ಸಗಣಿ ಎರಚಿ ಪಂಚ್ಮಿ
ಕನ್ನಡಪ್ರಭ ವಾರ್ತೆ, ಗದಗ, ಆ. 13
ಗದಗ ಗಂಗಾಪುರ ಪೇಟೆಯಲ್ಲಿರುವ ಕುಂಬಾರ ಓಣಿಯಲ್ಲಿ ಪ್ರತಿ ವರ್ಷದಂತೆ ನಾಗರಪಂಚಮಿ ಮರುದಿನ(ಕೆರೆಕಟಾಂಬ್ಲಿ)ದಂದು ಹಲವಾರು ದಶಕಗಳಿಂದ ಯುವಕರು ಪರಸ್ಪರ ಸಗಣಿ ಎರಚುವ ವಿಶೇಷ ಆಟವನ್ನು ಆಡುತ್ತಿದ್ದಾರೆ.
ಇದು ನೋಡುಗರಿಗೆ ಉಲ್ಲಾಸ ಹಾಗೂ ಉತ್ಸಾಹಕ್ಕೆ ಕಾರಣವಾದರೂ ಇದರಿಂದ ಸಾಕಷ್ಟು ವೈಜ್ಞಾನಿಕ ಮತ್ತು ಕೃಷಿ, ಹೈನುಗಾರಿಕೆ ಉತ್ತೇಜಿಸುವ ಹಿನ್ನೆಲೆಯಲ್ಲಿ ಈ ಆಚರಣೆಯನ್ನು ಇಲ್ಲಿಯ ಜನ ನಡೆಸುತ್ತಾ ಬಂದಿದ್ದಾರೆ. ಈ ವರ್ಷದ ನಾಗರಪಂಚಮಿಯ ಸಗಣಿ ಎರಚುವ ಆಟವು ಮಂಗಳವಾರ ಸಂಜೆ ಕುಂಬಾರ ಓಣಿಯಲ್ಲಿ ಜನರು ಅತಿ ಉತ್ಸಾಹದಿಂದ ಆಡಿದರು.
ಪ್ರಾರಂಭದಲ್ಲಿ ಗಂಗಾಪುರ ಪೇಟೆಯ ದುರ್ಗಾದೇವಿ ದೇವಸ್ಥಾನ ಹಾಗೂ ಕುಂಬಾರ ಓಣಿಯ ಹನಮಂತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ತರಕಾರಿ ಮಾಲೆ: ಹಬ್ಬದ ಪೂರ್ವದಲ್ಲಿ ತಿಂಗಳ ಮುಂಚೆಯೇ ಸಗಣಿ ಎರಚಾಟಕ್ಕೆ ನಗರದಲ್ಲಿ ಯುವಕರು ತಂಡ-ತಂಡವಾಗಿ ಮನೆಗೆ ತೆರಳಿ ಅವರಿಂದ ಸಗಣಿ ಸಂಗ್ರಹಿಸಿಕೊಂಡು ಬರುತ್ತಾರೆ. ನಂತರ ನಾಗರ ಪಂಚಮಿಯ ಹುತ್ತ ಮುರಿಯುವ ದಿನ ಗಂಗಾಪುರ ಪೇಟೆಯ ಯುವಕರು ಎರಡು ತಂಡ ರಚಿಸಿಕೊಂಡು ತೋಟದಲ್ಲಿ ಕೊರಳಲ್ಲಿ ಬದನೆಕಾಯಿ, ಸೌತೆಕಾಯಿ, ಈರುಳ್ಳಿ, ಟೊಮಾಟೋ ಸೇರಿದಂತೆ ವಿವಿಧ ತರಕಾರಿ ಮಾಲೆ, ಮೈ ತುಂಬಾ ವೇಷಭೂಷಣವನ್ನು ಸಿಂಗರಿಸಿಕೊಂಡು, ಪೂಜೆಗಾಗಿ 6 ಜನ ಗಂಡು ಹಾಗೂ 6 ಜನ ಹೆಣ್ಣು ವೇಷಧಾರಿಗಳಾಗಿ ಪಾಲ್ಗೊಳ್ಳುವುದು ವಿಶೇಷ.
