ಇಂದು ಸಚಿವ ಎಚ್ಕೆ ಜನ್ಮದಿನ
ಗದಗ: ಸಚಿವ ಎಚ್.ಕೆ. ಪಾಟೀಲರ 60ನೇ ಹುಟ್ಟು ಹಬ್ಬದ ಅಂಗವಾಗಿ ಗದಗ ವಿಧಾನಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಘಟಕದಿಂದ ಆ. 15ರ ಮಧ್ಯಾಹ್ನ 12.30ಕ್ಕೆ ಮಾತ್ರೋಮಿಲನ ಅನಾಥಾಶ್ರಮ, ನೀಲಮ್ಮತಾಯಿ ಮಠದ ಹತ್ತಿರ ಹುಡ್ಕೋ ಕಾಲನಿ ಆಶ್ರಮದ 25 ಅನಾಥ ಮಕ್ಕಳಿಗೆ ಬಟ್ಟೆ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವ ಕಾಂಗ್ರೆಸ್ನ ಗದಗ ವಿಧಾನ ಸಭಾ ಮತಕ್ಷೆತ್ರದ ಪ್ರಧಾನ ಕಾರ್ಯದರ್ಶಿ ಆಂಜನೇಯ ಕಟಗಿ ತಿಳಿಸಿದ್ದಾರೆ.
ಇಸ್ಪಿಟ್: 8 ಜನರ ಬಂಧನ
ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಪಂಪ್ ಸರ್ಕಲ್ ಹತ್ತಿರ ಇರುವ ಮೃತ್ಯುಂಜಯ ಗುರುಶಿದ್ದಯ್ಯ ಹಿರೇಮಠ ಅವರ ಮನೆಯಲ್ಲಿ ಇಸ್ಪಿಟ್ ಜೂಜಾಟವಾಡುತಿದ್ದ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ನಿವಾಸಿಗಳಾದ ಮೃತ್ಯುಂಜಯ್ಯ ಹಿರೇಮಠ, ನಿತ್ಯಾನಂದ ಶೆಟ್ಟಿ, ರುದ್ರಪ್ಪ ಸಂಶಿ, ರಾಜು ಹತ್ತಿ, ಯಲ್ಲಪ್ಪ ಅಣ್ಣಿಗೇರಿ, ರಮೇಶ ಮೇದೂರ, ಈಶ್ವರ ಗದಗ, ಜಮಾಲಸಾಬ ನಧಾಪ್ ಬಂಧಿತ ಆರೋಪಿಗಳು. ಬಂಧಿತರಿಂದ ರು. 9620, ಏಳು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ: ಓರ್ವನ ಬಂಧನ
ಗದಗ: ಬೆಟಗೇರಿಯ ಟರ್ನಲ್ ಪೇಟೆಯ ಜಕಾತಿ ಕಟ್ಟೆಯ ಹತ್ತಿರ ಮಟ್ಕಾ ನಂಬರ್ ಬರೆದುಕೊಳ್ಳುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ನಿವಾಸಿ ದಾಂಡುಸಾ ನಾರಾಯಣಸಾ ಮೇರವಾಡೆ(64) ಬಂಧಿತ ಆರೋಪಿ. ಬಂಧಿತರಿಂದ ರು. 6500, ಮಟ್ಕಾ ನಂಬರ್ ಬರೆದ ಚೀಟಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ಗದಗ: ಮನೆಯವರು ಸಾರಾಯಿ ಕುಡಿಯ ಬೇಡ ಎಂದು ಬುದ್ಧಿಮಾತು ಹೇಳಿದ್ದಕ್ಕೆ ಮಾನಸಿಕ ಮಾಡಿಕೊಂಡು ವ್ಯಕ್ತಿಯೋರ್ವನು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ-ಮೇವುಂಡಿ ಗ್ರಾಮದ ಹತ್ತಿರದ ಹೊಲವೊಂದರಲ್ಲಿ ನಡೆದಿದೆ. ಮೃತನನ್ನು ಕಲಕೇರಿ ಗ್ರಾಮದ ನಿವಾಸಿ ವೀರಭದ್ರಯ್ಯ ಈಶ್ವರಯ್ಯ ಹೆಸರೂರಮಠ ಎಂದು ಗುರುತಿಸಲಾಗಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕರ್ಷಕ ರ್ಯಾಲಿ
ಗಜೇಂದ್ರಗಡ: ಜನ ವಿರೋಧಿ ಜಾಗತಿಕರಣ ನೀತಿ ಹಿಮ್ಮೆಟ್ಟಿಸಿ ಸ್ವಾತಂತ್ರ್ಯದ ಆಶಯಗಳನ್ನು ಉಳಿಸಬೇಕೆಂದು ಡಿವೈಎಫ್ಐ ಮತ್ತು ಎಸ್ಎಫ್ಐ ನಗರ ಸಮಿತಿ ವತಿಯಿಂದ ಬುಧವಾರ ಯುವ ಜನರ ಆಕರ್ಷಕ ರ್ಯಾಲಿ ನಡೆಸಿ ಒತ್ತಾಯಿಸಿದರು.
