಿಂದ ಅವರು ಬಂದರೆ ಮಾತ್ರ ಮಾರುಕಟ್ಟೆಯಲ್ಲಿ ಹೆಚ್ಚು ತರಕಾರಿ, ಸೊಪ್ಪು ಮಾರಾಟವಾಗುತ್ತವೆ ಎಂದು ತರಕಾರಿ ವ್ಯಾಪಾರಸ್ಥ ಕೆ. ಮಾರುತಿ ತಿಳಿಸಿದರು.
-ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