ಗಂಗಾಪುರ ಪೇಟೆಯ ಉದ್ದದ ರಸ್ತೆಯಲ್ಲಿ ಅಲ್ಲಲ್ಲಿ ಸಗಣಿಯನ್ನು ಕೈಯಲ್ಲಿ ಹಿಡಿದುಕೊಂಡು ಪರಸ್ಪರ ಎರಚಾಡಿದ್ದರಿಂದ ಯುವಕರ ಬಟ್ಟೆ, ಮುಖದ ತುಂಬೆಲ್ಲ ಸಗಣಿಯಿಂದಲೇ ತುಂಬುತ್ತದೆ. ಇದಾವುದನ್ನು ಲೆಕ್ಕಿಸದ ಯುವಕರು ಸಂಗ್ರಹಿಸಿದ ಸಗಣಿ ಮುಗಿಯುವವರೆಗೂ ಎರಚಾಡಿ ಸಂಭ್ರಮಿಸುತ್ತಾರೆ. ಈ ಮೋಜಿನ ಆಟ ಈ ಓಣಿಯಲ್ಲಿ 150ಕ್ಕೂ ಹೆಚ್ಚು ವರ್ಷಗಳಿಂದ ನಡೆದುಕೊಂಡು ಬಂದಿದೆ ಎನ್ನಲಾಗಿದೆ. ಈ ಆಟಕ್ಕೆ ಹಲವರು ಹಲವಾರು ಅರ್ಥ ಹೇಳುತ್ತಾರೆ.
ಚರ್ಮ ರೋಗ ಮಾಯ: ಇದಕ್ಕೆ ವೈಜ್ಞಾನಿಕ ಹಿನ್ನೆಲೆ ಇದ್ದು, ಸಗಣಿಗೆ ಹಲವಾರು ರೀತಿಯ ಚರ್ಮರೋಗಗಳನ್ನು ಹೊಡೆದೋಡಿಸುವ ಶಕ್ತಿ ಇದೆ. ಹೀಗಾಗಿ ವರ್ಷದಲ್ಲಿ ಒಂದು ಬಾರಿ ಸಗಣಿಯಲ್ಲಿ ಮಿಂದೆದ್ದಲ್ಲಿ ಯಾವುದೇ ಚರ್ಮ ರೋಗಗಳು ಕಾಡುವುದಿಲ್ಲ ಎನ್ನುವ ವಾದ ಒಂದೆಡೆ.
ಕೃಷಿಗೆ ಉತ್ತೇಜನ: ಈ ಭಾಗದಲ್ಲಿ ಹೆಚ್ಚಾಗಿ ಕೃಷಿ ಕುಟುಂಬಗಳೇ ವಾಸಿಸುವುದರಿಂದ ಕೃಷಿಗೆ ಮತ್ತಷ್ಟು ಉತ್ತೇಜನ ದೊರೆಯಲಿ ಮತ್ತು ನಾಗರಪಂಚಮಿ ಅಂಗವಾಗಿ ಮೋಜಿನ ಆಟದ ಜತೆಗೆ ಯುವಕರು ಸಗಣಿ ಎಂದರೆ ಅದೊಂದು ಗಲೀಜು ಎನ್ನುವ ಭಾವನೆ ದೂರವಾಗಿಸುವ ನಿಟ್ಟಿನಲ್ಲಿ ಇಂಥ ಆಚರಣೆಗೆ ಚಾಲನೆ ನೀಡಿದ್ದಾರೆ ಎನ್ನುವುದು ಮತ್ತೊಂದು ವಾದವಾಗಿದೆ. ಒಟ್ಟಿನಲ್ಲಿ ಪರಸ್ಪರ ಸಗಣಿ ಎರಚಾಟ ಮಾತ್ರ ನೆರೆದಿದ್ದ ಸಾವಿರಾರು ಸಾರ್ವಜನಿಕರಿಗೆ ಖುಷಿಯನ್ನು ನೀಡಿತು.
ಈ ಸಂದರ್ಭದಲ್ಲಿ ಅರುಣ ಬೆಳದಡಿ, ಮಾಂತೇಶ ಹಾದಿಮನಿ, ಮಲ್ಲೇಶ ಕೊರ್ಲಹಳ್ಳಿ, ಮಾರುತಿ ಮುದಕಟ್ಟಿ, ಈರಪ್ಪ ಲತವಾರ, ಹನಮಂತ ಜಡಿ, ಕಾರ್ತಿಕ ಬೆಳದಡಿ, ಅನಿಲ ಲತವಾರ, ಜಗನ್ನಾಥ ಕಲಾಲ, ರಾಜು ಚಾರ್ಲಿ, ಶಿವಾನಂದ ಕುಂಬಾರ ಸೇರಿದಂತೆ ಓಣಿಯ ಹಿರಿಯರು ಯುವಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