ಬಳಿಕ ಶ್ರೀ ಕಟ್ಟಿ ಬಸವೇಶ್ವರ ರಂಗಮಂದಿರದಲ್ಲಿ ನಡೆದ ಸಮಾರೋಪ ಸಭೆಯನ್ನು ಉದ್ದೇಶಿಸಿ ಸಮುದಾಯ ಸಂಘಟನೆ ರಾಜ್ಯ ಅಧ್ಯಕ್ಷ ಆರ್.ಕೆ. ಹುಡುಗಿ ಮಾತನಾಡಿ, ಸ್ವಾತಂತ್ರ್ಯದ ಪ್ರಜಾ ಪ್ರಭುತ್ವದ ಸ್ಥಾಪನೆಗಾಗಿ ಲಕ್ಷಾಂತರ ಜನ ಪ್ರಣಾರ್ಪಣೆ ಮಾಡಿದ ಫಲವಾಗಿ ಸಿಕ್ಕ ಸ್ವಾತಂತ್ರ್ಯವನ್ನು ರಾಷ್ಟ್ರದ ಪ್ರತಿ ಪ್ರಜೆಗೂ ಲಭಿಸಬೇಕು. ಆದರೆ, ದುರಾದೃಷ್ಟ ಆಳುವ ಸರ್ಕಾರಗಳು ಸ್ವಾರ್ಥಕ್ಕಾಗಿ ಬಹು ರಾಷ್ಟ್ರೀಯ ಕಂಪನಿಗಳನ್ನು ದೇಶದೊಳಕ್ಕೆ ಪ್ರವೇಶಿಸಿ ದೇಶೀಯ ಜನರ ಬದುಕಿಗೆ ಬರೆ ಎಳೆದ ಪರಿಣಾಮ ಸ್ವಾತಂತ್ರ್ಯ ಲಭಿಸಿ ಆರು ದಶಕ ಗತಿಸಿದರೂ ನಿರೂದ್ಯೋಗ, ಆಹಾರ, ಜತೆಗೆ ಮೂಲ ಸೌಲಭ್ಯದಂತಹ ಸಂಕಷ್ಟಗಳನ್ನು ಎದುರಿಸಬೇಕಾಗಿದೆ ಎಂದು ದೂರಿದರು. ಪುರಸಭಾ ಸದಸ್ಯ ಎಂ.ಎಸ್. ಹಡಪದ, ಎಸ್ಎಫ್ಐ ಜಿಲ್ಲಾ ಮುಖಂಡರಾದ ಪೀರು ರಾಠೋಡ, ಬಾಲು ರಾಠೋಡ, ಡಿವೈಎಫ್ಐನ ಬಸವರಾಜ ಶೀಲವಂತರ ಮಾತನಾಡಿದರು. ಇದಕ್ಕೂ ಮುನ್ನ ಛದ್ಮ ವೇಷ ತೊಟ್ಟ ಪಟ್ಟಣದ ವಿವಿಧ ಶಾಲೆಯ ನೂರಾರು ವಿದ್ಯಾರ್ಥಿಗಳು ಎಸ್.ಎಂ. ಭೂಮರಡ್ಡಿ ಕಾಲೇಜ ಮೈದಾನದಿಂದ ಕುಷ್ಟಗಿ ರಸ್ತೆ, ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ದುರ್ಗಾ ವೃತ್ತ, ಬಸವೇಶ್ವರ ವೃತ್ತದ ಮೂಲಕ ಕಟ್ಟಿ ಬಸವೇಶ್ವರ ರಂಗಮಂದಿರ ತಲುಪಿದರು. ಛದ್ಮ ವೇಷ ತೊಟ್ಟು ರಾಷ್ಟ್ರ ನಾಯಕರಾದ ವೀರ ಸಂಗೋಳ್ಳಿ ರಾಯಣ್ಣ, ಭಗತ್ ಸಿಂಗ್, ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರು ಅವರಂತಹ ವೇಷ ತೊಟ್ಟ ವಿದ್ಯಾರ್ಥಿಗಳು ಜನಮನ ಸೇಳೆದರು. ಮಾರುತಿ ಚಿಟಗಿ, ಬಾಲಕೃಷ್ಣ ಜಾಡಬಂಡಿ, ಶಿವು ಚವ್ಹಾಣ, ಎಂ.ಬಿ. ಸೊಂಪುರ, ಕುಬೇರ ಅಜಮೀರ, ಶ್ರೀಧರ ಮಲಕೋಜಿ, ಮಾನು ಡಿ.ಆರ್., ಫಯಾಜ ತೋಟದ, ಶಿವಾಜಿ ಗಡ್ಡದ, ಪ್ರಕಾಶ ಹೆಳವರ, ಆರ್.ಡಿ. ಮಾನು, ಕವಿತಾ ಬಂಕದ ಮುಂತಾದವರು ಹಾಜರಿದ್ದರು.
ನೀರು ಪೂರೈಕೆ ವ್ಯತ್ಯಯ
ಗದಗ: ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಸರಬರಾಜು ಮಾಡುವ ಕೋರ್ಲಹಳ್ಳಿ ಯಂತ್ರಗಾರದ ರೈಜಿಂಗ್ ಮೇನ್ ಕೊಳವೆಯು ಕೋರ್ಲಹಳ್ಳಿ ಹತ್ತಿರ ಮಂಗಳವಾರ ಒಡೆದಿದ್ದು, ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

